159 ಕಡೆ ವಿಜಯ್ ಮಲ್ಯ ಆಸ್ತಿ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು
ಬೆಂಗಳೂರು, ಜುಲೈ 5: ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಿದ್ಧರಾಗಿರುವ ಉದ್ದೇಶಪೂರ್ವಕ ಸುಸ್ತಿದಾರ ವಿಜಯ್ ಮಲ್ಯ ಅವರಿಗೆ ಸೇರಿದ 159 ಆಸ್ತಿಗಳನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ.
ರಾಜ್ಯದ ವಿವಿಧೆಡೆ ಪರಿಶೀಲನೆ ನಡೆಸಿರುವ ಪೊಲೀಸರು, ಮಲ್ಯ ಹಾಗೂ ಅವರ ಕಂಪೆನಿ ಯುನೈಟೆಡ್ ಬ್ರೀವರೀಸ್‌ಗೆ ಸೇರಿದ ಆಸ್ತಿಗಳನ್ನು ಗುರುತಿಸಿದ್ದು, ಅವುಗಳ ವಿವರಗಳನ್ನು ಜಾರಿ ನಿರ್ದೇಶನಾಲಯದ ಮೂಲಕ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಮಲ್ಯ ಹಾಗೂ ಅವರ ಕಂಪೆನಿಗೆ ಸೇರಿರುವ, ರಾಜ್ಯದ ವಿವಿಧೆಡೆ ಇರಬಹುದಾದ ಇನ್ನೂ ಆಸ್ತಿಪಾಸ್ತಿಗಳ ವಿವರಗಳನ್ನು ಕಲೆಹಾಕಲು ಸಮಯಾವಕಾಶ ಬೇಕೆಂದು ಬೆಂಗಳೂರು ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ.

ವಿವಿಧ ಬ್ಯಾಂಕುಗಳ ಸಾಲವನ್ನು ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ದೇಶಪೂರ್ವಕ ಸುಸ್ತಿದಾರ ವಿಜಯ್ ಮಲ್ಯ ಅವರಿಗೆ ಸೇರಿರುವ ಆಸ್ತಿಗಳ ವಿವರಗಳನ್ನು ಪತ್ತೆಹಚ್ಚುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಾರ್ಚ್ 27ರಂದು ಬೆಂಗಳೂರು ಪೊಲೀಸರಿಗೆ ಸೂಚಿಸಿತ್ತು.
ಮಲ್ಯ ಅವರ ಆಸ್ತಿಗಳ ವಿವರಗಳನ್ನು ಪಡೆದುಕೊಳ್ಳುವ ಸಲುವಾಗಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಈ ಆದೇಶ ನೀಡಿತ್ತು.
ಫೆರಾ ಉಲ್ಲಂಘನೆ ಪ್ರಕರಣದಡಿ ಮಲ್ಯ ಅವರ ಆಸ್ತಿಗಳ ವಿವರಗಳನ್ನು ಪರಿಶೀಲಿಸಿ ಒದಗಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದ ನ್ಯಾಯಾಧೀಶ ದೀಪಕ್ ಶೆಹ್ರಾವತ್, ಮೇ 8ರ ವೇಳೆಗೆ ಈ ಸಂಬಂಧ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.












Click it and Unblock the Notifications