Bengaluru Weather: ಭಾನುವಾರ ನಗರ 107 ವಾರ್ಡ್‌ಗಳಲ್ಲಿ ವ್ಯಾಪಕ ಮಳೆ, ಮುನ್ಸೂಚನೆ ಏನಿದೆ?
ಬೆಂಗಳೂರು, ಡಿಸೆಂಬರ್ 01: ರಾಜಧಾನಿ ಬೆಂಗಳೂರಿಗೆ ಶನಿವಾರದಿಂದಲೇ ಸೈಕ್ಲೋನ್ 'ಫೆಂಗಲ್' ಪ್ರಭಾವ ಬೀರಿದ್ದು, ಭಾನುವಾರವು ಮಧ್ಯಾಹ್ನ ಜೋರು ಮಳೆ ಸುರಿಯಿತು. ಶನಿವಾರ ಬರೋಬ್ಬರಿ 194 ವಾರ್ಡ್‌ಗಳಲ್ಲಿ ಮಳೆ ಆದರೆ, ಇಂದು (ಡಿ.1)ರಂದು 107 ವಾರ್ಡ್‌ಗಳಲ್ಲಿ ವ್ಯಾಪಕ ಮಳೆ ಆಯಿತು ಎಂದು ಕನಾ್ಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಳೆ ವರದಿ ಮಾಹಿತಿ ನೀಡಿದೆ.
ಎರಡು ಮೂರು ದಿನಗಳಿಂದ ಬೆಂಗಳೂರಲ್ಲಿ ಸೂರ್ಯ ಮರೆಯಾಗಿದ್ದಾರೆ. ದಿನವಿಡೀ ಮಬ್ಬು ವಾತವರಣ, ಮೈಕೊರೆವ ಚಳಿ ಸೃಷ್ಟಿಯಾಗಿದೆ. ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಸಹಿತ ಸೋನೆ ಮಳೆ ಆಗುತ್ತಿತ್ತು. ಮಧ್ಯಾಹ್ನ ನೋಡ ನೋಡುತ್ತಿದ್ದಂತೆ ಅರ್ಧ ಗಂಟೆ ಕಾಲ ಬಿರುಸಿನ ಮಳೆ ಸುರಿಯಿತು. ಒಟ್ಟು 107 ವಾರ್ಡ್‌ಗಳ ಪೈಕಿ ಅತ್ಯಧಿಕ ಮಳೆ ಬೆಂಗಳೂರು ದಕ್ಷಿಣ ವಲಯದ ವಿಜಯನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ ಎಂದು ಹವಾಮಾನ ಕೇಂದ್ರ ದೃಢಪಡಿಸಿದೆ.

ಕೇವಲ ವಿಜಯನಗರ ಮಾತ್ರವಲ್ಲದೇ, ಹಂಪಿನಗರ, ನಾಯಂಹಳ್ಳಿ, ಚಾಮರಾಜಪೇಟೆ, ಲಾಲ್ ಬಾಗ್, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ, ಎಚ್‌ಎಸ್‌ಆರ್ ಬಡಾವಣೆ, ಕೋರಮಂಗಲ, ವಿದ್ಯಾರಣ್ಯಪುರ, ಆರ್‌ಆರ್ ನಗರ, ಯಶವಂತಪುರ, ಯಲಹಂಕ, ಮಾರತ್ತಹಳ್ಳಿ, ಬೆಳ್ಳಂದೂರು, ಹೀಗೆ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಆಗಾಗ ಜಿಟಿ ಜಿಟಿ ಮಳೆ, ಕೆಲವೊಮ್ಮೆ ಜೋರು ಮಳೆ ಬಿದ್ದಿದೆ. ಈ ಮಳೆ ಭಾನುವಾರ ತಡರಾತ್ರಿವರೆಗೂ ಮುಂದುವರಿಯುವ ಎಲ್ಲ ಲಕ್ಷಣಗಳು ಇದ್ದು, ಜನರು ಎಚ್ಚರಿಕೆಯಿಂದ ಓಡಾಡಬೇಕಿದೆ.
ಜಿಟಿ ಜಿಟಿ ಮಳೆಯಿಂದ ಸಂಚಾರ ಕಿರಿ ಕಿರಿ
ಈ ಜಿಟಿ ಜಿಟಿ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆ ಅಂಡರ್‌ಪಾಸ್‌ಗಳಲ್ಲಿ, ತಗ್ಗು ಪ್ರದೇಶ ಮನೆಗಳಲ್ಲಿ ನೀರು ಕಂಡು ಬಂತು. ಸಂಚಾರ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಉಂಟಾಯಿತು. ಮಳೆ ಹಾಗೂ ಸೈಕ್ಲೋನ್ ಪ್ರಭಾವ ಕಾರಣಕ್ಕೆ ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಮಳೆ ಹಾನಿ ಪ್ರದೇಶಗಳು, ಮಳೆಯಿಂದ ತೊಂದರೆ ಎದುರಿಸುವ ಜನರಿಗೆ ತ್ವರಿತಗತಿಯಲ್ಲಿ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ.
ಕಳೆದೊಂದು ವಾರದಿಂದ ನಗರದಲ್ಲಿ ತಾಪಮಾನ ಇಳಿಕೆ ಆಗುತ್ತಲೇ ಸಾಗಿದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದ್ದು, ಕಳೆದ ಮೂರು ದಿನಗಳಿಂದ ಸೂರ್ಯನ ದರ್ಶನವೇ ಆಗಿಲ್ಲ. ಚಳಿಯಿಂದ ಕೆಂಗೆಟ್ಟಿರುವ ನಗರವಾಸಿಗಳು ಬಿಸಿಲಿಗಾಗಿ ಎದುರು ನೋಡುತ್ತಿದ್ದಾರೆ.
ಇನ್ನೂ ಚಂಡಮಾರುತ ಎಫೆಕ್ಟ್ ಇನ್ನೂ ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ ಮುಂದುವರಿಯಲಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ನಗರದಲ್ಲಿ ವ್ಯಾಪಕ ಮಳೆ ಆಗಲಿದೆ. ಕೆಲವೆಡೆ ಅಂತೂ ಭರ್ಜರಿ ಮಳೆ ಸುರಿಯುವ ಲಕ್ಷಣಗಳು ದಟ್ಟವಾಗಿದೆ. ಈ ಸಂಬಂಧ ನಗರಕ್ಕೆ ಒಂದು ದಿನ 'ಹಳದಿ ಎಚ್ಚರಿಕೆ' ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೆಂದ್ರದ ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು ಭಾನುವಾರ ಮಳೆ ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿಗೆ ಡಿ.2ಕ್ಕೆ ಭಾರೀ ಮಳೆ: ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಪೈಕಿ ಡಿಸೆಂಬರ್ 2 ರಂದು ಅತ್ಯಧಿಕ ಮಳೆ ಆಗುವ ಸಾಧ್ಯತೆ ಇದೆ. ಚಂಡಮಾರುತ ಪ್ರಭಾವದಿಂದ ಸಾಧಾರಣದಿಂದ ಭಾರೀ ಮಳೆ ಸುರಿಯಲಿದ್ದು, ಈ ಕಾರಣದಿಂದ ಆ ಒಂದು ದಿನ ಹಳದಿ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 4 ಇಲ್ಲವೆ ಡಿ.5ರ ನಂತರ ಬೆಂಗಳೂರಿನ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ. ಅಷ್ಟರಲ್ಲಿ ತಮಿಳುನಾಡಿನ ಪುದುಚೇರಿಗೆ ಅಪ್ಪಳಿಸಿರುವ ಚಂಡಮಾರು ಫೆಂಗಲ್ ಅಬ್ಬರ ಇಳಿಕೆ ಆಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications