Bengaluru-Mysuru Expressway: ಮತ್ತೆ ಟೋಲ್ ದರ ಹೆಚ್ಚಳ, ವಾಹನ ಸವಾರರ ಜೇಬಿಗೆ ಕತ್ತರಿ, ಯಾವ ವಾಹನಕ್ಕೆ ಎಷ್ಟು ದರ?, ಮಾಹಿತಿ
ಬೆಂಗಳೂರು, ಜೂನ್, 13: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ವಾಗ್ವಾದಗಳು ನಡೆಯುತ್ತಲೇ ಬಂದಿವೆ. ಈಗಾಗಲೇ ಈ ಮೊದಲು ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರವು ಟೋಲ್ ಶುಲ್ಕದಲ್ಲಿ ಹೆಚ್ಚಳ ಮಾಡಿತ್ತು. ಆದರೆ ಮತ್ತೇ ಇದೀಗ ಮತ್ತೆ ಟೋಲ್ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಿರುವುದು ಮತ್ತಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ನಿಯಮ ಯಾವಾಗಿಂದ ಜಾರಿ ಆಗಿದ್ದು ಗೊತ್ತಾ?.. ಇಲ್ಲಿದೆ ನೋಡಿ ವಿವರ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ರಸ್ತೆಯ ಟೋಲ್ ಶುಲ್ಕವನ್ನು ಮತ್ತೇ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಶೇಕಡಾ 22ರಷ್ಟು ಟೋಲ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜೂನ್ 1ರಿಂದಲೇ ಶುಲ್ಕ ಹೆಚ್ಚಳ ನಿಯಮ ಅನ್ವಯ ಆಗಿದೆ. ಆದರೆ ಫಾಸ್ಟ್ ಟ್ಯಾಗ್ ಇದ್ದ ಹಿನ್ನೆಲೆ ಟೋಲ್ ದರ ಹೆಚ್ಚಳದ ಬಗ್ಗೆ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಇದೀಗ ಈ ವಿಚಾರ ಬಹಿರಂಗವಾಗಿದ್ದು, ಆಕ್ರೋಶಗಳು ಭುಗಿಲೆದ್ದಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಧಿಸಿರುವ ಟೋಲ್ ದರದ ವಿವರವನ್ನು ಇಲ್ಲಿ ನೀಡಲಾಗಿದೆ. ಹಾಗಾದರೆ ಶುಲ್ಕವನ್ನು ಯಾವ ವಾಹನಕ್ಕೆ ಎಷ್ಟು ಹೆಚ್ಚಳ ಮಾಡಿದ್ದಾರೆ ಮಾಡಿದ್ದಾರೆ ಎಂದು ತಿಳಿಯಿರಿ.
ಯಾವ ವಾಹನಕ್ಕೆ ಎಷ್ಟು ದರ ಹೆಚ್ಚಳ?
1. ಕಾರು, ವ್ಯಾನ್, ಜೀಪ್ ಏಕಮುಖ ಸಂಚಾರ: 135-165 ರೂಪಾಯಿಗೆ ಏರಿಕೆ (30 ರೂಪಾಯಿ ಹೆಚ್ಚಳ)
2. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ದರ 220-270 ರೂಪಾಯಿಗೆ ಏರಿಕೆ (50 ರೂಪಾಯಿ ಹೆಚ್ಚಳ)
3. ಟ್ರಕ್, ಬಸ್, 2 ಆ್ಯಕ್ಸೆಲ್ ವಾಹನ ಏಕಮುಖ ಸಂಚಾರ ಟೋಲ್ ದರ 460-565 ರೂಪಾಯಿಗೆ ಏರಿಕೆ (105 ರೂಪಾಯಿ ಹೆಚ್ಚಳ)
4.3 ಆ್ಯಕ್ಸೆಲ್ ವಾಹನಗಳ ಏಕಮುಖ ಸಂಚಾರ ಟೋಲ್ ದರ 500-615 ರೂಪಾಯಿಗೆ ಏರಿಕೆ (115 ರೂಪಾಯಿ ಹೆಚ್ಚಳ)
5. ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ 720- 885 ರೂಪಾಯಿಗೆ ಏರಿಗೆ (165 ರೂಪಾಯಿ ಹೆಚ್ಚಳ)
6. ಅದರಲ್ಲೂ 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳ ಟೋಲ್ ದರ 880-1,080 ರೂಪಾಯಿಗೆ ಏರಿಕೆ (200 ರೂಪಾಯಿ ಹೆಚ್ಚಳ)
ಹಾಗೆಯೇ ಈಗಾಗಲೇ ಏಪ್ರಿಲ್ 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆಗ ವಾಹನಾ ಸವಾರರು ಟೋಲ್ ಸಿಬ್ಬಂದಿಗಳು, ಮತ್ತು ಸರ್ಕಾರದ ವಿರುದ್ಧ ತರಾಟೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತ ಪ್ರಾಧಿಕಾರ ಟೋಲ್ ದರ ಹೆಚ್ಚಳದ ಆದೇಶವನ್ನು ಹಿಂಪಡೆದಿತ್ತು. ಆದರೆ ಇದೀಗ ಜೂನ್ 1ರಿಂದಲೇ ಮತ್ತೇ ಟೋಲ್ ಶುಲ್ಕ ಹೆಚ್ಚಳ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಹೆದ್ದಾರಿ ಪ್ರಾಧಿಕಾರವು ಜೂನ್ 1ರಿಂದಲೇ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದೆ. ಆದರೆ ಫಾಸ್ಟಾಗ್ ಇರುವುದರಿಂದ ಇದು ಬೆಳಕಿದೆ ಬಂದಿರಲಿಲ್ಲ. ಆದರೆ ಇದೀಗ ಈ ಶುಲ್ಕ ಹೆಚ್ಚಳದ ಮಾಹಿತಿ ತಿಳಿಯತ್ತಿದ್ದಂತೆ ಜನರು ಪ್ರಾಧಿಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ.
ರಾಮನಗರ, ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಲೋಕಾರ್ಪಣೆ ಮಾಡಿದ್ದರು. ಇನ್ನು ಇದರ ಟೋಲ್ ಸಂಗ್ರಹವನ್ನು ಫೆಬ್ರವರಿ 27ರಿಂದ ಪ್ರಾರಂಭಿಸಲಾಗಿತ್ತು.
ಬೆಂಗಳೂರು ಸಮೀಪವಿರುವ ಕಣಿಮಿಣಿಕೆ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ನಿಡಘಟ್ಟವರೆಗೆ 55.63 ಕಿಲೋ ಮೀಟರ್ ಉದ್ದದ ರಸ್ತೆಗೆ ಶುಲ್ಕ ನಿಗದಿ ಮಾಡಲಾಗಿದ್ದು, ಬೆಳಗ್ಗೆ 8 ಗಂಟೆಯಿಂದಲೇ ಟೋಲ್ ಸಂಗ್ರಹ ಆರಂಭ ಆಗಿರುತ್ತದೆ. ಅಲ್ಲದೆ ಆಗಾಗ ಟೋಲ್ ಸಿಬ್ಬಂದಿ ಹಾಗೂ ವಾಹಾನ ಸವಾರರ ನಡುವೆ ಟೋಲ್ ವಿಚಾರವಗಿ ವಾಗ್ವಾದಗಳು ನಡೆಯುತ್ತಲೇ ಇವೆ.












Click it and Unblock the Notifications