ಇದೇನು ಕೃಷ್ಣ ಭೈರೇಗೌಡರ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ
ಬೆಂಗಳೂರು, ಏ 8 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಭೈರೇಗೌಡರ ಪರ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿಸಿಎಂ ಡಾ ಜಿ.ಪರಮೇಶ್ವರ್ ಅವರು ಚುನಾವಣಾ ಪ್ರಚಾರ ನಡೆಸಿದರು.
ಸೋಮವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರದಲ್ಲಿ ಸಿಎಂ, ಡಿಸಿಎಂ ಜೊತೆಗೆ ಸ್ಥಳೀಯ ಶಾಸಕರಾದ ಎಸ್. ಟಿ ಸೋಮಶೇಖರ್ ಗೌಡ, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ ಸೇರಿದಂತೆ ಹಲವು ಕಾಂಗ್ರೆಸ್, ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.
ಮೈತ್ರಿಪಕ್ಷದ ಅಭ್ಯರ್ಥಿ ಕೃಷ್ಣ ಭೈರೇಗೌಡ ಅವರು ನಗರದ ಒರಾಯನ್ ಮಾಲ್ ನಲ್ಲಿ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು. ಮಾಲ್ ನಲ್ಲಿ ನಡೆದ ಆಕರ್ಷಕ ಫ್ಲಾಶ್ ಮಾಬ್ ಡ್ಯಾನ್ಸ್ ನಲ್ಲಿ ಕಾಣಿಸಿಕೊಂಡ ಕೃಷ್ಣ ಭೈರೇಗೌಡರು, ಸ್ಥಳದಲ್ಲಿದ್ದ ಯುವಕರೊಂದಿಗೆ ಮಾತುಕತೆ ನಡೆಸಿ, ಮತದಾನದ ಮಹತ್ವವನ್ನು ವಿವರಿಸಿದರು.

ಸಾರ್ವಜನಿಕರಲ್ಲಿ ಹಾಗೂ ಯುವ ಸಮೂಹದಲ್ಲಿ ಚುನಾವಣಾ ಮಹತ್ವದ ಅರಿವು ಮೂಡಿಸಲಿಕ್ಕಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೃಷ್ಣ ಭೈರೇಗೌಡ್ರು, ಮಾಲ್ ಗೆ ಆಗಮಿಸಿದ್ದ ಜನರಿಗೆ ಖುದ್ದಾಗಿ ತಮ್ಮ ಪರಿಚಯ ಹೇಳಿಕೊಂಡು, ಬೆಂಗಳೂರಿನಂತಹ ಕಾಸ್ಮೊಪಾಲಿಟಿನ್ ನಗರದಲ್ಲಿ ಎಲ್ಲ ವರ್ಗದ ಜನರು ಇದ್ದಾರೆ. ಅದರಲ್ಲೂ ಅತಿ ಹೆಚ್ಚು ವಿದ್ಯಾವಂತರು ನಗರದಲ್ಲಿ ವಾಸವಿದ್ದಾರೆ.
ಆದರೆ ಯಾವುದೇ ಚುನಾವಣೆಯಲ್ಲೂ ನಗರದ ಕ್ಷೇತ್ರಗಳಲ್ಲಿ ಶೇ 50 - 55 ಕ್ಕಿಂತ ಹೆಚ್ಚಿನ ಮತದಾನ ಆಗುತ್ತಿಲ್ಲ. ವಿದ್ಯಾವಂತರ ನಗರದಲ್ಲಿ ಇದು ಶೋಭೆ ತರುವ ವಿಚಾರವಲ್ಲ. ಜನರಲ್ಲಿ ಪ್ರಜಾಪ್ರಭುತ್ವದ ಹಾಗೂ ಮತದಾನದ ಜಾಗೃತಿ ಮೂಡಿಸಬೇಕಿದೆ. ನಾನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ ಎಂದು ಕೃಷ್ಣ ಭೈರೇಗೌಡ್ರು ಮನವಿ ಮಾಡಿದರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿವೇಚನೆಯಿಂದ ಮತ ಚಲಾಯಿಸಿ. ಮತ ಚಲಾಯಿಸುವುದು ಬರೀ ಹಕ್ಕು ಅಷ್ಟೇ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹೀಗಾಗಿ ಮತ ಚಲಾಯಿಸಿ ನಿಮ್ಮ ಜವಾಬ್ದಾರಿ ನಿಭಾಯಿಸಿ ಎಂದು ಭೈರೇಗೌಡ್ರು ಮನವಿ ಮಾಡಿದರು.












Click it and Unblock the Notifications