ಬೆಂಗಳೂರಲ್ಲಿ 11 ಹೊಸ ಠಾಣೆಗಳು: ಪೊಲೀಸರು, ಅಧಿಕಾರಿಗಳ ನೇಮಕಾತಿಗೆ ಸಿದ್ದತೆ- ಎಷ್ಟು ಹುದ್ದೆಗಳಿಗೆ ಭರ್ತಿ? ಮಾಹಿತಿ, ವಿವರ ಪಡೆಯಿ
ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು 11 ಹೊಸ ಪೊಲೀಸ್ ಠಾಣೆಗಳನ್ನು ತೆರೆಯಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರ ಸಿದ್ದತೆ ನಡೆಸಿದೆ.
ರಾಜ್ಯ ಸರ್ಕಾರವು ಶುಕ್ರವಾರ 11 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ತೀರ್ಮಾನಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ 2,454 ಸಿಬ್ಬಂದಿಗಳ ನೇರ ನೇಮಕಾತಿಯನ್ನು ಪ್ರಕಟಿಸಿದೆ.

ಹೊಸದಾಗಿ ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, ಇವುಗಳು ಮಹಿಳೆಯರ ವಿರುದ್ಧದ ಅಪರಾಧಗಳ ಮೇಲೆ ಕಾರ್ಯನಿರ್ವಸುತ್ತವೆ ಎಂದು ತಿಳಿದುಬಂದಿದೆ.
ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವಾರ್ಷಿಕ ಸಮ್ಮೇಳನವು ನಗರದಲ್ಲಿ ಶುಕ್ರವಾರ ನಡೆಯಿತು. ಇದರ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರು ವಹಿಸಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ, ಹೊಸ ಪೊಲೀಸ್ ಠಾಣೆಗಳನ್ನು ತೆರೆಯುವ ನಿರ್ಧಾರ ಹೊರಬಂದಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ಬೆಂಗಳೂರು ಪೊಲೀಸ್ ಪಡೆಗಳಲ್ಲಿ ಮಾನವ ಸಂಪನ್ಮೂಲವನ್ನು ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಂಖ್ಯೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಆದೇಶಿಸಿದೆ. ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಪ್ರಸ್ತುತ ನಗರದಲ್ಲಿ 18 ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಅಪರಾಧಗಳು ದಾಖಲಾಗುತ್ತಿವೆ. ವರ್ಷಕ್ಕೆ ಸರಾಸರಿ 350 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಈ ಠಾಣೆಗಳಲ್ಲಿ ಹೆಚ್ಚುವರಿ 279 ಅಧಿಕಾರಿ-ಶ್ರೇಣಿಯ ಸಿಬ್ಬಂದಿಗಳೊಂದಿಗೆ ಪಡೆಗಳನ್ನು ಬಲಪಡಿಸಲು ಸರ್ಕಾರ ಆದೇಶಿಸಿದೆ.
ಇದಲ್ಲದೆ, ಅಸ್ತಿತ್ವದಲ್ಲಿರುವ ಎರಡು ಮಹಿಳಾ ಪೊಲೀಸ್ ಠಾಣೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು, 246 ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲು ಸರ್ಕಾರ ಮುಂದಾಗಿದೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಆರು ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಲ್ಲದೇ, 28 ಪೊಲೀಸ್ ಠಾಣೆಗಳಲ್ಲಿ 318 ಪೊಲೀಸ್ ಅಧಿಕಾರಿಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ.
ಹೈಗ್ರೌಂಡ್ಸ್, ಸದಾಶಿವನಗರ, ಹಲಸೂರು ಗೇಟ್, ಉಪ್ಪಾರ ಪೇಟೆ ಮತ್ತು ಮಲ್ಲೇಶ್ವರಂನಂತಹ ಪ್ರಮುಖ ಏರಿಯಾಗಳಲ್ಲಿನ ಐದು ಠಾಣೆಗಳ ಪೊಲೀಸ್ ಸಿಬ್ಬಂದಿ ರಾಜಕಾರಣಿಗಳು, ವಿವಿಐಪಿಗಳ ಭದ್ರತೆಗಾಗಿ ಹೆಚ್ಚು ಸಮಯವನ್ನು ವ್ಯಯಿಸುತ್ತಿದ್ದಾರೆ. ಇದನ್ನು ತಗ್ಗಿಸಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
2,454 ಹೊಸ ಸಿಬ್ಬಂದಿಗಳಲ್ಲಿ, ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ 1,226 ಮತ್ತು ಮುಂದಿನ (2024-25) ಅವಧಿಯಲ್ಲಿ 1,228 ನೇಮಕಾತಿಗೆ ಆದೇಶ ನೀಡಿದೆ.
ಇದಲ್ಲದೆ, ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿ 1,095 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಸಹ ನೇಮಕ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.












Click it and Unblock the Notifications