ದಶಕಗಳ ಸಮಸ್ಯೆಗೆ ಪರಿಹಾರ: ಬೆಂಗಳೂರಿನ 8,500 ಜಪ್ತಿ ವಾಹನಗಳಿಗೆ ಸಿಕ್ಕಿತು ಹೊಸ ಜಾಗ; ಶೀಘ್ರ ಸ್ಥಳಾಂತರ!
ಬೆಂಗಳೂರು: ಪೊಲೀಸ್ ಠಾಣೆಗಳ ಆವರಣ, ರಸ್ತೆಗಳು ಮತ್ತು ಕಾಲುದಾರಿಗಳನ್ನು ಮುಕ್ತಗೊಳಿಸಲು ಹಾಗೂ ವರ್ಷಗಳಿಂದ ಇರುವ ನಾಗರಿಕ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಜಪ್ತಿ ಮಾಡಿದ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕಂದಾಯ ಇಲಾಖೆಯು ಜಾಗವನ್ನು ಗುರುತಿಸಿದೆ. ಈ ಮೂಲಕ ಪೊಲೀಸ್ ಠಾಣೆಗಳಲ್ಲಿನ ಸ್ಥಳಾವಕಾಶದ ಕೊರತೆ, ಪಾದಚಾರಿ ಮಾರ್ಗಗಳ ಅತಿಕ್ರಮಣ ಹಾಗೂ ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಜಪ್ತಿ ಮಾಡಿರುವ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ನ್ಯಾಯಾಲಯದ ಪ್ರಕರಣಗಳು ಬಾಕಿ ಇರುವ ಕಾರಣ ಹಲವು ವರ್ಷಗಳಿಂದ ಪೊಲೀಸ್ ಠಾಣೆಗಳಲ್ಲೇ ಉಳಿದುಕೊಂಡಿವೆ. ಪ್ರಕರಣಗಳ ಇತ್ಯರ್ಥಕ್ಕೆ ಹಲವು ವರ್ಷಗಳು ಬೇಕಾಗುವುದರಿಂದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ವಾಹನಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಜಪ್ತಿ ವಾಹನಗಳಿಗೆ ಹೊಸ ಜಾಗ
ವರ್ಷಗಳಿಂದ ಪೊಲೀಸ್ ಠಾಣೆಗಳು, ರಸ್ತೆಗಳು ಮತ್ತು ಕಾಲುದಾರಿಗಳನ್ನು ಅತಿಕ್ರಮಿಸಿದ್ದ ನ್ಯಾಯಾಲಯ ಜಪ್ತಿ ವಾಹನಗಳಿಗೆ ಈಗ ಹೊಸ ಜಾಗ ಸಿಗಲಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ಈ ಹಳೆಯ ಸಮಸ್ಯೆಗೆ ಮುಕ್ತಿ ನೀಡಲಿದೆ.
ಪೊಲೀಸ್ ಇಲಾಖೆಯಿಂದ ಜಪ್ತಿಯಾದ 2, 3 ಮತ್ತು 4 ಚಕ್ರದ ವಾಹನಗಳನ್ನು ವರ್ಷಗಳಿಂದ ಪೊಲೀಸ್ ಠಾಣೆಗಳ ಆವರಣದಲ್ಲಿ ಹಾಗೂ ಸುತ್ತಮುತ್ತ ನಿಲ್ಲಿಸಲಾಗಿದೆ. ಕೋರ್ಟ್ನಲ್ಲಿ ಪ್ರಕರಣಗಳು ನಡೆಯುತ್ತಿರುವುದರಿಂದ ಮತ್ತು ನ್ಯಾಯಾಲಯದ ಪ್ರಕರಣಗಳು ಮುಕ್ತಾಯಗೊಳ್ಳಲು ವರ್ಷಗಳೇ ತಗಲುವುದರಿಂದ ಇವುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ವಾಹನಗಳು ಸಂಪೂರ್ಣವಾಗಿ ಹಾಳಾದ ಸ್ಥಿತಿಯಲ್ಲಿವೆ.
ಇವು ಠಾಣೆಯ ಜಾಗವನ್ನು ಅತಿಕ್ರಮಿಸುವುದಲ್ಲದೆ, ಠಾಣೆಯ ಸುತ್ತಮುತ್ತಲಿನ ಕಾಲುದಾರಿ (ಫುಟ್ಪಾತ್) ಮತ್ತು ರಸ್ತೆಗಳಿಗೂ ಹರಡಿಕೊಂಡಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಹೀಗಾಗಿ ಜನ ಸಾಮಾನ್ಯರು ಈ ವಾಹನಗಳನ್ನು ಜನನಿಬಿಡ ಪ್ರದೇಶಗಳಿಂದ ವಿಲೇವಾರಿ ಮಾಡಲು ಅಥವಾ ಬೇರೆಡೆಗೆ ಸ್ಥಳಾಂತರಿಸಲು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರು.
ಜಪ್ತಿ ವಾಹನಗಳಿಗೆ ಅಗತ್ಯವಿರುವ ಜಾಗ
ನಾವು ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. 2 ತಿಂಗಳ ಸತತ ಪ್ರಯತ್ನದ ನಂತರ ಈ ಸಮಸ್ಯೆಗೆ ಕೊನೆಗೂ ಪರಿಹಾರ ಕಂಡುಕೊಂಡಿದ್ದೇವೆ. ಜಪ್ತಿ ವಾಹನಗಳನ್ನು ನಿಲುಗಡೆಗೊಳಿಸಲು ಕಂದಾಯ ಇಲಾಖೆಯು ಇದೀಗ ಅಗತ್ಯವಿರುವ ಜಾಗಗಳನ್ನು ಒದಗಿಸಿಕೊಟ್ಟಿದೆ.
ಕಂದಾಯ ಇಲಾಖೆ ನೀಡಿದ ಜಾಗಗಳ ವಿವರ:
1. ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರಂ ಹೋಬಳಿ, ಹಗದೂರು ಗ್ರಾಮದ ಸ.ನಂ.135 ರಲ್ಲಿ 0-26 ಗುಂಟೆ ಜಮೀನನ್ನು ಕಾಯ್ದಿರಿಸಿ ದಿನಾಂಕ:02.09.2026 ರಂದು ಆದೇಶಿಸಲಾಗಿದೆ.
2. ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಯರಪ್ಪನಹಳ್ಳಿ ಗ್ರಾಮದ ಸ.ನಂ.20 ರಲ್ಲಿ 0-35 ಗುಂಟೆ ಜಮೀನನ್ನು ಕಾಯ್ದಿರಿಸಿ ದಿನಾಂಕ:19.08.2026 ರಂದು ಆದೇಶಿಸಲಾಗಿದೆ.
3. ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಹೊಂಗಸಂದ್ರ ಗ್ರಾಮದ ಸ.ನಂ.44 ರಲ್ಲಿ 1-01 ಎ/ಗು ಜಮೀನನ್ನು ಕಾಯ್ದಿರಿಸಿ ದಿನಾಂಕ:19.08.2026 ರಂದು ಆದೇಶಿಸಲಾಗಿದೆ.
4. ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ತಮ್ಮನಾಯಕನಹಳ್ಳಿ ಗ್ರಾಮದ ಸ.ನಂ.23ರಲ್ಲಿ 15-00 ಎಕರೆ ಜಮೀನನ್ನು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
5. ಯಲಹಂಕ ತಾಲ್ಲೂಕು, ಜಾಲಾ ಹೋಬಳಿ, ಬಾಗಲೂರು ಗ್ರಾಮದ ಸ.ನಂ.211ರಲ್ಲಿ 2-00 ಎಕರೆ ಜಮೀನನ್ನು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
6. ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಸ.ನಂ.63 ರಲ್ಲಿ 4-00 ಎಕರೆ ಮತ್ತು ಗಿಡೇನಹಳ್ಳಿ ಗ್ರಾಮದ ಸ.ಸಂ.80 ರಲ್ಲಿ 2-00 ಎಕರೆ ಜಮೀನನ್ನು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
ಕಂದಾಯ ಇಲಾಖೆಯಿಂದ ಮಂಜೂರಾದ ಜಮೀನನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದು, ಜೆಸಿಬಿ ಮೂಲಕ ಜಾಗವನ್ನು ಲೆವೆಲಿಂಗ್ ಮಾಡಿ ಕಾಂಪೌಂಡ್/ಬೇಲಿ ಹಾಕಲು ಸೂಚಿಸಲಾಗಿದೆ. ತದನಂತರ ಪೊಲೀಸ್ ಇಲಾಖೆ ಸಿಬ್ಬಂದಿಗಳು ಯಾವ ವಾಹನ ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿ ಮುಂದಿನ 15-20 ದಿನಗಳ ಒಳಗಾಗಿ ಎಲ್ಲಾ ವಾಹನಗಳನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ನಗರದ ಟ್ರಾಫಿಕ್ ಹಾಗೂ ಫುಟ್ಪಾತ್ ಸುಧಾರಣೆ ಮತ್ತೊಂದು ಸಣ್ಣ ಹೆಜ್ಜೆ.
ಪೊಲೀಸ್ ಠಾಣೆಗಳಿಗೆ ಮುಕ್ತವಾಗಲಿದೆ ಜಾಗ
ವಾಹನಗಳ ಸ್ಥಳಾಂತರದಿಂದ ಪೊಲೀಸ್ ಠಾಣೆಗಳ ಆವರಣದಲ್ಲಿ ಸಾಕಷ್ಟು ಜಾಗ ಮುಕ್ತವಾಗಲಿದೆ. ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲೆ ಬಿದ್ದಿರುವ ವಾಹನಗಳನ್ನು ತೆರವುಗೊಳಿಸುವುದರಿಂದ ಪಾದಚಾರಿಗಳ ಸಂಚಾರ ಸುಗಮವಾಗುವ ಜೊತೆಗೆ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ. ದಶಕಗಳಿಂದ ಬಗೆಹರಿಯದೆ ಉಳಿದಿದ್ದ ಈ ಸಮಸ್ಯೆಗೆ ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಸಮನ್ವಯದಿಂದ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಲಾಗಿದೆ.
'ಜಸ್ಟ್ ಕ್ಲೀನ್ ಬೆಂಗಳೂರು' ಅಭಿಯಾನದ ಭಾಗ
ಈ ಕ್ರಮವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆರಂಭಿಸಿರುವ 'ಜಸ್ಟ್ ಕ್ಲೀನ್ ಬೆಂಗಳೂರು' ಹಾಗೂ 'ಫ್ರೀಡಮ್ ಫ್ರಮ್ ವೇಸ್ಟ್' ಅಭಿಯಾನದ ಭಾಗವಾಗಿದೆ. ನಗರದಲ್ಲಿ ಕಸ ಮತ್ತು ಕಟ್ಟಡ ಅವಶೇಷಗಳಷ್ಟೇ ಅಲ್ಲದೆ, ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯ, ಹಳೆಯ ವಸ್ತುಗಳು ಹಾಗೂ ಅನಗತ್ಯ ಅಡಚಣೆಗಳನ್ನು ತೆರವುಗೊಳಿಸಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಜಪ್ತಿ ವಾಹನಗಳ ಸಮಸ್ಯೆಯೂ ಹಲವು ಇಲಾಖೆಗಳ ಸಮನ್ವಯದ ಕೊರತೆಯಿಂದ ವರ್ಷಗಳಿಂದ ಬಗೆಹರಿಯದೆ ಉಳಿದಿತ್ತು. ಇದೀಗ ಕಂದಾಯ ಇಲಾಖೆ ಅಗತ್ಯ ಭೂಮಿಯನ್ನು ಗುರುತಿಸಿರುವುದರಿಂದ ಪೊಲೀಸ್ ಇಲಾಖೆಗೆ ವಾಹನಗಳನ್ನು ಸ್ಥಳಾಂತರಿಸಲು ಸ್ಪಷ್ಟ ಮಾರ್ಗ ಸಿಕ್ಕಿದೆ.


Click it and Unblock the Notifications
