Bengaluru PG: ಬೆಂಗಳೂರಿನಲ್ಲಿ 8 ಪಿಜಿಗಳಿಗೆ ಬಿತ್ತು ಬೀಗ, 574 ಪೇಯಿಂಗ್ ಗೆಸ್ಟ್ ವಸತಿ ಗೃಹಗಳಿಗೆ ತಿಳುವಳಿಕೆ ಪತ್ರ ಜಾರಿ
Bengaluru PG: ಬೆಂಗಳೂರಿನಲ್ಲಿ ನಿಗದಿತ ಮಾರ್ಗಸೂಚಿಗಳನ್ನು ಪಿಜಿ ವಸತಿ ಗೃಹಗಳು ಪಾಲಿಸುತ್ತಿವೆಯೇ ಎಂಬ ಕುರಿತು ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ಬಳಿಕ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ 8 ಪಿಜಿಗಳಿಗೆ ಬೀಗ ಬೀಗ ಹಾಕಲಾಗಿದೆ. ಮತ್ತೊಂದೆಡೆ 574 ಪೇಯಿಂಗ್ ಗೆಸ್ಟ್ ವಸತಿಗೃಹಗಳಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡಿರುವುದಾಗಿ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದರು.
ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನವರಿ 2026ರ ತಿಂಗಳಿನಲ್ಲಿ ಶಾಂತಿನಗರ, ಸಿ.ವಿ.ರಾಮನ್ ನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ನಡೆಯುತ್ತಿರುವ ಎಲ್ಲಾ ಪೇಯಿಂಗ್ ಗೆಸ್ಟ್ ವಸತಿಗೃಹಗಳು ಅನುಸರಿಸಬೇಕಾದ ಅಥವಾ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳ ಬಗ್ಗೆ ತಪಾಸಣೆ ನಡೆಸಲಾಗಿದೆ. ಬಳಿಕ ಒಟ್ಟು 574 ವಸತಿ ಗೃಹಗಳಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

3,09,000 ರೂಪಾಯಿ ದಂಡ: ಇವುಗಳಲ್ಲಿ ಅಡುಗೆ ಕೋಣೆ ಶುಚಿತ್ವವನ್ನು ಅನುಸರಿಸದ ಕಾರಣ ಒಟ್ಟು 08 ಪೇಯಿಂಗ್ ಗೆಸ್ಟ್ ವಸತಿಗೃಹಗಳಿಗೆ ಬೀಗ ಮುದ್ರೆಯನ್ನು ಹಾಕಲಾಗಿದ್ದು, ಇತರೆ ನ್ಯೂನ್ಯತೆಗಳಿಗೆ ಒಟ್ಟು 3,09,000 ರೂಪಾಯಿ ಮೊತ್ತದ ದಂಡವನ್ನು ಜನವರಿ ತಿಂಗಳಲ್ಲಿ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು?: ಪೇಯಿಂಗ್ ಗೆಸ್ಟ್ ವಸತಿಗೃಹಗಳಲ್ಲಿ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳಾದ ಶುದ್ಧ ಕುಡಿಯುವ ನೀರು, ಅಡುಗೆ ಕೋಣೆ ಶುಚಿತ್ವ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು ಎಫ್‌ಎಸ್‌ಎಸ್‌ಎಐನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ತಪ್ಪದೇ ಪಾಲಿಸುವಂತೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಸತಿ ಗೃಹಗಳ ಮಾಲೀಕರುಗಳಿಗೆ ಈಗಾಗಲೇ ತಿಳುವಳಿಕೆ ಪತ್ರ ನೀಡಲಾಗಿದೆ
ಇನ್ಮುಂದೆ ಕೇಂದ್ರ ನಗರ ಪಾಲಿಕೆ ವತಿಯಿಂದ ಸದರಿ ವಸತಿ ಗೃಹಗಳಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಬಗ್ಗೆ ನಿರಂತರವಾಗಿ ತಪಾಸಣೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications