Bengaluru Rain: ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಹಲವೆಡೆ ತುಂತುರು ಮಳೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯನ ಅಬ್ಬರಕ್ಕೆ ಬೆಂದು ಹೋಗಿದ್ದ ಜನತೆಗೆ ಇಂದು ವರುಣದೇವ ತಂಪೆರೆದಿದ್ದಾನೆ. ವಸಂತ ಕಾಲದ ಆರಂಭದಲ್ಲೇ ಸುಡುತ್ತಿರುವ ಬಿಸಿಲು ಮತ್ತು ಸೆಕೆಯಿಂದ ತತ್ತರಿಸಿದ್ದ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ದಿಢೀರ್ ಮಳೆ ಸುರಿಯುವ ಮೂಲಕ ವಾತಾವರಣ ತಂಪಾಗಿಸಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿತ್ತು. ಮಧ್ಯಾಹ್ನದ ವೇಳೆ ರಸ್ತೆಗೆ ಇಳಿಯದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮನೆಯಲ್ಲಿದ್ದರೂ ಸೆಕೆ ತಾಳಲಾರದೆ ಜನರು ಹೈರಾಣಾಗಿದ್ದರು. ಆದರೆ ಇಂದು ಸಂಜೆ ವೇಳೆಗೆ ವಾತಾವರಣ ಬದಲಾಗಿ, ಮೋಡ ಕವಿದು ತಂಗಾಳಿ ಬೀಸತೊಡಗಿತು. ಇದರ ಬೆನ್ನಲ್ಲೇ ಸುರಿದ ಮಳೆಯು ಬಿಸಿಯಾಗಿದ್ದ ಧರೆಯನ್ನು ತಣಿಸಿತು.

ಎಲ್ಲೆಲ್ಲಿ ಮಳೆಯ ಅಬ್ಬರ?
ಪೂರ್ವ ಮುಂಗಾರು ಆರಂಭ ಹಾಗೂ ಕರ್ನಾಟಕದ ಒಳನಾಡಿನಲ್ಲಿ ಉಂಟಾಗಿರುವ ಟ್ರಫ್ (Trough) ಪರಿಣಾಮವಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ರಾಜಧಾನಿಯ ವಿಜಯನಗರ, ಕೋರಮಂಗಲ, ಹೊಸಹಳ್ಳಿ, ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ತುಂತುರು ಮಳೆಯಾಗಿದೆ. ಗುಡುಗು ಸಹಿತ ಸುರಿದ ಮಳೆಯಿಂದಾಗಿ ನಗರದ ಕೆಲವೆಡೆ ವಾಹನ ಸಂಚಾರಕ್ಕೆ ಅಲ್ಪ ಅಡ್ಡಿಯಾಯಿತಾದರೂ, ಬಿಸಿಲಿನಿಂದ ಹೈರಾಣಾಗಿದ್ದ ಜನರು ಈ ಮಳೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.
ಪೂರ್ವ ಮುಂಗಾರಿನ ಚಟುವಟಿಕೆಗಳು ಚುರುಕುಗೊಂಡಿರುವುದರಿಂದ ಮುಂದಿನ ಕೆಲವು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಬಿಸಿಲಿನಿಂದ ಬೇಸತ್ತಿದ್ದ ಬೆಂಗಳೂರಿಗರಿಗೆ ಈ ಮಳೆ ಹೊಸ ಚೈತನ್ಯ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಏಪ್ರಿಲ್ 10ರಿಂದ 12ರವರೆಗೆ ಅತಿಯಾದ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣ ಇರಲಿದೆ. ಸಮುದ್ರ ತೀರದ ಈ ಭಾಗಗಳಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚಿರಲಿದ್ದು, ಇದರಿಂದಾಗಿ ಜನರಿಗೆ ಅತಿಯಾದ ಸೆಕೆ ಹಾಗೂ ಬೆವರಿನ ಅನುಭವವಾಗಲಿದೆ. ಮುಂದಿನ ಐದು ದಿನಗಳ ಕಾಲ ಗರಿಷ್ಠ ಉಷ್ಣಾಂಶದಲ್ಲಿ ಯಾವುದೇ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ಇಲಾಖೆ ತಿಳಿಸಿದೆ.
ಇಂದು ಸಂಜೆ ಸುರಿದ ಮಳೆಯ ಬೆನ್ನಲ್ಲೇ, ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ರಾಜ್ಯದ ಒಳನಾಡಿನ ಜನರಿಗೆ ಮಾತ್ರ ಬಿಸಿಲ ಧಗೆಯಿಂದ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆಯಾಗುವ ಪ್ರವೃತ್ತಿ ಕಂಡುಬರುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.












Click it and Unblock the Notifications