ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯಿಂದ ಆಸ್ತಿ ಮೌಲ್ಯ ಹೆಚ್ಚಳ
ಬೆಂಗಳೂರು, ಡಿ. 12: ಹೊಸದಾಗಿ ನಿರ್ಮಿಸಲಾಗಿರುವ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಿಂದಾಗಿ ಹಳ್ಳಿಗಳು ಮತ್ತು ನಗರ ಪ್ರದೇಶಗಳೆರಡರಲ್ಲೂ ಆಸ್ತಿಯ ಮೌಲ್ಯ ಹೆಚ್ಚಾಗಿದೆ. ಅದರಲ್ಲೂ ಎಕ್ಸ್‌ಪ್ರೆಸ್‌ವೇ ಹಾದುಹೋಗುವ ರಾಮನಗರ, ಚನ್ನಪಟ್ಟಣದಂತಹ ನಗರದಗಳಲ್ಲಿ ಬಾಡಿಗೆ ಮೌಲ್ಯವೂ ಹೆಚ್ಚಾಗಿದೆ.
ಈ ನಗರ ಪ್ರದೇಶಗಳಲ್ಲಿರುವವರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿರುವ ಜಮೀನುಗಳನ್ನು ವ್ಯಾಪಾರ ಮಳಿಗೆಗಳಾಗಿ, ಪ್ರಾಟ್‌ಗಳಾಗಿ ಬದಲಿಸಲು ಯೋಚಿಸುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇ ಯೋಜನೆಯಿಂದಾಗಿ ಹೊಸ ವ್ಯಾಪಾರ ವಹಿವಾಟು ನಡೆಯುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ಇಲ್ಲಿನ ಭೂಮಾಲೀಕರು.
ರಾಮನಗರದ ನಿವಾಸಿ ಕಿಶೋರ್ ಚಂದ್ರ ಅವರು ಹೊಸದಾಗಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಐದು ಎಕರೆ ಜಮೀನು ಹೊಂದಿದ್ದು, 10 ಪಥಗಳ ಎಕ್ಸ್‌ಪ್ರೆಸ್‌ವೇ ಯೋಜನೆಯ ಸಮೀಪವಿವೇ ಭೂಮಿ ಇದೆ. ಈಗ ಭೂಮಿಯ ಬೆಲೆ ಹೆಚ್ಚಾಗುತ್ತಿರುವ ಕಾರಣ ತಮ್ಮ ಕೃಷಿ ಭೂಮಿಯನ್ನು ಪ್ಲ್ಯಾಟ್ಗಳಾಗಿ ಪರಿವರ್ತಿಸಲು ಯೋಜಿಸುತ್ತಿದ್ದಾರೆ.

ಕೃಷಿ ಭೂಮಿ ಇನ್ನು, ಪ್ಲ್ಯಾಟ್‌ಗಳಾಗಿ ಬದಲಾಗಲಿವೆ
1987 ರಲ್ಲಿ ಭೂಮಿಯನ್ನು ಖರೀದಿಸಿ ಅದನ್ನು ಕೃಷಿ ಉದ್ದೇಶಗಳಿಗಾಗಿ ಬಳಸುತ್ತಿದ್ದ ರೈತ ಚಂದ್ರು ಈಗ ಅದನ್ನು ಪರಿವರ್ತಿಸುವ ಯೋಜನೆಯಲ್ಲಿದ್ದಾರೆ. "2018 ರಲ್ಲಿಯೇ ಎಕ್ಸ್‌ಪ್ರೆಸ್‌ವೇ ಯೋಜನೆ ಕಾಮಗಾರಿ ಪ್ರಾರಂಭವಾದ ನಂತರ ಈ ಪ್ರದೇಶದಲ್ಲಿ ಭೂಮಿಯ ಮೌಲ್ಯ ಹೆಚ್ಚಾಗುತ್ತದೆ ಎಂದು ನಮಗೆ ತಿಳಿದಿತ್ತು. ಈಗ, ಆ ಸಮಯ ಬಂದಿದೆ. ಹೀಗಾಗಿ ಇಲ್ಲಿ ತೋಟದ ಮನೆಯನ್ನು ನಿರ್ಮಿಸುವುದನ್ನು ಬಿಟ್ಟು ಜಮೀನನ್ನು ಪ್ಲಾಟ್‌ಗಳಾಗಿ ಪರಿವರ್ತಿಸಲು ನಾವು ಈಗಾಗಲೇ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದೇವೆ" ಎಂದಿದ್ದಾರೆ.

ಚನ್ನಪಟ್ಟಣ, ರಾಮನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ
ಕೊರೊನಾ ಸಾಂಕ್ರಾಮಿಕದಿಂದಾಗಿ ಕುಸಿದಿದ್ದ ರಿಯಲ್ ಎಸ್ಟೇಟ್ ಉದ್ಯಮ ಈಗ ಮತ್ತೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಗರಿಗೆದರಿದೆ. ಎರಡು ವರ್ಷಗಳ ನಂತರ ಈ ಪ್ರದೇಶದಲ್ಲಿ ಭೂಮಿಯ ಮೌಲ್ಯವು ಹೆಚ್ಚುತ್ತಿದೆ.
"ಬೆಂಗಳೂರಿನ ಬೆಳವಣಿಗೆ, ಟ್ರಾಫಿಕ್ ಮತ್ತು ಹೆಚ್ಚಿನ ಮಾಲಿನ್ಯದಿಂದಾಗಿ ಹೂಡಿಕೆದಾರರು ಹೆಚ್ಚಾಗಿ ನಗರದ ಹೊರವಲಯವನ್ನು, ವಿಶೇಷವಾಗಿ ಚನ್ನಪಟ್ಟಣ ಮತ್ತು ರಾಮನಗರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಇಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಹೆಚ್ಚಾಗುತ್ತಿದೆ. ಭೂಮಿಯ ಬೇಡಿಕೆಯು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಆಸ್ತಿಗೆ ಬೆಲೆಗಳನ್ನು ಹೆಚ್ಚಿಸಿದೆ" ಎಂದು ಬೆಂಗಳೂರಿನ ಕ್ರೆಡೈ ಅಧ್ಯಕ್ಷ ಭಾಸ್ಕರ್ ಟಿ.ನಾಗೇಂದ್ರಪ್ಪ ಹೇಳಿದ್ದಾರೆ.
ಕೃಷಿ ಭೂಮಿಯ ಬೆಲೆಯು ಬಹುಪಟ್ಟು ಹೆಚ್ಚಾಗಿರುವ ಜೊತೆಗೆ, ಎಕ್ಸ್‌ಪ್ರೆಸ್‌ವೇ ಪಕ್ಕದ ನಗರಗಳಲ್ಲಿ ರಿಯಲ್ ಎಸ್ಟೇಟ್ ಮೌಲ್ಯವೂ ಹೆಚ್ಚಾಗಿದೆ.

ಶ್ರೀರಂಗಪಟ್ಟಣ ಪಟ್ಟಣದ ಬಳಿ ಎಕರೆಗೆ 1 ಕೋಟಿ
ಶ್ರೀರಂಗಪಟ್ಟಣದ ನಿವಾಸಿ ಶ್ರೀನಿವಾಸಯ್ಯ ಮಾತನಾಡಿ, 'ದಶಕದ ಹಿಂದೆ ಶ್ರೀರಂಗಪಟ್ಟಣ ಪಟ್ಟಣದ ಸಮೀಪ ಎಕರೆಗೆ 10 ಲಕ್ಷದಿಂದ 20 ಲಕ್ಷ ರೂಪಾಯಿವರೆಗೆ ವೆಚ್ಚವಾಗುತ್ತಿತ್ತು. ಆದರೆ ಈಗ ಕೆಲವು ಪ್ರದೇಶಗಳಲ್ಲಿ 60 ಲಕ್ಷದಿಂದ, 80 ಲಕ್ಷ ಮತ್ತು 1 ಕೋಟಿ ರೂಪಾಯಿಯವರೆಗೂ ಇದೆ. ಎಕ್ಸ್‌ಪ್ರೆಸ್‌ವೇ ಬಂದ ನಂತರ ಸಮೀಪದ ಗ್ರಾಮಗಳ ಭೂಮಿಯ ಮೌಲ್ಯವೂ ಹೆಚ್ಚಾಯಿತು" ಎಂದಿದ್ದಾರೆ.
"ಬೆಲೆಗಳು ಹೆಚ್ಚಾದ ಪ್ರಭಾವ ಮತ್ತು ಕೃಷಿಯಿಂದ ಬರುವ ಆದಾಯ ಕೂಡ ಉತ್ತಮವಾಗಿಲ್ಲದ ಕಾರಣ ಅನೇಕ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಈ ಹಿಂದೆ, ಕೋವಿಡ್ ಕಾರಣದಿಂದ ಯಾರೂ ಭೂಮಿ ಖರೀದಿಸಲು ಬಂದಿರಲಿಲ್ಲ. ಆದರೆ ಈಗ ಸಾಂಕ್ರಾಮಿಕ ರೋಗವು ಮುಗಿದಿದ್ದು, ಭೂಮಿಯ ಬೇಡಿಕೆ ಹೆಚ್ಚಾಗಿದೆ" ಎಂದಿದ್ದಾರೆ.

ಎಕ್ಸ್‌ಪ್ರೆಸ್‌ವೇಯಿಂದ ಆಸ್ತಿ ಮೌಲ್ಯಗಳು 50% ಹೆಚ್ಚಳ
"ಹೆದ್ದಾರಿಗಳು ಎಲ್ಲೆಲ್ಲಿ ಬಂದರೂ ಭೂಮಿಯ ಮೌಲ್ಯವು ತಾವಾಗಿಯೇ ಹೆಚ್ಚಾಗುತ್ತದೆ. ಆದರೆ ಸರ್ಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ, ನಾವು ಬೆಲೆಗಳನ್ನು ಹೆಚ್ಚಿಸುವುದಿಲ್ಲ. ನಂತರ ಹೆದ್ದಾರಿಗಳು ಸಿದ್ಧವಾದ ನಂತರ, ಎಕ್ಸ್‌ಪ್ರೆಸ್‌ವೇ ಸುತ್ತಮುತ್ತಲಿನ ಆಸ್ತಿಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಿನ ದರವನ್ನು ನೋಡುತ್ತವೆ "ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(ಮಾಹಿತಿ ಕೃಪೆ- ದಿ ಹಿಂದೂ)












Click it and Unblock the Notifications