Pawan Kalyan: ಪವನ್ ಕಲ್ಯಾಣ್ OG ಸಿನಿಮಾ: ಬೆಂಗಳೂರು ಪೊಲೀಸರಿಂದ ಮಹತ್ವದ ಟ್ವೀಟ್!
Pawan Kalyan: ಬೆಂಗಳೂರಿನಲ್ಲಿ ತೆಲುಗು ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದ ದೃಶ್ಯ ಅಥವಾ ಕಥೆಯಿಂದ ಅಲ್ಲ ಅಭಿಮಾನಿಗಳ ಹುಚ್ಚಾಟದಿಂದ ಇದು ಬೆಂಗಳೂರಿನಲ್ಲಿ ಸುದ್ದಿಯಲ್ಲಿದೆ. ಬೆಂಗಳೂರಿನ ವಿವಿಧ ಚಿತ್ರಮಂದಿರಗಳಲ್ಲಿ ತೆಲುಗು ಭಾಷೆಯ ಹಾಗೂ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಹುಚ್ಚಾಟ ಪ್ರದರ್ಶಿಸಿದ್ದು ಭಾರೀ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈಚೆಗೆ ಪವನ್ ಕಲ್ಯಾಣ್ ಅವರ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಅವರಿಗೆ ಶುಭಕೋರುವ ಬ್ಯಾನರ್‌ಗಳನ್ನು ತೆಲುಗು ಭಾಷೆಯಲ್ಲಿ ಅಳವಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಡಿ.ಜೆ ಬಳಕೆ ಹಾಗೂ ಲಾಂಗ್ ಬೀಸಿರುವುದು ಹೆಚ್ಚು ಚರ್ಚೆಗೆ ಕಾರಣವಾಗಿದೆ ಈ ಸಂಬಂಧ ಬೆಂಗಳೂರು ಪೊಲೀಸರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಅವರ ಸಿನಿಮಾ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇನ್ನು ಈ ಸಿನಿಮಾ ವಿದೇಶಗಳಲ್ಲೂ ಬಿಡುಗಡೆಯಾಗಿದೆ. ಆದರೆ ಈ ಸಿನಿಮಾ ನೋಡುವಾಗ ಅವರ ಅಭಿಮಾನಿಗಳು ಮಿತಿ ಮೀರಿ ವರ್ತನೆ ಮಾಡುತ್ತಿರುವುದು ಸ್ಥಳೀಯರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಟಾಲಿವುಡ್ ನಟ ಹಾಗೂ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಬಹುನಿರೀಕ್ಷಿತ ಚಿತ್ರ ದಿ ಕಾಲ್ ಹಿಮ್ ಒಜಿ (They Call Him OG) ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ಆಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾಡಿವಾಳ ಪೊಲೀಸರು ರಿಯಾಕ್ಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ದಿ ಕಾಲ್ ಹಿಮ್ ಒಜಿ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಕೆಲವೊಂದು ವಿವಾದ ಸೃಷ್ಟಿಯಾಗಿತ್ತು. ಅದರಲ್ಲಿ ಮುಖ್ಯವಾಗಿ ಡಿ.ಜೆ ಬಳಕೆ ಮಾಡಿದ್ದರೂ ಸಹ ಒಂದಾಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮಡಿವಾಳ ಪೊಲೀಸರು, ಸಂಧ್ಯಾ ಥಿಯೇಟರ್‌ನಲ್ಲಿ ಕಳೆದ ಬಾರಿ ಕೇವಲ ತೆಲುಗು ಭಾಷೆಯ ಬ್ಯಾನರ್ ಹಾಕಿ ವಿವಾದ ಆಗಿತ್ತು. ಈ ಸಲ ಮುಂಚಿತವಾಗಿಯೇ ನಾವು ನೋಟಿಸ್ ನೀಡಿದ್ದೇವೆ. ಹಾಗಾಗಿ ಬ್ಯಾನರ್‌ಗಳು ಕನ್ನಡದಲ್ಲಿ ಕಂಗೊಳಿಸುತ್ತಿದೆ. DJ ಪೂರ್ವ ಸಿದ್ಧತೆ ಮಾಡಿದ್ದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
@BlrCityPolice @Chethan_Surya_S @CPBlr @DCPSEBCP @AddlCPEast ಸಂಧ್ಯಾ ಥಿಯೇಟರ್‌ನಲ್ಲಿ ಕಳೆದ ಬಾರಿ ಕೇವಲ ತೆಲುಗು ಭಾಷೆಯ ಬ್ಯಾನರ್ ಹಾಕಿ ವಿವಾದ ಆಗಿತ್ತು. ಈ ಸಲ ಮುಂಚಿತವಾಗಿಯೇ ನಾವು ನೋಟಿಸ್ ನೀಡಿದ್ದೇವೆ. ಹಾಗಾಗಿ ಬ್ಯಾನರ್‌ಗಳು ಕನ್ನಡದಲ್ಲಿ ಕಂಗೊಳಿಸುತ್ತಿದೆ. DJ ಪೂರ್ವ ಸಿದ್ಧತೆ ಮಾಡಿದ್ದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ pic.twitter.com/abA4pUCG1w
— MADIVALA PS, ಮಡಿವಾಳ ಪೊಲೀಸ್ ಠಾಣೆ (@madivalaps) September 25, 2025
ಪೊಲೀಸ್ ಸೂಚನೆಯನ್ನು ಉಲ್ಲಂಘಿಸಿ DJ ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಿಕೊಟ್ಟ ಸಂಧ್ಯಾ ಟಾಕೀಸ್ ವ್ಯವಸ್ಥಾಪಕರ ವಿರುದ್ಧ ನ್ಯಾಯಾಲಯದ ಅನುಮತಿ ಪಡೆದು FIR ದಾಖಲಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಧ್ಯಾ ಟಾಕೀಸ್ ಬಳಿ OG ಚಲನಚಿತ್ರ ವೀಕ್ಷಿಸಲು ಬಂದ ಕೆಲವರು ಚಲನಚಿತ್ರದ ಕಟೌಟ್ ಮುಂಭಾಗದಲ್ಲಿ ಫೋಟೋ ತೆಗೆಸಿಕೊಳ್ಳಲೆಂದು ಪ್ಲಾಸ್ಟಿಕ್ ಖಡ್ಗಗಳನ್ನು ತಂದಿದ್ದು,ಇವುಗಳನ್ನು ಸಾರ್ವಜನಿಕವಾಗಿ ಎತ್ತಿ ಹಿಡಿದು ಜಳಪಿಸಿ ಪ್ರದರ್ಶನ ಮಾಡಿದ್ದ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಮಡಿವಾಳ ಪೊಲೀಸರು ಮತ್ತೊಂದು ಟ್ವೀಟ್ ಹಂಚಿಕೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾ ಮನರಂಜನೆಗಿಂತಲೂ ಬೇರೆ ಕಾರಣಕ್ಕೆ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ.












Click it and Unblock the Notifications