Get Updates
Get notified of breaking news, exclusive insights, and must-see stories!

‘ಅತಿಥಿ ದೇವೋ ಭವ’ದಿಂದ ವಾಣಿಜ್ಯ ಮಾದರಿವರೆಗೆ: ಕಾನೂನು ಕಡ್ಡಾಯದ ಕಠಿಣ ಕಾಲಘಟ್ಟದಲ್ಲಿ ಬೆಂಗಳೂರು ಪಿಜಿ ಸಂಸ್ಕೃತಿಯ ಪರಿವರ್ತನೆ

ಪಿಜಿ ವಲಯದ ಕುಸಿತವು ಕೇವಲ ಮಾಲೀಕರ ಸಮಸ್ಯೆಯಲ್ಲ; ಇದು ಬೆಂಗಳೂರಿನ ಆರ್ಥಿಕ ಚಲನವಲನಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು ಸಿಲಿಕಾನ್‌ ಸಿಟಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಹಿಂದೆಯೇ ನಗರದ ಚಿತ್ರಣ, ಜನಜೀವನ ಎಲ್ಲವೂ ಹೊಸ ಸ್ವರೂಪ ಪಡೆದುಕೊಂಡಿತು. ಹೊರ ಜಿಲ್ಲೆಗಳು, ಹೊರ ರಾಜ್ಯದ ಜನ ಉದ್ಯೋಗ ಅರಿಸಿ ಬೆಂಗಳೂರಿಗೆ ದಾಂಗುಡಿ ಇಟ್ಟರು. ಆಗ ಬೆಂಗಳೂರು ಇನ್ನೂ ಟ್ರಾಫಿಕ್‌ ಕಿರಿಕಿರಿಯಿಲ್ಲದ, ಈಗಿನಂತೆ ಹೆಚ್ಚು ಜನಸಂದಣಿ ಕಾಣದ ಊರಾಗಿತ್ತು. ಕೆಲಸಕ್ಕಾಗಿ ಬೆಂಗಳೂರಿಗೆ ಕಾಲಿಟ್ಟವರಿಗೆ ಆಗ ಬಾಡಿಗೆ ಮನೆಗಳು ಅಷ್ಟಾಗಿ ಇರಲೂ ಇಲ್ಲ. ಈ ಸಮಯದಲ್ಲಿ ಹೊಸ ಜನರೊಂದಿಗೆ ಪೇಯಿಂಗ್‌ ಗೆಸ್ಟ್‌ (PG) ಎನ್ನುವ ಹೊಸ ಪ್ರವೃತ್ತಿಯೂ ಬೆಂಗಳೂರಿಗೆ ಕಾಲಿಟ್ಟಿತು. ಈಗ ಬೆಂಗಳೂರನ್ನು ಪಿಜಿಗಳ ಊರು ಎಂದು ಕರೆದರೂ ಅಚ್ಚರಿಯೇನಲ್ಲ, ಅಷ್ಟರಮಟ್ಟಿಗೆ ನಗರದೆಲ್ಲೆಡೆ ಈ ಪಿಜಿ ನಡೆಸುವುದು ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ.

ಮನೆಯಲ್ಲಿ ಆಶ್ರಯ ನೀಡುವುದು ಸಂಸ್ಕೃತಿಯಾಗಿದ್ದ ಕಾಲ

1980ರ ದಶಕದಲ್ಲಿ ಮನೆಗಳಲ್ಲಿ ವಿದ್ಯಾರ್ಥಿಗಳನ್ನು ಅತಿಥಿಗಳಂತೆ ಇರಿಸಿಕೊಳ್ಳುತ್ತಿದ್ದ ಸಂಸ್ಕೃತಿಯು 2000ರ ನಂತರ ವಾಣಿಜ್ಯ ಅಂದರೆ ಲಾಭದ ದೃಷ್ಟಿಗೆ ಬದಲಾಯಿತು. ಶಿಕ್ಷಣ ಮತ್ತು ಐಟಿ ಉದ್ಯಮದ ಬೆಳವಣಿಗೆಯೊಂದಿಗೆ ಪಿಜಿಗಳ ಸಂಖ್ಯೆ ಹೆಚ್ಚಾಯಿತು.1980ರ ದಶಕದ ಹಳೆಯ ಬೆಂಗಳೂರಿನ ಕೆಲವರ ಮನೆಯಲ್ಲಿ ಬೇರೆ ಊರಿನಿಂದ ಬಂದ, ಆಪ್ತ ವಲಯದ, ಸ್ನೇಹಿತರ ಮನೆಯವರು ಸೇರಿದಂತೆ ಯಾರಾದರೂ ಒಬ್ಬ ವಿದ್ಯಾರ್ಥಿ ಇದ್ದೇ ಇರುತ್ತಿದ್ದ. ಅವರನ್ನು ಆಗ ನಿಜವಾದ ಅತಿಥಿಗಳೆಂದೇ ನೋಡಿಕೊಳ್ಳಲಾಗುತ್ತಿತ್ತು. ಆಗ ಹಣ ಮಾಡಬೇಕೆಂದು ಯಾರೂ ಯೋಚಿಸಿರಲಿಲ್ಲ. ಕೆಲವೊಮ್ಮೆ ಮಕ್ಕಳ ಪೋಷಕರು ಸ್ವಲ್ಪ ಹಣ ಬಿಟ್ಟು ಹೋಗುತ್ತಿದ್ದರು. ಅದು ಸಹ ಸಹಾಯದ ರೂಪದಲ್ಲಿ, ಬಿಟ್ಟರೆ ಅಧಿಕೃತವಾಗಿ ಏನೂ ಇರಲಿಲ್ಲ. ಆಗೆಲ್ಲ ಸಂಬಂಧಿಕರ ಮಕ್ಕಳು, ಸ್ನೇಹಿತರ ಮಕ್ಕಳಿಗೆ ತಂಗಲು ಮನೆ ಕೊಡುವುದು ಒಂದು ಸಾಮಾಜಿಕ ಸಂಸ್ಕೃತಿಯಾಗಿತ್ತು.

Bengaluru PG Accommodation

1998-99ರ ಹೊತ್ತಿಗೆ ಆರ್ಥಿಕ ಉದಾರೀಕರಣದ ಪರಿಣಾಮವಾಗಿ ಮನೆಗಳಲ್ಲಿ ಖಾಲಿ ಕೊಠಡಿಗಳನ್ನು ಆದಾಯದ ಮೂಲವನ್ನಾಗಿಸಲು ಜನರು ಯೋಚಿಸಲು ಪ್ರಾರಂಭಿಸಿದರು. ಅದರಂತೆ 2003-2005ರ ವೇಳೆಗೆ ಬೆಂಗಳೂರು ನಗರದಲ್ಲಿ ಪೇಯಿಂಗ್ ಗೆಸ್ಟ್ (PG) ವ್ಯವಸ್ಥೆ ವೇಗವಾಗಿ ವಿಸ್ತರಿಸಿತು. ಐಟಿ, ಬಿಪಿಒ ಕ್ಷೇತ್ರದ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ವಲಸೆ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಯಿತು. ಈಗ ಬಾಡಿಗೆ ₹ 2000 ರಿಂದ ₹ 11000ರವರೆಗೆ ಇದೆ. 12 ಹಾಸಿಗೆಗಳಿಗಿಂತ ಹೆಚ್ಚು ಇರುವ ಪಿಜಿಗಳನ್ನು ವಾಣಿಜ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ.

ಆರಂಭದಲ್ಲಿ ಮನೆಯ ಹೆಚ್ಚುವರಿ ಕೊಠಡಿಯನ್ನು ಬಾಡಿಗೆಗೆ ನೀಡುತ್ತಿದ್ದರೆ, ಇಂದಿಗೆ ಪಿಜಿಗಾಗಿ ಪ್ರತ್ಯೇಕ ಕಟ್ಟಡಗಳೇ ನಿರ್ಮಾಣವಾಗುತ್ತಿವೆ. ವಿದ್ಯಾರ್ಥಿ ಹಾಸ್ಟೆಲ್‌ಗಳ ಕೊರತೆ ಮತ್ತು ಬಾಡಿಗೆ ದರಗಳ ಏರಿಕೆಯಿಂದ ಪಿಜಿ ವ್ಯಾಪಾರ ಲಾಭದಾಯಕವಾಯಿತು. ಇಂದಿನ ದರಗಳು ಸ್ಥಳ ಮತ್ತು ಸೌಲಭ್ಯಗಳ ಆಧಾರದ ಮೇಲೆ ಇವೆ. ಪಿಜಿ ವಲಯ ವಿಸ್ತರಿಸುತ್ತಿದ್ದಂತೆ ನಿಯಂತ್ರಣದ ಅಗತ್ಯವೂ ಹೆಚ್ಚಾಗಿದೆ. ಸುರಕ್ಷೆ, ಸ್ವಚ್ಛತೆ ಮತ್ತು ಕಾನೂನು ಅನುಸರಣೆ ಕುರಿತ ಚರ್ಚೆಗಳು ಸಹ ಮುನ್ನೆಲೆಗೆ ಬಂದಿವೆ.

