Bengaluru Opposition Meet: ವಿಪಕ್ಷಗಳ ಸಭೆಯಿಂದ ಹೊರಗುಳಿದ ಜೆಡಿಎಸ್- ಬಿಜೆಪಿ ಆಹ್ವಾನಕ್ಕೆ ಕಾಯುತ್ತಿರುವ ಎಚ್‌ಡಿಕೆ?
ಬೆಂಗಳೂರು, ಜುಲೈ 17: ಜುಲೈ 17 ಹಾಗೂ 18ರಂದು ಬೆಂಗಳೂರಿನಲ್ಲಿ ( Bengaluru Opposition Meeting ) ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ಹಾಜರಾಗದಿರಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ನಿರ್ಧರಿಸಿದೆ. ಆದರೆ, ಜುಲೈ 18 ರಂದು ನಡೆಯಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸಭೆಗೆ ಜೆಡಿಎಸ್ ಹಾಜರಾಗುತ್ತದೆಯೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಬಿಜೆಪಿ ಆಹ್ವಾನಕ್ಕಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಾಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ ಅವರು ಕರೆದಿರುವ ಎನ್‌ಡಿಎ ಸಭೆಗೆ ಹಾಜರಾಗಲು ತಮಗೆ ಇನ್ನೂ ಔಪಚಾರಿಕ ಆಹ್ವಾನ ಬಂದಿಲ್ಲ ಎಂದು ಜೆಡಿಎಸ್ ಹೇಳಿಕೊಂಡಿದೆ. ಕರ್ನಾಟಕದ ಸ್ಥಳೀಯ ನಾಯಕತ್ವಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಬಿಜೆಪಿ ನಾಯಕರ ಮುಂದೆ ಪ್ರಸ್ತಾವನೆ ಮಾಡಿದ್ದೇವೆ ಎಂದು ಜೆಡಿಎಸ್‌ನ ಪ್ರಮುಖ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು, 'ವಿರೋಧ ಪಕ್ಷಗಳ ಸಭೆಯಲ್ಲಿ ಜೆಡಿಎಸ್ ಭಾಗವಹಿಸುವ ಪ್ರಶ್ನೆಯೇ ಇಲ್ಲ. ಆದರೆ, ಎನ್‌ಡಿಎ ಸಭೆಯಲ್ಲಿ ಭಾಗವಹಿಸುವ ಬಗ್ಗೆ ನಮಗೆ ಬಿಜೆಪಿ ನಾಯಕರಿಂದ ಅಧಿಕೃತ ಆಹ್ವಾನ ಇನ್ನೂ ಬಂದಿಲ್ಲ. ಆಹ್ವಾನ ಬಂದ ನಂತರ ನಾವು ನಮ್ಮ ನಿಲುವನ್ನು ತಿಳಿಸುತ್ತೇವೆ' ಎಂದು ತಿಳಿಸಿದ್ದಾರೆ.
ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ' ಜೊತೆ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, 'ನಮ್ಮ ಪಕ್ಷದ ವರಿಷ್ಠ ನಾಯಕರು ಈಗಾಗಲೇ ಜೆಡಿಎಸ್ ಅನ್ನು ಆಹ್ವಾನಿಸಿದೆ ಎಂಬುದಾಗಿ ನಾವು ತಿಳಿದುಕೊಂಡಿದ್ದೇವೆ. ಮಂಗಳವಾರದ ಎನ್‌ಡಿಎ ಸಭೆಯ ಜೆಡಿಎಸ್ ನಾಯಕರು ಹಾಜರಾಗಲಿದ್ದಾರೆ ಎಂಬುದಾಗಿ ನಾವು ಭಾವಿಸುತ್ತೇವೆ' ಎಂದು ಹೇಳಿದ್ದಾರೆ.
ಲೋಕಸಭೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಬಿಜೆಪಿ ಹಾಗೂ ಜೆಡಿಎಸ್‌ನ ಹಿರಿಯ ನಾಯಕರು ಹೇಳಿದ್ದಾರೆ. ಆದರೆ, ಸ್ಥಳೀಯ ನಾಯಕತ್ವದ ಕುರಿತು ಬಿಜೆಪಿ ನಾಯಕರ ಮುಂದೆ ಜೆಡಿಎಸ್ ಹಲವು ಪ್ರಸ್ತಾವಣೆಗಳನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಕುರಿತು ಔಪಚಾರಿಕ ಘೋಷಣೆ ಮಾಡಲು ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.

ಜೆಡಿಎಸ್‌ನಂತಹ ಹೊಸ ಪಕ್ಷಗಳನ್ನು ಸೇರಿಸಿಕೊಳ್ಳುವ ಮೂಲಕ ಎನ್‌ಡಿಎಯನ್ನು ಬಲಪಡಿಸುವುದು ಬಿಜೆಪಿಗೆ ಅನಿವಾರ್ಯವಾಗಿದೆ. 2019 ರಲ್ಲಿ ಎನ್‌ಡಿಎ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಕರ್ನಾಟಕದ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಕರ್ನಾಟಕವು ಬಿಜೆಪಿಗೆ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿನ ಅಭೂತಪೂರ್ವ ಸಾಧನೆಯನ್ನು ಮರುಕಳಿಸುವುದು ಬಿಜೆಪಿಗೆ ಕಠಿಣ ಸವಾಲಾಗಿದೆ. 15 ಕ್ಕೂ ಹೆಚ್ಚು ಸಂಸದರು ಸ್ಪರ್ಧೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ಹೊಸ ಮುಖಗಳ ಹುಡುಕಾಟದಲ್ಲಿದೆ ಎಂದು ತಿಳಿದುಬಂದಿದೆ.
ವಿಧಾನಸಭೆಯಲ್ಲಿನ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜೆಡಿಎಸ್‌ಗೂ ಮೈತ್ರಿಯ ಅವಶ್ಯಕತೆಯಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಜೆಡಿಎಸ್ ಮೈತ್ರಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರೆ, ಲಾಭವಾಗಬಹುದು ಎಂಬ ಆಶಯವನ್ನು ಜೆಡಿಎಸ್ ಹೊಂದಿದೆ.

ಜಾತ್ಯತೀತ ಸಿದ್ಧಾಂತವನ್ನು ಪ್ರತಿಪಾದಿಸುವ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ, ಡ್ಯಾಮೇಜ್ ಆಗಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಜೆಡಿಎಸ್‌ಗೆ ಸೀಮಿತ ಅಸ್ತಿತ್ವವಿದೆ. ಅದು ಹಳೇ ಮೈಸೂರು ಭಾಗದಲ್ಲಿ ಗಟ್ಟಿಯಾಗಿದೆ. ಆದರೆ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಸಾಧನೆ ಕಳಪೆಯಾಗಿದೆ.
ಒಂದು ವೇಳೆ ಮೈತ್ರಿ ಮಾಡಿಕೊಂಡರೆ, ಹಾಸನ, ಮಂಡ್ಯ ಮತ್ತು ಬೆಂಗಳೂರು ಉತ್ತರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications