Begaluru rain: ಬಿಬಿಎಂಪಿ ವ್ಯಾಪ್ತಿಯ ಈ ನಾಲ್ಕು ವಲಯಗಳಲ್ಲಿ ಅಧಿಕ ಮಳೆ
ಬೆಂಗಳೂರು, ಮೇ 06: ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ದಾಖಲಾಗುತ್ತಿದೆ. ಇದು ಭಾನುವಾರದಿಂದಲೂ ಮುಂದಿನ ನಾಲ್ಕು ದಿನಗಳವರೆಗೂ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ ನಾಲ್ಕರಿಂದ ಐದು ದಿನ ಅಂದರೆ ಮೇ 11ರವರೆಗೆ ಗುಡುಗು ಮಿಂಚು ಸಹಿತ ಮಳೆ ಬರಲಿದೆ. ಬಿಬಿಎಂಪಿಯ ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿ, ದಕ್ಷಿಣ, ಆರ್‌ಆರ್ ನಗರ, ಯಲಹಂಕ ವಲಯಗಳಲ್ಲಿ ಅಧಿಕ ಮಳೆ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
BBMP Rainfall Forecast: Widespread moderate rains with isolated heavy rains /thundershowers likely to prevail over BBMP area. pic.twitter.com/sfBxVqpcST
— Karnataka State Natural Disaster Monitoring Centre (@KarnatakaSNDMC) May 7, 2023
ಬಂಗಾಳಕೊಲ್ಲಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಮೋಚಾ ಚಂಡಮಾರುತದಿಂದಾಗಿ ಸುಮಾರು ನಾಲ್ಕು ರಾಜ್ಯಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಈ ಪೈಕಿ ಕರ್ನಾಟಕದ ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬರುವ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಮಳೆಯಾರ್ಭಟ ಹೆಚ್ಚಾಗಿದೆ.

ಸಂಜೆ ಮಳೆ ನಿರೀಕ್ಷೆ
ಇಂದು ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದೆ, ಆದರೆ ಇದುವರೆಗೆ ಎಲ್ಲಿಯೂ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ಸಂಜೆ ಇಲ್ಲವೇ ರಾತ್ರಿ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಭಾನುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಆಯಿತು. ವಿದ್ಯಾಪೀಠ, ಬಸವನಗುಡಿ, ಸಿಂಗಸಂದ್ರ, ಕೊರಮಂಗಲ, ಜ್ಞಾನಭಾರತಿ, ಬೆಳ್ಳಂದೂರು, ಬೆಂಗಳೂರು ದಕ್ಷಿಣ ಭಾಗದ ಒಂದಷ್ಟು ಬಡಾವಣೆಗಳು, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿತು.
ಬೆಂಗಳೂರಿನಲ್ಲಿ ಮೇ 11ರವರೆಗೂ ಹೀಗೆ ಮಳೆಯ ಮತ್ತು ತಂಪು ವಾತಾವರಣ ಮುಂದುವರಿಯಲಿದೆ. ಆಗ ಗರಿಷ್ಟ ತಾಪಮಾನ 30 ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.

ಜಿಲ್ಲೆಗಳ ವ್ಯಾಪ್ತಿಯ ಹವಾಮಾನ ವರದಿ
ಇನ್ನು ಕರ್ನಾಟಕದ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಮಡಿಕೇರಿ, ಹಾಸನ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ರಾಮನಗರ, ತುಮಕೂರು, ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಅಧಿಕ ಮಳೆ ಬರಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಯ ಒಂದೆರಡು ಕಡೆ ಸಾಧಾರಣ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆಗೆ ತುಂತುರು ಮಳೆ ಸಂಭವವಿದೆ. ಉಳಿದೆಡೆ ಸಹಜ ವಾತಾವರಣ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications