Road: ಬೆಂಗಳೂರಿನ ಪ್ರಮುಖ ರಸ್ತೆ ಇನ್ಮುಂದೆ ಮತ್ತಷ್ಟು ಸುಂದರ! ಗ್ರೀನ್ ಕಾರಿಡಾರ್, ಸೈಕಲ್ ಟ್ರ್ಯಾಕ್ ನಿರ್ಮಾಣ

ಬೆಂಗಳೂರು: ಬೆಂಗಳೂರಿನ ಸೌಂದರ್ಯ ಹೆಚ್ಚಿಸಲು ವಿವಿಧ ಕ್ರಮ ಕೈಗೊಳ್ಳುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದೀಗ ನಗರದ ಹೃದಯ ಭಾಗದ ಮತ್ತೊಂದು ಪ್ರಮುಖ ರಸ್ತೆಯ ಸಂಪೂರ್ಣ ಅಭೀವೃದ್ಧಿಗೆ ಮುಂದಾಗಿದೆ. ಡಾ. ಎಂ.ಎಚ್. ಅಂಬರೀಶ್ ರಸ್ತೆ (ರೇಸ್ ಕೋರ್ಸ್ ರಸ್ತೆ)ಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಯನ್ನು ಆಕರ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮೌರ್ಯ ಜಂಕ್ಷನ್ ಬಳಿಯ ರೇಸ್ ಕೋರ್ಸ್ ಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸ್ಥಳ (ಪಬ್ಲಿಕ್ ಸ್ಪೇಸ್) ನಿರ್ಮಿಸುವ ಮೂಲಕ ಹಸಿರು ಕಾರಿಡಾರ್ ಅಭಿವೃದ್ಧಿಪಡಿಸುವಂತೆ ಹೇಳಿದರು.

Bengaluru Race Course Road

900 ಮೀಟರ್ ರಸ್ತೆ ವೈಟ್‌ ಟಾಪಿಂಗ್

ಡಾ. ಎಂ.ಎಚ್. ಅಂಬರೀಶ್ ರಸ್ತೆ, ಮೌರ್ಯ ಸರ್ಕಲ್‌ನಿಂದ ಹರೇಕೃಷ್ಣ ಜಂಕ್ಷನ್‌ವರೆಗಿನ ಸುಮಾರು 900 ಮೀಟರ್ ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪಾದಚಾರಿ ಮಾರ್ಗ ಹಾಗೂ ಬಫರ್ ವಲಯದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪ್ರದೇಶದಲ್ಲಿ ಆಕರ್ಷಕ ಬೀದಿ ದೀಪಗಳನ್ನು ಅಳವಡಿಸುವುದರ ಜೊತೆಗೆ ಸಸಿಗಳನ್ನು ನೆಡಬೇಕು. ಅಲ್ಲದೆ, ಸಾರ್ವಜನಿಕರು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು.

ಈ ರಸ್ತೆಯಲ್ಲಿ ನಾಗರಿಕರು ಹಾಗೂ ಪ್ರಯಾಣಿಕರ ಸಂಚಾರ ಹೆಚ್ಚಿರುವುದರಿಂದ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ, ಪಾದಚಾರಿ ಮಾರ್ಗದ ಪಕ್ಕದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸುವಂತೆಯೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಲಿಂಕ್ ರಸ್ತೆ ಪರಿಶೀಲನೆ

ಮಲ್ಲೇಶ್ವರಂ ಲಿಂಕ್ ರಸ್ತೆ ಹಾಗೂ 5ನೇ ಕ್ರಾಸ್ ರಸ್ತೆ ಸೇರಿದಂತೆ ಒಟ್ಟು 780 ಮೀಟರ್ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಪಯುಕ್ತ ಸೇವೆಗಳ ಸ್ಥಳಾಂತರ ಹಾಗೂ ಒಳಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸ್ಮಾರ್ಟ್ ಬಜಾರ್ ಮುಂಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಸಾರ್ವಜನಿಕರಿಗೆ ಬಹುಪಯೋಗವಾಗುವ ರೀತಿಯಲ್ಲಿ ಯೋಜನೆ ರೂಪಿಸಿ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ನವೀಕರಿಸುವುದರ ಜೊತೆಗೆ ಪಾದಚಾರಿ ಮಾರ್ಗ ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು ಎಂದರು.

ಫ್ಲಾಟ್‌ಫಾರ್ಮ್ ರಸ್ತೆ ಪರಿಶೀಲನೆ

ಫ್ಲಾಟ್‌ಫಾರ್ಮ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದರೂ, ಪಾದಚಾರಿ ಮಾರ್ಗವನ್ನು ಸಮರ್ಪಕವಾಗಿ ನಿರ್ಮಿಸದಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅವುಗಳನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿದರು. ಅಲ್ಲದೆ, ರ‍್ಯಾಂಪ್‌ಗಳ ಮೇಲೆ ವಾಹನಗಳ ಸಂಚಾರದಿಂದ ಪಾದಚಾರಿ ಮಾರ್ಗ ಹಾನಿಗೊಳಗಾಗಿರುವುದನ್ನು ಗಮನಿಸಿ, ಸಂಬಂಧಪಟ್ಟವರ ವಿರುದ್ಧ ದಂಡ ವಿಧಿಸುವಂತೆ ತಿಳಿಸಿದರು.

ಮೆಟ್ರೋ ಲೈನ್ ಸೌಂದರ್ಯೀಕರಣ

ಮೆಟ್ರೋ ಹಳಿಗಳ ಕೆಳಭಾಗದಲ್ಲಿ ಕಳೆ ಹಾಗೂ ಗಿಡಗಂಟಿಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಿ ಫೇವರ್ ಬ್ಲಾಕ್‌ಗಳನ್ನು ಅಳವಡಿಸುವ ಮೂಲಕ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮಂತ್ರಿ ಮಾಲ್ ಪಕ್ಕದಲ್ಲಿರುವ ಎರಡು ಬಹುಮಹಡಿ ಕಟ್ಟಡಗಳ ಮೇಲ್ಭಾಗದಲ್ಲಿ ಕ್ರೇನ್‌ಗಳನ್ನು ಹಾಗೆಯೇ ಬಿಡಲಾಗಿದ್ದು, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರೊಂದಿಗೆ ಮಾತನಾಡಿ, ಕೂಡಲೇ ಕ್ರೇನ್‌ಗಳನ್ನು ತೆರವುಗೊಳಿಸಬೇಕು.

ಓಕಳೀಪುರಂ ಕಾಮಗಾರಿ ಪರಿಶೀಲನೆ

ಓಕಳೀಪುರಂ ಅಷ್ಟಪಥ ಕಾರಿಡಾರ್‌ನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ರಿಟೈನಿಂಗ್ ವಾಲ್‌ನ ಒಂದು ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕೆಪಿಟಿಸಿಎಲ್ ಕೇಬಲ್‌ಗಳು ಹಾಗೂ ಬೃಹತ್ ಬಂಡೆಗಳಿರುವ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಪಡೆದರು. ಈ ಸಂಬಂಧ ಕೇಬಲ್ ಗಳನ್ನು ತೆರವುಗೊಳಿಸಲು ಕೆಪಿಟಿಸಿಎಲ್‌ಗೆ ಕೂಡಲೇ ಪತ್ರ ಬರೆದು, ರಿಟೈನಿಂಗ್ ವಾಲ್ ಕಾಮಗಾರಿ ಕೈಗೆತ್ತಿಕೊಳ್ಳಲು ಜಿಬಿಎ ಸಜ್ಜಾಗಿದೆ.

ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ರೋಡ್ ಫಾರ್ಮೇಷನ್ ಕಾಮಗಾರಿ ಕೈಗೊಳ್ಳಬೇಕು. ಮಳೆನೀರು ಕಾಲುವೆಗಾಗಿ ಅಳವಡಿಸುತ್ತಿರುವ ಪೈಪ್‌ಲೈನ್ ಪುಶಿಂಗ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಜೊತೆಗೆ, ರೈಲ್ವೆ ಇಲಾಖೆಯ ಒಡೆತನದಲ್ಲಿರುವ ಜಾಗದಲ್ಲಿ ರಿಟೈನಿಂಗ್ ವಾಲ್ ನಿರ್ಮಿಸಬೇಕಿದೆ. ಪಾಲಿಕೆಯ ವತಿಯಿಂದಲೇ ಕಾಮಗಾರಿ ಕೈಗೊಂಡು, ನಂತರ ರೈಲ್ವೆ ಇಲಾಖೆಯಿಂದ ವೆಚ್ಚವನ್ನು ಭರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+