Toll Fee: ಬೆಂಗಳೂರು-ಮೈಸೂರು ಹೆದ್ದಾರಿ ವಾಹನ ಸವಾರರಿಗೆ ಎನ್‌ಎಚ್‌ಎಐ ಬಿಗ್ ಶಾಕ್, ಯಾರಿಗೆ ವಿನಾಯಿತಿ?
Bengaluru-Mysuru National Highway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿದೆ. ಅದರಲ್ಲೂ ಟೋಲ್ ವಿಚಾರವಾಗಿ ಅಲ್ಲಿನ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ವಾಕ್ಸಮರಗಳು ನಡೆಯುತ್ತಲೇ ಬಂದಿವೆ. ಇದೀಗ ಎನ್‌ಎಚ್‌ಎಐ NH-275ನಲ್ಲಿ ಟೋಲ್ ದರ ಹೆಚ್ಚಳ ಮಾಡಿ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾದ್ರೆ ಎಷ್ಟು ಹಾಗೂ ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಏಪ್ರಿಲ್ 1, 2026ರಂದು ವಾರ್ಷಿಕ ಟೋಲ್ ದರಗಳನ್ನು ಪರಿಷ್ಕರಿಸಿತ್ತು. ಇದಾದ ಮೂರು ತಿಂಗಳ ಅವಧಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲು (NH-275) ಮತ್ತೆ ಶುಲ್ಕವನ್ನು ಹೆಚ್ಚಳ ಮಾಡಿದೆ. ಜುಲೈ 21, 2026ರ ಮಧ್ಯರಾತ್ರಿ 12 ಗಂಟೆಯಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ಹೊಸ ದರ ಪರಿಷ್ಕರಣೆ ಯಾರಿಗೆ ಅನ್ವಯ?
ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಈ ಹೊಸ ದರಗಳು ಅನ್ವಯವಾಗಲಿವೆ. ಟೋಲ್ ಶುಲ್ಕ ಹೆಚ್ಚಳದಿಂದ ಬೆಂಗಳೂರು-ನಿಡಘಟ್ಟ ನಡುವಿನ 6 ಲೇನ್ ರಸ್ತೆಯನ್ನು ಬಳಸುವ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಲಿದೆ.
ಕಾರು, ಜೀಪ್, ವ್ಯಾನ್, ಲಘು ವಾಹನಗಳಿಗೆ ದರ ಎಷ್ಟು?
* ಏಕಮುಖ ಪ್ರಯಾಣದ ದರ - 180ರಿಂದ 185 ರೂಪಾಯಿಗೆ ಏರಿಕೆಯಾಗಿದೆ.
* 24 ಗಂಟೆಗಳ ಒಳಗಿನ ಮರುಪ್ರಯಾಣಕ್ಕೆ 275 ರೂಪಾಯಿ ನಿಗದಿಪಡಿಸಲಾಗಿದೆ.
* 50 ಏಕಮುಖ ಪ್ರಯಾಣಗಳ ಮಾಸಿಕ ಪಾಸ್ ದರವು 5,940ರಿಂದ 6,100 ರೂಪಾಯಿಗೆ ಹೆಚ್ಚಳ ಆಗಿದೆ.
ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ: ಟೋಲ್ ಪ್ಲಾಜಾದಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ಸಾರ್ವಜನಿಕರ ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದನ್ನು ಮೊದಲಿನಂತೆಯೇ 360 ರೂಪಾಯಿ ಇರಲಿದೆ ಎಂದು ತಿಳಿಸಿದೆ.
ವಾಣಿಜ್ಯ ಮತ್ತು ಭಾರಿ ವಾಹನಗಳ ದರ
* ಲಘು ವಾಣಿಜ್ಯ ವಾಹನಗಳು /ಮಿನಿ ಬಸ್ / ಗೂಡ್ಸ್ ವಾಹನಗಳ ಏಕಮುಖ ಸಂಚಾರಕ್ಕೆ 295 ರೂಪಾಯಿ
* ಎರಡು ಆಕ್ಸಲ್ ಬಸ್ ಮತ್ತು ಟ್ರಕ್ ಏಕಮುಖ ಸಂಚಾರಕ್ಕೆ 620 ರೂಪಾಯಿ, ಮೂರು ಆಕ್ಸಲ್ ವಾಣಿಜ್ಯ ವಾಹನಗಳಿಗೆ 675 ರೂಪಾಯಿ ನಿಗದಿಪಡಿಸಲಾಗಿದೆ.
* 4 ರಿಂದ 6 ಆಕ್ಸಲ್ ಭಾರಿ ವಾಹನಗಳಿಗೆ 970 ರೂಪಾಯಿ ನಿಗದಿಪಡಿಸಲಾಗಿದೆ.
* 7 ಅಥವಾ ಅದಕ್ಕಿಂತ ಹೆಚ್ಚು ಆಕ್ಸಲ್ ಹೊಂದಿರುವ ಅತಿದೊಡ್ಡ ವಾಹನಗಳಿಗೆ 1,180 ರೂಪಾಯಿ ನಿಗದಿಪಡಿಸಿದೆ.
ದರ ಹೆಚ್ಚಳಕ್ಕೆ ಪ್ರಾಧಿಕಾರ ನೀಡಿದ ಕಾರಣ ಏನು?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ 2026-27ನೇ ಹಣಕಾಸು ವರ್ಷದ ಅನ್ವಯದ ಆಧಾರದಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ. ಜನವರಿ 25, 2023ರ ಟೋಲ್ ಗ್ಯಾಜೆಟ್ ಅಧಿಸೂಚನೆ ಮತ್ತು ಜುಲೈ 18, 2026ರಂದು ಸಕ್ಷಮ ಪ್ರಾಧಿಕಾರ ನೀಡಿದ ಅನುಮೋದನೆ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಏಪ್ರಿಲ್ 1, 2026ರಂದು ಕಾರುಗಳ ಟೋಲ್ ದರವನ್ನು 175ರಿಂದ 180 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ದರ ಹೆಚ್ಚಿಸಿರುವುದು ವಾಹನ ಸವಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಸತತ ದರ ಏರಿಕೆಯಿಂದ ಬೇಸತ್ತಿರುವ ನಿತ್ಯ ಪ್ರಯಾಣಿಕರು, ಪದೇ ಪದೆ ಟೋಲ್ ಹೆಚ್ಚಿಸುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಪ್ರತಿ ತಿಂಗಳು ಸಂಚಾರಕ್ಕಾಗಿ ತಗಲುವ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತಿದೆ. ದರ ಏರಿಸುವ ಪ್ರಾಧಿಕಾರ ರಸ್ತೆ ನಿರ್ವಹಣೆ, ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆಯ ಮೂಲಸೌಕರ್ಯಗಳನ್ನು ಅಷ್ಟೇ ಗುಣಮಟ್ಟದಲ್ಲಿ ಒದಗಿಸಬೇಕು,' ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಒಟ್ಟಿನಲ್ಲಿ ಹೀಗೆ ಮತ್ತೆ ಟೋಲ್ ದರ ಹೆಚ್ಚಳ ಮಾಡಿರುವುದು ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications
