Bengaluru Rains: ಮುಂಗಾರು ಮುನ್ನವೇ ಮಂಗಳವಾರ ಮಳೆಗೆ ನಲುಗಿದ ರಾಜಧಾನಿ, 76mm ಮಳೆ ದಾಖಲು
ಬೆಂಗಳೂರು, ಮೇ 30: ಬೆಂಗಳೂರಿನ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆಯೂ ತೀವ್ರ ಮಳೆ ಮುಂದುವರಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ರಿಂಗ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಬಿಬಿಎಂಪಿ ಪಶ್ಚಿಮ ವಲಯ ವ್ಯಾಪ್ತಿಯ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಬರೋಬ್ಬರಿ 76.5 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಹವಾಮಾನದಲ್ಲಿ ಉಂಟಾದ ವೈಪರಿತ್ಯಗಳ ಪ್ರಭಾವದಿಂದಾಗಿ ಮುಂಗಾರು ಮುನ್ನವೇ ರಾಜ್ಯ ರಾಜಧಾನಿ ಬೆಂಗಳೂರು ನಲುಗಿದೆ. ಕಳೆದ ಕೆಲವು ದಿನಗಳಿಂದ ದಿನ ಬಿಟ್ಟು ದಿನ ವ್ಯಾಪಕ ಮಳೆ ಸುರಿಯುತ್ತಿದೆ. ನಿತ್ಯ ಸಂಜೆ ನಂತರ ಗುಡುಗು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತದೆ.

ಅದೇ ರೀತಿ ಮಂಗಳವಾರ ಸಂಜೆ ಸಹ ಬೆಂಗಳೂರಿನ ಅನೇಕ ಕಡೆಗಳಲ್ಲಿ ಭರ್ಜರಿ ಮಳೆ ಬಿದ್ದಿದೆ. ಈ ಪೈಕಿ ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅಧಿಕ ಮಳೆಯಾಗಿದೆ. ರಾಜಮಹಲ್ ಗುಟ್ಟಹಳ್ಳಿಯಲ್ಲಿ 76.50mm ಮಳೆ ದಾಖಲಾಗಿದೆ. ಸಂಜೆ 4 ಗಂಟೆ ನಂತರ ಜಿಟಿ ಜಿಟಿ ರೂಪದಲ್ಲಿ ಶುರುವಾದ ಮಳೆ ಕೆಲಸ ಹೊತ್ತು ಜೋರಾಗಿ ಸುರಿಯಿತು.
ಮಳೆಯಿಂದಾಗಿ ಕೆ.ಆರ್.ವೃತ್ತ, ಟೌನ್ ಹಾಲ್, ಕೆ.ಆರ್ ಮಾರುಕಟ್ಟೆ, ನಾಯಂಡಹಳ್ಳಿ, ಕೆಂಗೇರಿ, ರಿಂಗ್ ರಸ್ತೆಯ ಕೆಲವು ಭಾಗಗಳಲ್ಲಿ, ಮೇಲ್ಸೆತುವೆ ಸೇರಿದಂತೆ ಮುಖರಸ್ತೆಗಳಲ್ಲಿ ಹಾಗೂ ಮಹದೇವಪುರ, ಕೋರಮಂಗಲ, ಮಾರತ್ತಹಳ್ಳಿ ಭಾಗದ ವಿವಿಧೆಡೆಯ ರಸ್ತೆಗಳು ಜಲಾವೃತಗೊಂಡವು.