ಕೋ-ಲಿವಿಂಗ್ ಪಿಜಿಗಳಿಗೆ ಹೆಚ್ಚಿದ ಬೇಡಿಕೆ

ನಗರದ ಪೇಯಿಂಗ್‌ ಗೆಸ್ಟ್ ವಲಯವು ಹೊಸ ರೂಪ ಪಡೆದುಕೊಂಡಿದ್ದು, ಪ್ರೀಮಿಯಂ ಮತ್ತು ಹೈ-ಎಂಡ್ ಕೋ-ಲಿವಿಂಗ್ ಸ್ಪೇಸ್‌ಗಳಿಗೆ ಬೇಡಿಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ವಿಶೇಷವಾಗಿ ಐಟಿ ಮತ್ತು ಸ್ಟಾರ್ಟ್‌ಅಪ್ ವಲಯದ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ನಗರದಲ್ಲಿನ ಪ್ರಮುಖ ಪ್ರದೇಶಗಳಲ್ಲಿ ಲಕ್ಸುರಿ ಪಿಜಿಗಳು ವೇಗವಾಗಿ ವಿಸ್ತರಿಸುತ್ತಿವೆ. ಕೋರಮಂಗಲ, ವೈಟ್‌ಫೀಲ್ಡ್, ಇಂದಿರಾನಗರ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಮತ್ತು ಎಚ್‌ಎಸ್‌ಆರ್ ಲೇಔಟ್ ಪ್ರದೇಶಗಳು ಹೈ-ಎಂಡ್ ಪಿಜಿಗಳ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ. ಇಲ್ಲಿನ ಐಟಿ ಪಾರ್ಕ್‌ಗಳು, ಮೆಟ್ರೋ ಸಂಪರ್ಕ, ಕೆಫೆ ಸಂಸ್ಕೃತಿ ಮತ್ತು ಸ್ಟಾರ್ಟ್‌ಅಪ್ ಪರಿಸರದ ಕಾರಣದಿಂದ ಯುವ ಉದ್ಯೋಗಿಗಳ ಮೊದಲ ಆಯ್ಕೆಯಾಗುತ್ತಿದೆ.

ಪ್ರೀಮಿಯಂ ಪಿಜಿಗಳಲ್ಲಿ ಸಿಂಗಲ್ ರೂಮ್‌ಗಳ ಮಾಸಿಕ ಬಾಡಿಗೆ ₹ 15,000ರಿಂದ ₹ 25,000 ಅಥವಾ ಅದಕ್ಕಿಂತ ಹೆಚ್ಚು ಇದೆ. ಎಸಿ, ದಿನನಿತ್ಯ ಊಟ, ಹೌಸ್‌ಕೀಪಿಂಗ್, ಲಾಂಡ್ರಿ, ಹೈ-ಸ್ಪೀಡ್ ವೈ-ಫೈ, ಜಿಮ್, ಪವರ್ ಬ್ಯಾಕ್‌ಅಪ್ ಮತ್ತು 24/7 ಭದ್ರತೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಗರದಲ್ಲಿ ಬ್ರಾಂಡೆಡ್ ಕೋ-ಲಿವಿಂಗ್ ಕಂಪನಿಗಳು ಬಲಿಷ್ಠ ನೆಟ್ವರ್ಕ್ ನಿರ್ಮಿಸಿವೆ. ಕೆಲ ಸಂಸ್ಥೆಗಳು ಪ್ರೀಮಿಯಂ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನು ಆಕರ್ಷಿಸುತ್ತಿವೆ.

Bengaluru PG Accommodation

ಐಟಿ ವಲಯದಲ್ಲಿ ಮಧ್ಯಮ ಮತ್ತು ಉನ್ನತ ವೇತನ ಪಡೆಯುವ ಉದ್ಯೋಗಿಗಳು ಹೆಚ್ಚಿನ ಠೇವಣಿ ನೀಡದೇ, ಫರ್ನಿಷ್ಡ್ ಫ್ಲಾಟ್ ಹುಡುಕುವ ತೊಂದರೆ ತಪ್ಪಿಸಲು ಕೋ-ಲಿವಿಂಗ್ ಆಯ್ಕೆ ಮಾಡುತ್ತಿದ್ದಾರೆ. ಫ್ಲೆಕ್ಸಿಬಲ್ ಸ್ಟೇ ಮತ್ತು 'ಹೋಟೆಲ್-ಮಾದರಿಯ' ಅನುಭವವು ಕೂಡ ಆಕರ್ಷಣೆಯಾಗಿದೆ. ಸಾಮಾನ್ಯ ಪಿಜಿಗಳು ನಿಯಂತ್ರಣ ಮತ್ತು ವೆಚ್ಚದ ಒತ್ತಡ ಎದುರಿಸುತ್ತಿರುವ ಸಂದರ್ಭದಲ್ಲಿ, ಹೈ-ಎಂಡ್ ಪಿಜಿಗಳು ಜೀವನಶೈಲಿ ಆಧಾರಿತ ವಸತಿ ಮಾದರಿಯಾಗಿ ಬೆಳೆಯುತ್ತಿವೆ. ತಜ್ಞರ ಅಭಿಪ್ರಾಯದಲ್ಲಿ, ಮುಂದಿನ ದಿನಗಳಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ಸೌಲಭ್ಯಗಳ ಆಧಾರದ ಮೇಲೆ ಪಿಜಿ ವಲಯವು ಸ್ಪಷ್ಟವಾಗಿ ವಿಭಜನೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ 'ಪಿಜಿ' ಈಗ ಕೇವಲ ವಸತಿ ಆಯ್ಕೆಯಲ್ಲ; ಅದು ಯುವ ಉದ್ಯೋಗಿಗಳ ಜೀವನಶೈಲಿ ಆಯ್ಕೆಯಾಗಿ ರೂಪಾಂತರಗೊಂಡಿದೆ.

ಇದನ್ನೂ ಓದಿ: Bengaluru PG: ಬೆಂಗಳೂರಿನಲ್ಲಿ 8 ಪಿಜಿಗಳಿಗೆ ಬಿತ್ತು ಬೀಗ, 574 ಪೇಯಿಂಗ್ ಗೆಸ್ಟ್ ವಸತಿ ಗೃಹಗಳಿಗೆ ತಿಳುವಳಿಕೆ ಪತ್ರ ಜಾರಿ

ಹೊಸ ಕಾನೂನುಗಳಿಂದ ಪಿಜಿ ಉದ್ಯಮ ತತ್ತರ

ಬೆಂಗಳೂರು ನಗರದ ಪೇಯಿಂಗ್ ಗೆಸ್ಟ್ (PG) ವಲಯವು ಇತ್ತೀಚೆಗೆ ಗಂಭೀರ ಪರಿವರ್ತನೆಯ ಹಂತವನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಹೊಸದಾಗಿ ನಗರಕ್ಕೆ ಕಾಲಿಟ್ಟ ಯುವಜನತೆಗೆ 'ಮೊದಲ ಆಶ್ರಯ'ವಾಗಿದ್ದ ಪಿಜಿ ವಲಯ ಈಗ ನಿಯಂತ್ರಣ, ಮುಚ್ಚುವಿಕೆ ಮತ್ತು ಆರ್ಥಿಕ ಒತ್ತಡಗಳ ನಡುವೆ ಕುಸಿತದ ದಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದ್ದು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಫೆಬ್ರವರಿ 18ರಿಂದ ಪಿಜಿ ವಸತಿ ಸೌಕರ್ಯಗಳ ಪರಿಶೀಲನೆ ಆರಂಭಿಸಬೇಕು ಎಂದು ಸೂಚಿಸಿದೆ.

ನಗರದ ಪೇಯಿಂಗ್ ಗೆಸ್ಟ್ ಅಕಮೋಡೇಶನ್ ವೆಲ್‌ಫೇರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಪ್ರಾದೇಶಿಕ ಆರೋಗ್ಯ ಅಧಿಕಾರಿ ಹಾಗೂ ಎಡಿಟಿಪಿ ಒಟ್ಟಿಗೆ ಸ್ಥಳ ಪರಿಶೀಲನೆ ನಡೆಸಬೇಕು. ಕಟ್ಟಡ ಅನುಮೋದಿತ ಪ್ಲ್ಯಾನ್‌ಗೆ ತಕ್ಕಂತೆ ಇದೆಯೇ ಎಂದು ಪರಿಶೀಲಿಸಬೇಕು. ಈ ಪಿಜಿಗಳು ಜೋನಲ್ ನಿಯಮಗಳಿಗೆ ಅನುಗುಣವಾಗಿದೆಯೇ ಎಂದು ನೋಡಬೇಕು. ಎರಡು ವಾರಗಳಲ್ಲಿ ಇದನ್ನು ಪೂರ್ಣಗೊಳಿಸಲು ಸೂಚನೆ ನೀಡಿದ್ದು, ಅರ್ಜಿದಾರರು ಸಹಕರಿಸಬೇಕು ಎಂಬ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ.

ಪಿಜಿಗಳು ಪಾಲಿಸಬೇಕಾದ ನಿಯಮಗಳು

ಬಿಬಿಎಂಪಿ-2020 ಕಾಯ್ದೆಯ ಸೆಕ್ಷನ್ 305, 307, 308ರಡಿ ಪಿಜಿಗಳಿಗೆ ಕಡ್ಡಾಯ ನಿಯಮಗಳನ್ನು ಸೂಚಿಸಲಾಗಿದ್ದು, ಪ್ರತಿಯೊಬ್ಬರಿಗೂ ಕನಿಷ್ಠ 70 ಚದರ ಅಡಿ ವಾಸಸ್ಥಳ, 90 ದಿನಗಳ ಸಿಸಿಟಿವಿ ಫೂಟೇಜ್ ಸಂಗ್ರಹಣೆ, ಪ್ರತಿವ್ಯಕ್ತಿಗೆ ಪ್ರತಿದಿನ 135 ಲೀಟರ್ ನೀರಿನ ಲಭ್ಯತೆ, ಅಗ್ನಿ ಸುರಕ್ಷತಾ ಪ್ರಮಾಣಪತ್ರ, 24/7 ಭದ್ರತಾ ಸಿಬ್ಬಂದಿ, ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪರವಾನಗಿ, ತುರ್ತು ಸಹಾಯವಾಣಿ ಸಂಖ್ಯೆಗಳ ಪ್ರದರ್ಶನ, ಪ್ರಥಮ ಚಿಕಿತ್ಸೆ ಕಿಟ್, ಕಸದ ವಿಂಗಡಣೆ ಕಡ್ಡಾಯ, ಈ ನಿಯಮಗಳ ಪಾಲನೆ ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಬೇಕು ಎಂದು ಹಿಂದಿನ ಬಿಬಿಎಂಪಿ ಆದೇಶಿಸಿದೆ.

ದಕ್ಷಿಣ, ಪೂರ್ವ ವಲಯಗಳಲ್ಲಿ ಸೀಲ್ ಕಾರ್ಯಾಚರಣೆ

ಇತ್ತೀಚೆಗೆ ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ಅಧಿಕಾರಿಗಳು ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಮತ್ತು ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ನಡೆಸಿದ ಪರಿಶೀಲನೆ ವೇಳೆ 19 ಪಿಜಿಗಳನ್ನು ಸೀಲ್ ಮಾಡಿದರು. ಜೊತೆಗೆ ₹61,000 ದಂಡ ವಸೂಲಿ ಕೂಡ ಮಾಡಲಾಯಿತು. ಜಯನಗರದಲ್ಲಿ 3 ಪಿಜಿ ಮುಚ್ಚಲ್ಪಟ್ಟವು. ಬೆಂಗಳೂರು ದಕ್ಷಿಣದಲ್ಲಿ 4. ಬಿಟಿಎಂ ಲೇಔಟ್‌ನಲ್ಲಿ 3, ಬೊಮ್ಮನಹಳ್ಳಿಯಲ್ಲಿ 9 ಪಿಜಿಗಳು ಬಂದ್‌ ಆದವು. ಬೆಂಗಳೂರು ಪೂರ್ವ ವಲಯದಲ್ಲೂ 20ಕ್ಕೂ ಹೆಚ್ಚು ಪಿಜಿಗಳು ಮುಚ್ಚಲ್ಪಟ್ಟಿವೆ.

Bengaluru PG Accommodation

ಪೇಯಿಂಗ್ ಗೆಸ್ಟ್ ಓನರ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಈ ಕ್ರಮವನ್ನು ಸ್ವಾಗತಿಸಿ, ಶೇ 70ರಷ್ಟು ಪಿಜಿಗಳು ಪೂರ್ವ ವಲಯದಲ್ಲಿವೆ. ನಿಯಮ ಪಾಲನೆ ಮಾಡದ ಅನೇಕ ಕಟ್ಟಡಗಳಿಗೆ ಈ ಕ್ರಮ ಶಿಸ್ತು ತರುತ್ತದೆ ಎಂದಿದ್ದಾರೆ. ಆದರೆ ಸಣ್ಣ ಮಾಲೀಕರಿಗೆ ನಿಯಮ ಪಾಲನೆ ಭಾರವಾಗಿದೆ. ರಸ್ತೆ ಅಗಲ 40 ಅಡಿಗಿಂತ ಕಡಿಮೆ ಇದ್ದರೆ ಮುಚ್ಚುವುದು, ಟ್ರೇಡ್ ಲೈಸೆನ್ಸ್ ಇಲ್ಲದಿದ್ದರೆ ಸೀಲ್ ಮಾಡುವುದು, ಅಗ್ನಿ ಸುರಕ್ಷತಾ ಸುಧಾರಣೆ ವೆಚ್ಚ, ವಿದ್ಯುತ್, ನೀರು, ಪರವಾನಗಿ ಶುಲ್ಕ ಏರಿಕೆ ಇವೆಲ್ಲವೂ ಪಿಜಿ ವಲಯವನ್ನು ಆರ್ಥಿಕವಾಗಿ ಕುಗ್ಗಿಸುತ್ತಿವೆ ಎಂಬ ಕಳವಳವನ್ನೂ ಮುಂದಿಟ್ಟಿದ್ದಾರೆ.

ಐಟಿ ವಲಯದ ಹೊಡೆತ; ಪಿಜಿಗಳಿಗೆ ಬೇಡಿಕೆ ಕುಸಿತ

ಕಳೆದ ಒಂದು ವರ್ಷದಿಂದಲೂ ಪಿಜಿ ಉದ್ಯಮ ನಷ್ಟ ಹೊರೆಯನ್ನು ಹೊತ್ತಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ, ರಿಮೋಟ್ ವರ್ಕ್ ಹೆಚ್ಚಳ, ನೇಮಕಾತಿ ನಿಧಾನ ಇವೆಲ್ಲವುದರಿಂದ ಹೊಸದಾಗಿ ವಿದ್ಯಾರ್ಥಿಗಳು ಮತ್ತು ಫ್ರೆಶರ್‌ಗಳ ನಗರ ಪ್ರವೇಶ ಕಡಿಮೆಯಾಗಿದೆ. ಹೀಗಾಗಿ PG ಬೇಡಿಕೆ ತೀವ್ರವಾಗಿ ಕುಸಿದಿದೆ. ಪಿಜಿ ವಲಯದ ಕುಸಿತವು ಕೇವಲ ಮಾಲೀಕರ ಸಮಸ್ಯೆಯಲ್ಲ. ಇದು ಬೆಂಗಳೂರಿನ ಆರ್ಥಿಕ ಚಲನವಲನಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ. ಫೆಬ್ರವರಿ 18ರಿಂದ ಆರಂಭವಾಗುವ ಪರಿಶೀಲನೆಗಳು ಪಿಜಿ ವಲಯಕ್ಕೆ ತಿರುವು ನೀಡುವ ಸಾಧ್ಯತೆ ಇದೆ. ಶಿಸ್ತು, ಸುರಕ್ಷತೆ ಮತ್ತು ಹೈಜೀನ್ ಒಂದು ಕಡೆ; ಲಭ್ಯತೆ ಮತ್ತು ಕೈಗೆಟುಕುವ ವಸತಿ ಮತ್ತೊಂದು ಕಡೆ ಈ ಎರಡರ ಮಧ್ಯೆ ಸಮತೋಲನ ಸಾಧಿಸುವುದು ನಗರ ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡಿದ ಬೆಂಗಳೂರಿನ ಪಿ.ಜಿ, ಹೋಟೆಲ್‌ಗಳಿಂದ 2.5 ಲಕ್ಷ ರೂ. ವಸೂಲಿ

