ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಕ್ಕೆ "ಅರೇಬಿಕ್' ಹೆಸರು ನಾಮಕರಣ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಮನವಿ, ನೆಟ್ಟಿಗರು ಏನಂದ್ರು
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದ ನಿಲ್ದಾಣಗಳಿಗೆ ಹೆಸರು ಮರುನಾಮಕರಣ ಮಾಡುವ ವಿಚಾರವು ಪದೇ ಪದೇ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬೆಂಗಳೂರಿನ ನಮ್ಮ ಮೆಟ್ರೋದ ಪ್ರಮುಖ ನಿಲ್ದಾಣ "ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ' ಎಂದು ಹೆಸರು ಮರುನಾಮಕರಣ ಮಾಡುವುದಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮೆಟ್ರೋ ನಿಲ್ದಾಣವೊಂದಕ್ಕೆ "ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ' ಎಂದು ಹೆಸರು ಮರು ನಾಮಕರಣ ಮಾಡುವುದಕ್ಕೆ ಮನವಿ ಮಾಡಿದ್ದಾರೆ. ಈ ಪ್ರಸ್ತಾವಕ್ಕೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಸರು ಬದಲಾವಣೆಗೆ ಜಮೀರ್ ಅಹ್ಮದ್ ಖಾನ್ ಮನವಿ
ಬೆಂಗಳೂರಿನ ನಮ್ಮ ಮೆಟ್ರೋದ ಪಿಂಕ್ ಲೈನ್‌ನಲ್ಲಿರುವ ಪ್ರಸ್ತಾವಿತ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬದಲಾಗಿ 'ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ' ಎಂದು ಮರುನಾಮಕರಣ ಮಾಡುವಂತೆ ಕೋರಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಪ್ರದೇಶದ ಐತಿಹಾಸಿಕ ಮತ್ತು ಭೌಗೋಳಿಕ ಗುರುತನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಹೆಸರನ್ನು ಪರಿಗಣಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ನಾಗೇಂದ್ರ ಹಾಗೂ ಹೆಸ್ಕಾಂ ಅಧ್ಯಕ್ಷರಾದ ಜನಾಬ್ ಅಜ್ಜಂಪೀರ್ ಖಾದ್ರಿ ಅವರು ಸಹ ಇದ್ದರು.
Bengaluru Pink Line Metro: ಕನ್ನಡಪರ ಸಂಘಟನೆಗಳ ವಿರೋಧ
ಇನ್ನು ಸಚಿವ ಜಮೀರ್ ಅಹಮದ್ ಖಾನ್ ಅವರ ಪ್ರಸ್ತಾವನೆಗೆ ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಕನ್ನಡಿಗ ರಂಜಾನ್ ಸಾಬ್ ಮೆಟ್ರೋ ನಿಲ್ದಾಣ ಜಮೀರ್ ಅಹಮದ್ ಖಾನ್ ಅವರೇ ಇದನ್ನು ಬಿಟ್ಟು ಅದೇ ಮೆಟ್ರೋ ನಿಲ್ದಾಣಕ್ಕೆ ಕನ್ನಡ ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ಕನ್ನಡಿಗ ಬಳ್ಳಾರಿಯ ರಂಜಾನ್ ಸಾಬ್ ಅವರ ಹೆಸರಿಡಲು ದಯವಿಟ್ಟು ಮನವಿ ಮಾಡಿ. ನಿಮ್ಮ ಸಮುದಾಯದ ಸಾಕಷ್ಟು ಜನರಿಗೆ ಇವರ ಹೆಸರೇ ಗೊತ್ತಿಲ್ಲದಿರಬಹುದು ಎಂದಿದ್ದಾರೆ. ಯಾವ ಯಾವ ಊರಿನ ಹೆಸರು ಏನಿದೆಯೋ ಅದೇ ಇರಲಿ, ಬೇರೆ ಹೆಸರು ಬೇಡ ಎಂದು ನೆಟ್ಟಿಗರು ಹೇಳಿದ್ದಾರೆ.
Bengaluru Pink Line Metro: ನೆಟ್ಟಿಗರು ಹೇಳಿದ್ದೇನು ?
ಕಾಡುಗೊಂಡನಹಳ್ಳಿ ಸರಿಯಾದ ಹೆಸರು ಯಾವ ಬದಲಾವಣೆ ಬೇಕಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. 'ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ' ಎನ್ನುವುದಕ್ಕಿಂತಲೂ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣ ಎನ್ನುವುದು ಅತ್ಯಂತ ಸೂಕ್ತವಾದ ಹೆಸರಾಗಿದೆ. ಬೆಂಗಳೂರಿನಲ್ಲಿ ಆಯಾ ಪ್ರದೇಶದ ಜನ ಹೆಚ್ಚಾಗಿ ಗುರುತಿಸುವ ಹೆಸರುಗಳನ್ನೇ ನಾಮಕರಣ ಮಾಡುವುದು ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಮತ್ತು ಬೆಂಗಳೂರಿಗೂ ಅರೇಬಿಕ್‌ಗೂ ಏನು ಸಂಬಂಧ ,ಈಗ ನೀವು ಯಾರು ಮಾತಾಡಲ್ಲ , ಸುಮ್ಮನೆ ಮೋಹನ್‌ದಾಸ್ ಪೈ ಹಿಂದೆ ಬಿದ್ದಿದ್ದೀರಿ ಎಂದೂ ಕೆಲವರು ಕನ್ನಡಪರ ಸಂಘಟನೆಗಳು ಈ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಕಾಡುಗೊಂಡನಹಳ್ಳಿಯ ಅಸ್ಮಿತೆಯನ್ನು ಅಳಿಸಿ, ಒಂದು ಧಾರ್ಮಿಕ ಸಂಸ್ಥೆಯ ಹೆಸರನ್ನು ಹೇರುವ ಅಗತ್ಯವೇನು, ಮೆಟ್ರೋ ನಿಲ್ದಾಣಗಳು ಇಡೀ ಪ್ರದೇಶವನ್ನು ಪ್ರತಿನಿಧಿಸಬೇಕೇ ಹೊರತು ಒಂದು ಸಂಸ್ಥೆಯ ಪ್ರಚಾರದ ವೇದಿಕೆಯಾಗಬಾರದು. ಸ್ಥಳೀಯ ಗುರುತನ್ನು ರಾಜಕೀಯ ಓಲೈಕೆಗಾಗಿ ಬಲಿಕೊಡುವುದು ತಪ್ಪು ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