Water logging opposite ORR Ecospace near sterling apartment, Take caution while driving on this stretch pic.twitter.com/7nngkvc4sT
— Outer Ring Road Companies Association ® (@0RRCA) May 30, 2023
ರಿಂಗ್ ರಸ್ತೆ ಜಲಾವೃತ: ಭಯದಲ್ಲೇ ಸಂಚಾರ
ನಗರದ ರಿಂಗ್ ರಸ್ತೆಯ ಸ್ಟೆರ್‌ಲಿಂಗ್ ಅಪಾರ್ಟ್‌ಮೆಂಟ್ ಬಳಿ ರಸ್ತೆಯಲ್ಲಿ ಒಂದು ಅಡಿಯಷ್ಟು ಮಳೆ ನೀರ ನಿಂತಿದ್ದು ಕಂಡು ಬಂತು. ವಾಟರ್ ಲಾಗಿಂಗ್ ಸಮಸ್ಯೆಯಿಂದಾಗಿ ನೀರು ಸರಾಗವಾಗಿ ಒಳಚರಂಡಿ ಸೇರದೇ ರಸ್ತೆ ಮೇಲೆ ಉಕ್ಕಿ ಹರಿಯಿತು. ಹೀಗಾಗಿ ಬಸ್ಸು, ಕಾರು, ಬೈಕ್‌ಗಳು ನಿಧಾನವಾಗಿ ಭಯದಲ್ಲಿ ಚಲಿಸಿದವು.
ಇದರಿಂದಾಗಿ ಸಾರ್ವಜನಿಕರು ಸೇರಿದಂತೆ ಕೆಲಸ ಮುಗಿಸಿ ತೆರಳುತ್ತಿದ್ದ ಉದ್ಯೋಗಿಗಳಿಗೂ, ವ್ಯಾಪಾರಸ್ತರಿಗೆ ತೊಂದರೆ ಆಯಿತು. ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿ ಭಾರೀ ಸಮಸ್ಯೆ ಆಯಿತು. ಗಾಳಿ ಸಹಿತ ಬಂದ ಮಳಗೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದರೆ, ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಯಾಯಿತು.

ಎಲ್ಲೆಲ್ಲಿ ಎಷ್ಟು ಮಳೆ ಬಿದ್ದಿದೆ? ವಿವರ
ಸಂಪಂಗಿರಾಮನಗರದಲ್ಲಿ 73ಮಿ.ಮೀ, ವಿವಿ ಪುರಂ 62.5ಮಿ.ಮೀ, ಗಾಳಿ ಆಂಜನೇಯ ಟೆಂಪಲ್ ವಾರ್ಡ್ 59ಮಿ.ಮೀ, ಹೆಮ್ಮಿಗೆಪುರ 57ಮಿ.ಮೀ, ಬೆಳ್ಳಂದೂರ 52ಮಿ.ಮೀ, ಹಂಪಿನಗರ 51ಮಿ.ಮೀ, ಚಾಮರಾಜಪೇಟೆ 49ಮಿ.ಮೀ, ನಾಗಪುರ 48ಮಿ.ಮೀ, ದಯಾನಂದಸಾಗರ 47ಮಿ.ಮೀ, ಕಾಟನ್‌ಪೇಟೆ ಮತ್ತು ಸಂಪಂಗಿರಾಮನಗರ (1) ತಲಾ 43ಮಿ.ಮೀ, ವಿದ್ಯಾಪೀಠ 42ಮಿ.ಮೀ, ಬಸವನಗುಡಿ 37ಮಿ.ಮೀ, ಪುಲಕೇಶಿನಗ 36.5ಮಿ.ಮೀ, ಬನ್ನೇರುಘಟ್ಟ 36.5ಮಿ.ಮೀ, ಕೊಟ್ಟಿಗೆಪಾಳ್ಯ 33 ಮಿ.ಮೀ. ಮಳೆ ದಾಖಲಾಗಿದೆ.
ನಗರದಲ್ಲಿ ಉಳಿದ ಪ್ರದೇಶಗಳಲ್ಲಿ ಸಾಧಾರಣವಾಗಿ ಮಳೆ ಬಿದ್ದಿದೆ. ಇದೇ ರೀತಿ ಮುಂದಿನ ಜೂನ್ 2ರವರೆಗೆ ಜೋರು ಮಳೆ ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications