Bengaluru PG: ನಿಯಮ ಉಲ್ಲಂಘನೆ: ಬೆಂಗಳೂರಿನ 14 ಪಿಜಿಗಳಿಗೆ ಬೀಗ ಹಾಕಿದ ಜಿಬಿಎ!
Bengaluru PG: ಬೆಂಗಳೂರಿನಲ್ಲಿ ಪಿಜಿಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಳೆದ ಕೆಲವು ದಿನಗಳಿಂದ ಎಚ್ಚರಿಕೆಯನ್ನು ಕೊಡುತ್ತಲ್ಲೇ ಬರುತ್ತಿದೆ. ಇದೀಗ ಫೀಲ್ಡ್‌ಗೆ ಇಳಿದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿರುವ ಪಿಜಿಗಳಿಗೆ ಬೀಗ ಹಾಕುವುದಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿ ಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆರೋಗ್ಯ ವಿಭಾಗ ಅಧಿಕಾರಿಗಳಿಗೆ ಆದೇಶಿಸಲಾಗಿತ್ತು. ಇದರ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ 14 ಪಿಜಿಗಳಿಗೆ ಬೀಗ ಹಾಕಿದ ಪಾಲಿಕೆ
ಇನ್ನು ಪ್ರಾರಂಭಿಕ ಹಂತವಾಗಿ ಬೆಂಗಳೂರಿನ 14 ಪಿ.ಜಿಗಳಿಗೆ ಬೀಗ ಹಾಕಲಾಗಿದೆ. ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ / ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿ.ಬಿ.ಎ. ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ 14 ಪೇಯಿಂಗ್ ಗೆಸ್ಟ್‌ಗಳನ್ನು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಮಾರ್ಗದರ್ಶನದಲ್ಲಿ, ಆರೋಗ್ಯಾಧಿಕಾರಿ ಡಾ. ಸವಿತಾ ಅವರ ನೇತೃತ್ವದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳ ತಂಡವು ಪರಿಶೀಲನೆ ನಡೆಸಿ ವಸತಿಗೃಹಗಳ (ಪಿಜಿ) ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀಗ ಹಾಕಲಾದ ವಸತಿಗೃಹಗಳ ವಿವರಗಳು
ಮಹದೇವಪುರ ವಿಧಾನಸಭಾ ಕ್ಷೇತ್ರ
1. ಎಸ್.ವಿ.ಕೆ. ಪಿ.ಜಿ ಪಟ್ಟಂದೂರು ಅಗ್ರಹಾರ, ಐಟಿಪಿಲ್ ಬ್ಯಾಕ್ ಗೇಟ್
2. ವಂಶಿ ಕೃಷ್ಣ ಪಿಜಿ, ಪಟ್ಟಂದೂರು ಅಗ್ರಹಾರ ಐಟಿಪಿಎಲ್ ಹಿಂದಿನ ಗೇಟ್
3. ಡ್ವೆಲ್ ಕೋ-ಲಿವಿಂಗ್ ಪಿಜಿ ಲಕ್ಷ್ಮಿನಾರಾಯಣಪುರ, ನಾಗಪ್ಪ ರೆಡ್ಡಿ ಲೇಔಟ್
4. ರಾಯಲ್ ಹೋಮ್ ಸ್ಟೇಸ್ ಪಿಜಿ ,ಮೈತ್ರಿ ಲೇಔಟ್, 3ನೇ ಅಡ್ಡರಸ್ತೆ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
5. ಡ್ರೀಮ್ ಲ್ಯಾಂಡ್ ಪಿಜಿ ವೆಂಟಕಾಮೃತ ನಿಲಯಂ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
6. ಝೋಲೋ ಅಸ್ಮಿ ಜೆಂಟ್ಸ್ ಪಿಜಿ,1ನೇ ಅಡ್ಡರಸ್ತೆ, ಯಶೋಮತಿ ಆಸ್ಪತ್ರೆಯ ಹಿಂದೆ, ರಾಘವೇಂದ್ರ ಲೇಔಟ್, ಮಾರತ್ ಹಳ್ಳಿ
7. ಕೆ.ಆರ್.ಜೆಂಟ್ಸ್ ಪಿ.ಜಿ., 5ನೇ ಕ್ರಾಸ್, ರಾಮಾಂಜನೇಯಲೇಔಟ್ ಮಾರತ್ ಹಳ್ಳಿ
ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ
1. ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿ.ಜಿ, ನಂ.39 & 40, 8ನೇ ಕ್ರಾಸ್, ಮುನಿಯಪ್ಪ ಲೇಔಟ್ ಹೊರಮಾವು
2.ಸೆಂಟ್ ಮರಿಯಾ, ಲೇಡೀಸ್ ಪಿಜಿ, ನಂ.109, ನಾಗಪ್ಪ ರೆಡ್ಡಿ ಲೇಔಟ್, ದೂರವಾಣಿನಗರ,
3. ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿ.ಜಿ., ಶರಾವತಿ ಲೇಔಟ್, ಕೆ.ಆರ್.ಪುರಂ
4. ಗಣೇಶ ಜೆಂಟ್ಸ್ ಪಿ.ಜಿ., ಕೃಷ್ಣ ಥಿಯೇಟರ್ ರಸ್ತೆ, ಬಸವನಪುರ
5. ಎಸ್.ಎಸ್.ವಿ ಟವರ್ ಪಿಜಿ ಲಕ್ಷ್ಮೀ ಸಾಗರ ಲೇಔಟ್ ಮಹದೇವಪುರ
6. ಬ್ಲಿಸ್ ಕೋ-ಲಿವಿಂಗ್ ಪಿ.ಜಿ. 20, 2ನೇ ಕ್ರಾಸ್ ಶ್ರೀ. ಕೃಷ್ಣ ಗಾರ್ಡನ್ ಲೇಔಟ್ ಬಿ ನಾರಾಯಣಪುರ.
7. ವಿ.ಡಿ.ಎಸ್ ಲಕ್ಸುರಿ ಪಿಜಿ ಫಾರ್ ಲೇಡೀಸ್ ,ಸತ್ಯ ಬಡಾವಣೆ
ಉದ್ದಿಮೆ ಪರವಾನಗಿ ಅಭಿಯಾನ
ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ 10.11.2025 ರಿಂದ 15.11.2025 ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಗರ ಪಾಲಿಕೆ ವ್ಯಾಪ್ತಿಯ 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಗಿದೆ. ಈ ಅವಧಿಯಲ್ಲಿ ನಗರ ಪಾಲಿಕೆಯ 17 ವಾರ್ಡ್‌ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು 'ಏಕ ಗವಾಕ್ಷಿ' ಅಡಿಯಲ್ಲಿ ಒಟ್ಟು ₹25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಪರವಾನಗಿ
ಅಗತ್ಯ ದಾಖಲೆಗಳಾದ ವಾಣಿಜ್ಯ ಮಳಿಗೆ ಕರಾರು ಪತ್ರ ಹಾಗೂ ವಿದ್ಯುತ್ ಬಿಲ್ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಉದ್ದಿಮೆ ಪರವಾನಗಿ ನೀಡಲು ಪೂರ್ವ ನಗರ ಪಾಲಿಕೆಯು ವ್ಯವಸ್ಥೆಯನ್ನು ಕಲ್ಪಿಸಿದ್ದು, 17 ವಾರ್ಡ್ಗಗಳೊಂದಿಗೆ ವಾಣಿಜ್ಯ ಪ್ರದೇಶಗಳಲ್ಲೂ ವಿಶೇಷ ಶಿಬಿರ ಏರ್ಪಡಿಸುವ ಮೂಲಕ ಪಾರದರ್ಶಕವಾಗಿ , ವೇಗವಾಗಿ ಮತ್ತು ನಾಗರಿಕ-ಸ್ನೇಹಿ ಉದ್ದಿಮೆ ಪರವಾಗಿ ಸೇವೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications