Bengaluru Rain: ಶನಿವಾರ ಸಂಜೆ ವರುಣ ಅಬ್ಬರ: ಕೆರೆಯಂತಾದ ರಸ್ತೆಗಳು, ಕಾರಿನ ಮೇಲೆ ಮರ ಬಿದ್ದು ಹಾನಿ
ಬೆಂಗಳೂರು, ಮೇ 20: ಬೆಂಗಳೂರಿನ ಹಲವು ಕಡೆಗಳಲ್ಲಿ ಶನಿವಾರ ಸಂಜೆ ಅಬ್ಬರಿಸಿದ್ದಾನೆ. ಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿಯ ಜನತೆಗೆ ಮಳೆ ಕೊಂಚ ನಿರಾಳತೆ ತಂದಿದೆ. ನಗರದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ಕೆರೆಯಂತಾದರೆ, ಹಲವು ಕಡೆಗಳಲ್ಲಿ ಮರ ಧರೆಗುರುಳಿದ ವರದಿಯಾಗಿದೆ.
ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನೀರಿ ನಿಂತ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಕಾರ್ಪೊರೇಷನ್ ಬಳಿ ಬಿಎಂಟಿಸಿ ಬಸ್ ಮೇಲೆ ಮರ ಉರುಳಿ ಬಿದ್ದಿದೆ, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ನಗರದ ಮೆಜೆಸ್ಟಿಕ್, ಕೃಷ್ಣರಾಜ ಮಾರುಕಟ್ಟೆ, ರಿಚ್‌ಮಂಡ್ ರಸ್ತೆ, ನಂಜಪ್ಪ ಸರ್ಕಲ್, ಜೆಪಿ ನಗರ, ಬನಶಂಕರಿ, ಶಾಂತಿನಗರ, ಚಾಮರಾಜಪೇಟೆ, ಲಗ್ಗೆರೆ, ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ವ್ಯಾಪಕ ಮಳೆ ಸುರಿದಿದೆ.

ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಕಳೆದ ವರ್ಷ ಮಳೆ ಬಂದಾಗ ಕೂಡ ಹಲವು ಕಡೆ ರಸ್ತೆಗಳು ಮುಳುಗಿದ್ದಾಗ ಮುಂದಿನ ಮಳೆಗಾಲದ ವೇಳೆಗ ಸರಿಪಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರೂ, ಈ ಬಾರಿ ಸಮಸ್ಯೆ ಹಾಗೆ ಇರುವುದು ಜನರ ಸಿಟ್ಟನ್ನು ಹೆಚ್ಚಿಸಿದೆ. ಬೇಸಿಗೆಗೆ ಸುರಿದ ಮಳೆಗೆ ಬೆಂಗಳೂರಿನ ಸ್ಥಿತಿ ಹೀಗಾದರೆ ಮಳೆಗಾಲಕ್ಕೆ ಪರಿಸ್ಥಿತಿ ಇನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಆತಂಕ ಎದುರಾಗಿದೆ.
ಭಾನುವಾರ ಕೂಡ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು. ಮರಗಳ ಅಡಿಯಲ್ಲಿ ವಾಹನಗಳಲ್ಲಿ ನಿಲ್ಲಿಸಬಾರದು ಎಂದು ಮನವಿ ಮಾಡಲಾಗಿದೆ.
ಮುಂದಿನ ಐದು ದಿನ ಭಾರಿ ಮಳೆ?
ಶನಿವಾರ ಸಂಜೆ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾದ ಮಳೆ ಸುರಿದಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹಲವು ಭಾಗಗಳಲ್ಲಿ ಮುಂದಿನ 5 ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮರಾಜನಗರ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.












Click it and Unblock the Notifications