10,000ಕ್ಕೂ ಹೆಚ್ಚು ಅನೌಪಚಾರಿಕ ಪಿಜಿಗಳು

ಹಿಂದಿನ ಬಿಬಿಎಂಪಿ ದಾಖಲೆಯ ಪ್ರಕಾರ 2,500 ಪಿಜಿಗಳು ನೋಂದಾಯಿತವಾಗಿದ್ದರೂ, ಅಂದಾಜು 10,000ಕ್ಕೂ ಹೆಚ್ಚು ಪಿಜಿಗಳು ಅನೌಪಚಾರಿಕವಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ಈ ವಲಯದ ಮೇಲೆ ಕಡ್ಡಾಯ ಪರಿಶೀಲನೆ, ದಂಡ ಮತ್ತು ಸೀಲ್ ಕ್ರಮ ಜಾರಿಯಾಗಿದೆ. ಒಂದು ಕಾಲದಲ್ಲಿ 'ಅತಿಥಿ ದೇವೋ ಭವ' ಮನೋಭಾವದಿಂದ ಹುಟ್ಟಿದ ಈ ಸಂಸ್ಕೃತಿ ಇಂದು ವಾಣಿಜ್ಯ ಮಾದರಿಯನ್ನು ಅಪ್ಪಿಕೊಂಡಿದೆ. ಆದರೆ ಅದರ ಮೂಲ ಉದ್ದೇಶವಾದ ಹೊಸ ನಗರಕ್ಕೆ ಬಂದ ಯುವಜನತೆಗೆ ಆಶ್ರಯ ನೀಡುವ ಮನಸ್ಸು ಇನ್ನೂ ಜೀವಂತವಾಗಿ ಉಳಿದಿದೆಯೇ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಪಿಜಿ ಸಂಸ್ಕೃತಿ ಬೆಂಗಳೂರು ನಗರದ ಆರ್ಥಿಕ ಹಾಗೂ ಸಾಮಾಜಿಕ ಕಥೆಯ ಅವಿಭಾಜ್ಯ ಅಂಗವಾಗಿದೆ. ಕಾಲದ ಅಗತ್ಯಕ್ಕೆ ಅನುಗುಣವಾಗಿ ಅದು ರೂಪಾಂತರಗೊಂಡಿದೆ. ಭವಿಷ್ಯದಲ್ಲಿ ನಿಯಂತ್ರಣ ಮತ್ತು ಮಾನವೀಯತೆಯ ಸಮತೋಲನ ಸಾಧಿಸಿದರೆ, ಈ ಸಂಸ್ಕೃತಿ ಇನ್ನೂ ಹಲವು ಪೀಳಿಗೆಗಳಿಗೆ ಆಶ್ರಯವಾಗಿಯೇ ಉಳಿಯಲಿದೆ.

ಪಿಜಿ ಈ ಕಾರಣಕ್ಕೆ ಒಳ್ಳೆಯದು

ಬಾಡಿಗೆ ಮನೆಗೆ ಹೋಲಿಸಿದರೆ ಪಿಜಿಗಳು ಹೆಚ್ಚು ಸೌಕರ್ಯ ಹೊಂದಿರುತ್ತದೆ. ಸ್ವಚ್ಛತೆ ಮಾಡುವ ಶ್ರಮವೂ ಕಡಿಮೆ. ಅಡುಗೆ ಮಾಡಬೇಕು ಎನ್ನುವ ತಲೆನೋವು ಇರೋದಿಲ್ಲ. ವಾರಪೂರ್ತಿ ತರಹೇವಾರಿ ಊಟ, ತಿಂಡಿ ಸಿಗುತ್ತದೆ. ಪಿಜಿಗಳಲ್ಲಿ ಹೆಚ್ಚಿನ ಭದ್ರತೆಯೂ ಇರುತ್ತದೆ. ಹಣವೂ ಉಳಿಸಬಹುದು. ಬಾಡಿಗೆ ಮನೆಗಳಾದರೆ ಖರ್ಚೇ ಹೆಚ್ಚಾಗುತ್ತದೆ. ದುಡಿಯುವ ಸಂಬಳವೆಲ್ಲ ಬಾಡಿಗೆಗೇ ಇಡಬೇಕು. ವೈಯಕ್ತಿಕ ಕೆಲಸಗಳಿಗೆ ಸಮಯವೂ ಸಿಗುವುದಿಲ್ಲ ಎನ್ನುತ್ತಾರೆ ಕೋರಮಂಗಲದ ಪಿಜಿಯೊಂದರಲ್ಲಿ ಇರುವ‌ ಖಾಸಗಿ ಕಂಪನಿ ಉದ್ಯೋಗಿ ಮಧುಸೂದನ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+