Namma Metro : ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗ ಜುಲೈ ವೇಳೆಗೆ ಸಿದ್ಧ?
ಬೆಂಗಳೂರು ಏಪ್ರಿಲ್ 5: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೊಂದು ಗುಡ್ ನ್ಯೂಸ್. ಬಹುನಿರೀಕ್ಷಿತ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ಜುಲೈ ವೇಳೆಗೆ ಸಿದ್ಧವಾಗಲಿದೆ. ಹೌದು.. ಆರ್‌ವಿ ರಸ್ತೆಯಿಂದ ನಗರದ ಆಗ್ನೇಯ ಭಾಗದಲ್ಲಿರುವ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಶೀರ್ಘದಲ್ಲೇ ಸಿದ್ಧಗೊಳ್ಳಲಿದೆ.
ದಕ್ಷಿಣ ಬೆಂಗಳೂರಿನ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗ ಮೂರು ತಿಂಗಳಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಹಸಿರು ಮಾರ್ಗ ಉತ್ತರ-ದಕ್ಷಿಣ (ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್) ಮತ್ತು ಪೂರ್ವ-ಪಶ್ಚಿಮ (ಬೈಪ್ಪನಹಳ್ಳಿ-ಕೆಂಗೇರಿ) ಕಾರಿಡಾರ್‌ಗಳನ್ನು ಒಳಗೊಂಡಿದೆ. ಸದ್ಯ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಿಸುವ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗ
ಈ ಮಾರ್ಗ ಆರ್‌ವಿ ರೋಡ್ ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಮುಂದುವರಿಯುತ್ತದೆ. ಈ ಮಾರ್ಗದಲ್ಲಿ ಓಡಾಡುವ ಮೆಟ್ರೋ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ. ಜುಲೈ 2023ರ ವೇಳೆಗೆ ಈ ಮಾರ್ಗವು ಸಿದ್ಧವಾಗುತ್ತದೆ. ಸದ್ಯ ಈ ಹಳದಿ ಮಾರ್ಗದಲ್ಲಿ ಹೆಚ್ಚಿನ ಹಳಿಗಳ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಆದರೆ ನಿಲ್ದಾಣಗಳು ಬಳಕೆಗೆ ಸಿದ್ಧವಾಗಬೇಕಾಗಿದೆ. ಎಲ್ಲವೂ ಸರಿಯಾಗಿ ನಡೆದರೆ, ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಮಾರ್ಗವನ್ನು ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಾರ್ಗದ ಒಟ್ಟು ಉದ್ದ ಸುಮಾರು 19 ಕಿ.ಮೀ. ಈ ಮಾರ್ಗ 16 ನಿಲ್ದಾಣಗಳನ್ನು ಹೊಂದಿದ್ದು, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಈ ಮಾರ್ಗ ನಗರದ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಸಹ ಒಳಗೊಂಡಿರುತ್ತದೆ. ಅಲ್ಲಿ ಎರಡು ಹಂತದ ಸೇತುವೆಯು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 3.3 ಕಿಮೀವರೆಗೆ ಚಲಿಸುತ್ತದೆ.

ಈ ಮಾರ್ಗವನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ. ಒಂದನೇ ಹಂತದ ಬೊಮ್ಮಸಂದ್ರ-ಬೆರಟೇನ ಅಗ್ರಹಾರದವರೆಗೆ ಕಾಮಗಾರಿ ಸಂಪೂರ್ಣ ಮುಗಿದಿದೆ. ಎರಡನೇ ಹಂತದ ಬೆರಟೇನ ಅಗ್ರಹಾರ-ಬೊಮ್ಮನಹಳ್ಳಿವರೆಗೆ ಶೇ.99ರಷ್ಟು, 3ನೇ ಹಂತದಲ್ಲಿ ಬೊಮ್ಮನಹಳ್ಳಿ-ಆರ್.ವಿ.ರಸ್ತೆವರೆಗೆ ಕಾಮಗಾರಿ ಪೂರ್ಣಗೊಂಡಿದ್ದು ನಿಲ್ದಾಣಗಳು ಬಳಕೆಗೆ ಸಿದ್ಧವಾವಾಗಬೇಕಿದೆ. ಮುಂಬರುವ ಜುಲೈನಲ್ಲಿ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದ್ದು, ಆಗಸ್ಟ್ ಅಂತ್ಯದೊಳಗೆ ಮೆಟ್ರೋ ರೈಲನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ಜುಲೈ ವೇಳೆಗೆ ಸಿದ್ಧ?
ಆರ್.ವಿ.ರಸ್ತೆ-ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗವು ಹಾದು ಹೋಗುವ ಇಂಟರ್‌ಚೇಂಜ್ ನಿಲ್ದಾಣವು ಜಯದೇವ ಆಸ್ಪತ್ರೆ ಬಳಿ ನಿರ್ಮಾಣವಾಗುತ್ತಿದೆ. ಜಯದೇವ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ಬರಲಿದೆ. ಐದನೇ ಹಂತವು ನೆಲಮಟ್ಟದಿಂದ 29 ಮೀಟರ್ ಎತ್ತರದಲ್ಲಿರಲಿದೆ.
ಮಾತ್ರವಲ್ಲದೆ ಇದು ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎನಿಸಿಕೊಳ್ಳಲಿದೆ. ಇಂಟರ್‌ಚೇಂಜ್ ನಿಲ್ದಾಣದಲ್ಲಿ ಅಂಡರ್‌ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನಗಳ ಸಂಚಾರ, ಅದರ ಮೇಲೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಲಿದ್ದು, ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತುತ್ತಿದೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ ಉದ್ದದ ಮಾರ್ಗವನ್ನು ನಿರ್ಮಿಸಲಾಗಿದೆ. ಇದಕ್ಕೆ ಹಳದಿ ಬಣ್ಣದ ಮಾರ್ಗವೆಂದು ಹೆಸರಿಡಲಾಗಿದೆ. ಈ ಮಾರ್ಗ ನಿರ್ಮಾಣಕ್ಕೆ 4,255 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರದಲ್ಲಿ ನಿಲ್ದಾಣಗಳು ತಲೆ ಎತ್ತುತ್ತಿವೆ.












Click it and Unblock the Notifications