ಬೆಂಗಳೂರಲ್ಲಿ ಮಳೆ ಅಬ್ಬರಕ್ಕೆ ಮುನ್ನ ಅಲರ್ಟ್; ಮಧ್ಯರಾತ್ರಿ ನಗರ ಸುತ್ತಿದ ಆಯುಕ್ತರು, ಅಧಿಕಾರಿಗಳಿಗೆ ಖಡಕ್ ಸೂಚನೆ
ಬೆಂಗಳೂರು: ನಗರದಲ್ಲಿ ಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದು, ಚರಂಡಿ ಕಟ್ಟಿಕೊಳ್ಳುವುದು ಸೇರಿದಂತೆ ಸಾರ್ವಜನಿಕರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಲು ಬೆಂಗಳೂರು ಉತ್ತರ ನಗರ ಪಾಲಿಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಸೆಪ್ಟೆಂಬರ್ 29ರ ರಾತ್ರಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆನೀರು ಹರಿವಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ರಾತ್ರಿ 10 ಗಂಟೆಯಿಂದ 12.30ರವರೆಗೆ ನಡೆದ ಪರಿಶೀಲನೆಯಲ್ಲಿ ಮಳೆನೀರು ನಿಲ್ಲುವ ಸಾಧ್ಯತೆಯಿರುವ ಪ್ರದೇಶಗಳು, ರಸ್ತೆ ಬದಿಯ ಚರಂಡಿಗಳು, ರಾಜಕಾಲುವೆಗಳು ಹಾಗೂ ಪ್ರಮುಖ ರಸ್ತೆಗಳನ್ನು ಪರಿಶೀಲಿಸಲಾಯಿತು.

ರಸ್ತೆ ಬದಿಯ ಚರಂಡಿಗಳನ್ನು ಪರಿಶೀಲನೆ
ಬಿಇಎಲ್ ಸರ್ಕಲ್‌ನಿಂದ ಹೆಬ್ಬಾಳ ಹೊರ ವರ್ತುಲ ರಸ್ತೆ ಹಾಗೂ ಎಚ್‌ಡಿಸಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಚರಂಡಿಗಳನ್ನು ಪರಿಶೀಲಿಸಿದ ಆಯುಕ್ತರು, ಅಗತ್ಯವಿರುವ ಕಡೆ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೇವಿನಗರ ಮತ್ತು ಭದ್ರಪ್ಪ ಲೇಔಟ್ ಪ್ರದೇಶಗಳಲ್ಲಿ ರಾಜಕಾಲುವೆಗಳನ್ನು ಪರಿಶೀಲಿಸಿ, ಮಳೆನೀರು ಯಾವುದೇ ಅಡೆತಡೆಯಿಲ್ಲದೆ ಹರಿದುಹೋಗುವಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ನೀರು ನಿಲ್ಲುವ ಸಾಧ್ಯತೆಯಿರುವ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ನಿರ್ದೇಶನ ನೀಡಿದರು.
ಹೆಬ್ಬಾಳ್ ಫ್ಲೈಓವರ್ ಸುತ್ತಮುತ್ತ ಪರಿಶೀಲನೆ
ಹೆಬ್ಬಾಳ್ ಫ್ಲೈಓವರ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮಳೆಯ ಸಂದರ್ಭದಲ್ಲಿ ನೀರು ನಿಲ್ಲದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ತುಮಕೂರು ಲೂಪ್‌ನಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನೂ ಆಯುಕ್ತರು ಪರಿಶೀಲಿಸಿದರು. ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ BSMILE ಎಂಜಿನಿಯರ್‌ಗಳು ಮಾಹಿತಿ ನೀಡಿದರು.
ಕಾರಿಯಣ್ಣ ಪಾಳ್ಯ-ವೆಂಕಟರಾಮ್ ಕೆಫೆ ಸರ್ವಿಸ್ ರಸ್ತೆ, ವೀರಣ್ಣಪಾಳ್ಯ, ಥಣಿಸಂದ್ರ, ನಾಗವಾರ ಸರ್ಕಲ್, ಎಚ್‌ಆರ್‌ಬಿಆರ್ ಲೇಔಟ್ ಹಾಗೂ ಹೆಣ್ಣೂರು ಅಂಡರ್‌ಪಾಸ್ ಪ್ರದೇಶಗಳಲ್ಲಿಯೂ ಮಳೆನೀರು ಹರಿವಿನ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.
ಮಳೆ ಬಂದಾಗ ಸ್ಥಳದಲ್ಲೇ ಸಿಬ್ಬಂದಿ ಇರಬೇಕು
ಪರಿಶೀಲನೆ ಬಳಿಕ ಮಾತನಾಡಿದ ಆಯುಕ್ತರು, ರಸ್ತೆ ಬದಿಯ ಚರಂಡಿಗಳು, ಭುಜದ ಚರಂಡಿಗಳು ಹಾಗೂ ರಾಜಕಾಲುವೆಗಳನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಂಡು ಮಳೆನೀರು ನಿರಂತರವಾಗಿ ಹರಿದುಹೋಗುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಸೂಚಿಸಿದರು.
ನೀರು ನಿಲ್ಲುವ ಸಾಧ್ಯತೆಯಿರುವ ಸ್ಥಳಗಳನ್ನು ಮುಂಚಿತವಾಗಿಯೇ ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಳೆ ಸಂದರ್ಭದಲ್ಲಿ ಎಂಜಿನಿಯರ್‌ಗಳು ಹಾಗೂ ಕ್ಷೇತ್ರ ಸಿಬ್ಬಂದಿ ಸ್ಥಳದಲ್ಲೇ ಲಭ್ಯವಿದ್ದು, ನೀರು ನಿಲುಗಡೆ, ಚರಂಡಿ ತಡೆ ಸೇರಿದಂತೆ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಸ್ಥಳಕ್ಕೆ ತೆರಳಿ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.
Bengaluru Rain: ತಾತ್ಕಾಲಿಕ ನಿಯಂತ್ರಣ ಕೊಠಡಿಗೆ ಒತ್ತು
ರಾತ್ರಿ ಕಾರ್ಯನಿರ್ವಹಿಸುವ ತಾತ್ಕಾಲಿಕ ನಿಯಂತ್ರಣ ಕೊಠಡಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕ್ಷೇತ್ರ ತಂಡಗಳು ಹಾಗೂ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಸಮಸ್ಯೆ ಎದುರಾದ ಕೂಡಲೇ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ, ಮಳೆಯ ಸಂದರ್ಭದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ಕನಿಷ್ಠಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರು ತಿಳಿಸಿದರು.
ಭಾರಿ ಮಳೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರಂತರ ಮೇಲ್ವಿಚಾರಣೆ, ಮುನ್ನೆಚ್ಚರಿಕಾ ಕ್ರಮ ಹಾಗೂ ಸ್ಥಳದಲ್ಲೇ ತ್ವರಿತ ಸ್ಪಂದನೆ ಖಚಿತಪಡಿಸಿಕೊಳ್ಳಬೇಕು ಎಂದು ಪೊಮ್ಮಲ ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Click it and Unblock the Notifications
