Bengaluru Police: ಬೈಕ್ ವ್ಹೀಲಿಂಗ್ ಮಾಡುವವರಿಗೆ ಪೊಲೀಸರ ಎಚ್ಚರಿಕೆ
ಬೆಂಗಳೂರಿನಲ್ಲಿ ವ್ಹೀಲಿ ಮಾಡುವ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಿನ ವಾಹನ ಸಂಚಾರ ಇರುವ ರಸ್ತೆಗಳಲ್ಲಿ ಕೂಡ ಗುಂಪು ಗುಂಪಾಗಿ ವ್ಹೀಲಿಂಗ್ ಮಾಡುತ್ತಾ ಬೇರೆ ವಾಹನ ಸವಾರರಿಗೆ ಆತಂಕ ಮೂಡಿಸುತ್ತಿದ್ದಾರೆ. ನಗರದ ಟ್ರಾಫಿಕ್ ಪೊಲೀಸರು ಕೂಡ ವ್ಹೀಲಿ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದಾರೆ.
ಇತ್ತಿಚೆಗೆ ಬೆಂಗಳೂರು ನಗರ ಪೊಲೀಸರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಗರದ ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈಗ ಆ ರೀತಿ ಸ್ಟಂಟ್ ಮಾಡಿದ್ದ ಪುಂಡರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ದೃಶ್ಯಾವಳಿಗಳು, ಅನೇಕ ಪುಂಟರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವ ಮೂಲಕ ಇತರ ಪ್ರಯಾಣಿಕರಲ್ಲಿ ಆತಂಕ ಮೂಡಿಸುತ್ತಿರುವುದನ್ನು ನೋಡಬಹುದು.
ನಾವು ಸಿದ್ಧವಾಗಿದ್ದೇವೆ ಎಂದ ಪೊಲೀಸರು
"ನಗರದ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತೀರಾ? ನಿಮ್ಮ ಸಾಹಸವನ್ನು ನಿಲ್ಲಿಸಲು ನಮ್ಮ ಅಧಿಕಾರಿಗಳು ಯಾವಾಗಲೂ ಸಿದ್ಧರಾಗಿದ್ದಾರೆ" ಎಂದು ಬೆಂಗಳೂರು ನಗರ ಪೊಲೀಸರು ಸ್ಟಂಟ್ ಮಾಡುವ ವ್ಯಕ್ತಿಗಳ ವೀಡಿಯೊವನ್ನು ಹಂಚಿಕೊಂಡಿದ್ದು, ವ್ಹೀಲಿಂಗ್ ಮಾಡಿದ ಪುಂಡರನ್ನು ಬಂಧಿಸಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Wheeling on city roads? Our officers are always ready to bring your adventure to a halt.#WeServeWeProtect pic.twitter.com/q8sXqDxJVY
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) August 17, 2024
ಹೆಲ್ಮೆಟ್ ಹಾಕದೆ ವಾಹನ ಚಾಲನೆ ಮಾಡುವುದಲ್ಲದೆ, ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಾ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದನ್ನು ನೋಡಬಹುದು. ಇದಕ್ಕೆ ಪೊಲೀಸರು ತ್ವರಿತವಾಗಿ ಕ್ರಮ ತೆಗೆದುಕೊಂಡಿದ್ದು, ಒಟ್ಟು 44 ಮಂದಿಯನ್ನು ಬಂಧಿಸಿದ್ದು, ಎಲ್ಲಾ ಸ್ಕೂಟರ್, ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ರೀತಿ ವ್ಹೀಲಿಂಗ್ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ 33 ಪ್ರಕರಣಗಳು ದಾಖಲಿಸಲಾಗಿದೆ.
ಪೊಲೀಸರ ಕ್ರಮಕ್ಕೆ ಶ್ಲಾಘನೆ
ಹಲವು ನೆಟ್ಟಿಗರು ಪೊಲಿಸರ ಕ್ರಮವನ್ನು ಶ್ಲಾಘಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ತುರ್ತಾಗಿ ಕ್ರಮ ತೆಗೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಪೊಲೀಸರು ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ. ಪೊಲೀಸರು ಈಗ ಕ್ರಮ ತೆಗೆದುಕೊಳ್ಳುತ್ತಿದ್ದರು, ಇಂತಹ ಘಟನೆಗಳಿಗೆ ಕಡಿವಾಣ ಬೀಳುತ್ತಿಲ್ಲ, ಇನ್ನು ವಿಭಿನ್ನವಾಗಿ ಏನಾದರೂ ಮಾಡಬೇಕು ಎಂದು ಹೇಳಿದ್ದಾರೆ.
ಶನಿವಾರ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಅಡಕಮಾರನಹಳ್ಳಿ ಬಳಿ ವೀಲಿಂಗ್ ಮಾಡುತ್ತಿದ್ದ ಪುಂಡರು, ಅಪಘಾತ ಮಾಡಿದ್ದರು. ಬಳಿಕ ಸಿಟ್ಟಿಗೆದ್ದ ವಾಹನ ಸವಾರರು, ಎರಡು ಬೈಕ್‌ಗಳನ್ನು ಫ್ಲೈಓವರ್ ನಿಂದ ಕೆಳಗೆ ಬಿಸಾಕಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.












Click it and Unblock the Notifications