ಬೆಂಗಳೂರು: ಹಿಂದೂ ಸೇವಾಮೇಳಕ್ಕೆ 6 ಲಕ್ಷ ಜನರ ನಿರೀಕ್ಷೆ
ಬೆಂಗಳೂರು, ಡಿಸೆಂಬರ್. 08: ಸೇವಾ ಸಂಸ್ಥೆಗಳ ಸಮಾಜಮುಖಿ ಕೆಲಸಗಳನ್ನು ಜನರಿಗೆ ತಿಳಿಸಲು, ಜಾಗೃತಿ ಮೂಡಿಸಲು ಡಿಸೆಂಬರ್ 9 ರಿಂದ 13ರ ವರೆಗೆ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾಮೇಳ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಹಿಂದೂ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೌತ್ ಎಂಡ್ ವೃತ್ತದಿಂದ ನ್ಯಾಶನಲ್ ಕಾಲೇಜು ಮೈದಾನದವರೆಗೆ ಪರಿಸರ ಸಂರಕ್ಷಣೆ ಸಾರುವ ಜಾಥಾ ನಡೆಸಿದರು.[ಹಿಂದೂ ಮಹಾಸಭಾದಿಂದ ಪ್ರಣವಾನಂದ ಸ್ವಾಮೀಜಿಗೆ ಕೊಕ್]
ಸೌತ್ ಎಂಡ್ ವೃತ್ತ ದಿಂದ ಹೊರಟ ಜಾಥಾ ನಾಗಸಂದ್ರ ವೃತ್ತದ ಮಾರ್ಗವಾಗಿ ಡಿವಿಜಿ ರಸ್ತೆ ಮುಖಾಂತರ ಸಾಗಿತು. ಜಾಥಾದಲ್ಲಿ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮ್ಮೇಳನದ ಸಿದ್ಧತೆ ನೋಡಿಕೊಂಡು ಬನ್ನಿ....

ಸಮಾವೇಶಕ್ಕೆ ಭವ್ಯ ವೇದಿಕೆ
1 ಲಕ್ಷ ಚದರಡಿ ವಿಸ್ತೀರ್ಣದ ಭವ್ಯ ನಿರ್ಮಾಣ ಅಂತಿಮ ಹಂತಕ್ಕೆ ಬಂದಿದೆ. ಹಿಂದು ಧರ್ಮದ ಪ್ರಚಾರ ಮತ್ತು ಸಮಾಜ ಸೇವೆಯಲ್ಲಿ ನಿರತವಾಗಿರುವ ಪ್ರಮುಖ 175ಕ್ಕೂ ಹೆಚ್ಚು ಸಂಸ್ಥೆಗಳು 300 ಮಳಿಗೆ ತೆರೆಯಲಿದ್ದು ಜನರಿಗೆ ಮಾಹಿತಿ ಪ್ರಸಾರ ಮಾಡಲಿವೆ.

ಮಂಟಪಗಳು
ನಾಗರಿಕರಿಗೆ ಹಿಂದು ಧರ್ಮದ ಪರಂಪರೆ ತಿಳಿಸುವ ಅನುಷ್ಠಾನ ಮಂಟಪ, ಹಿಂದು ಧರ್ಮದ ಸಾಧನೆಗಳನ್ನು ಪ್ರತಿಬಿಂಬಿಸುವ ಸಾಧನಾ ಮಂಟಪಗಳು ಮೈದಾನದಲ್ಲಿ ನಿರ್ಮಾಣಗೊಂಡಿವೆ.

ಧರ್ಮದ ಕತೆ ಹೇಳುವ ಆಲದ ಮರ
ಸನಾತನ ಧರ್ಮದ ಸಂಕೇತವಾಗಿ ಆಲದಮರವೊಂದನ್ನುನ ಮೇಳದ ಅಂಗಳದಲ್ಲಿ ನಿರ್ಮಾಣ ಮಾಡಲಾಗಿದೆ. ನೈಸರ್ಗಿಕ ಮರದಂತೆ ಇದು ಕಂಡುಬರುತ್ತಿದ್ದು ಧರ್ಮದ ಅಂಶಗಳನ್ನು ಸಾರಿಹೇಳುತ್ತದೆ ಎಂದು ಉಸ್ತುವಾರಿ ವಹಿಸಿಕೊಂಡಿದ್ದ ಕೃಷ್ಣ ಮಾಹಿತಿ ನೀಡಿದರು.

ಪ್ರತಿದಿನ ವಿಚಾರ ಸಂಕಿರಣ
ನ್ಯಾಷನಲ್ ಕಾಲೇಜು ಆಡಿಟೋರಿಯಂನಲ್ಲಿ ಮೇಳದ ದಿನಗಳಂದು ಪ್ರತಿ ಸಂಜೆ ವಿಚಾರಸಂಕಿರಣ ನಡೆಯಲಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು, ಮಠಾಧೀಶರು ಭಾಗವಹಿಸಲಿದ್ದಾರೆ.

ಸಮಾವೇಶದ ಪ್ರಮುಖ ಉದ್ದೇಶವೇನು?
ಮಕ್ಕಳಿಗೆ ಅಧ್ಯಾತ್ಮ, ಸಂಸ್ಕಾರ ಶಿಕ್ಷಣ ರಾಷ್ಟ್ರಭಕ್ತಿ ಜಾಗೃತಿ, ವನ ಹಾಗೂ ವನ್ಯಜೀವಿ ಸಂರಕ್ಷಣೆ, ಪರಿಸರ ಕಾಳಜಿ, ಮಾಲಿನ್ಯ ನಿಯಂತ್ರಣ, ಕುಟುಂಬ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು.

6 ಲಕ್ಷ ಜನ ಭಾಗಿ ನಿರೀಕ್ಷೆ
ಮೇಳಕ್ಕೆ 6 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಚೆನ್ನೈನಲ್ಲಿ ನಡೆದಾಗ 12 ಲಕ್ಷ ಜನ ಭೇಟಿ ನೀಡಿದ್ದರು. 5 ದಿನವೂ ಸಂಪ್ರದಾಯ ಮತ್ತು ಸಂಸ್ಕೃತಿ ಸಾರುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.












Click it and Unblock the Notifications