Namma Metro: ಇಯರ್ ಎಂಡ್ ಹಿನ್ನಲೆ ಒಂದೇ ದಿನದಲ್ಲಿ ಲಕ್ಷಾಂತರ ಜನ ಮೆಟ್ರೋದಲ್ಲಿ ಸಂಚಾರ!
ಬೆಂಗಳೂರು ಜನವರಿ 1: ವರ್ಷಾಂತದ ಹಿನ್ನಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನದಲ್ಲಿ ಲಕ್ಷಾಂತರ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ.
ನಿನ್ನೆ ಒಂದೇ ದಿನ ಅಂದರೆ ಡಿಸೆಂಬರ್ 31ರಂದು ತಡರಾತ್ರಿಯವರಿಗೆ ಮೆಟ್ರೋದಲ್ಲಿ 6,26,202 ಜನ ಸಂಚಾರ ಮಾಡಿದ್ದಾರೆ. ಹೊಸ ವರ್ಷದ ಹಿನ್ನಲೆ ತಡರಾತ್ರಿ 2.15ರವರೆಗೆ ನಮ್ಮ ಮೆಟ್ರೋ ಸಂಚಾರ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಎಂಜಿ ರೋಡ್ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಜನ ಸಂಚಾರ ಮಾಡಿದ್ದಾರೆ. ಇಂದಿರಾ ನಗರ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಗರದ ಹೃದಯ ಭಾಗ ಮೆಜೆಸ್ಟಿಕ್ ನಿಂದಲೂ ಹೆಚ್ಚು ಜನ ಸಂಚಾರ ಮಾಡಿದ್ದಾರೆ.
ಹೊಸ ವರ್ಷ ನಮ್ಮ ಮೆಟ್ರೋ ಸಮಯ ವಿಸ್ತರಣೆ
ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಇನ್ನು ಹಲವೆಡೆ ಡಿಸೆಂಬರ್ 31ರ ರಾತ್ರಿ ಜನ ಹೊಸ ವರ್ಷದ ಸಂಭ್ರಾಮಾಚರಣೆಗೆ ಸೇರುತ್ತಾರೆ. ಆದ್ದರಿಂದ ಈ ಮಾರ್ಗಗಳಲ್ಲಿ ಮೆಟ್ರೋ, ಹೆಚ್ಚುವರಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಹಾಗೆಯೇ ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್ 31ರ ರಾತ್ರಿ ಮೆಟ್ರೋ ರೈಲು ಸಂಚಾರವನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿತ್ತು.

ಸಂಗೀತ, ನೃತ್ಯ, ಔತಣಕೂಟಗಳು ಭರಪೂರ ಮನರಂಜನೆಯೊಂದಿಗೆ ಭಾನುವಾರ ನಡುರಾತ್ರಿ 12 ಗಂಟೆಗೆ ಬೆಂಗಳೂರಿಗರು ನೂತನ ವರ್ಷಕ್ಕೆ ಹಾಯ್ ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ಬೆಂಗಳೂರಿನ ಕೇಂದ್ರ ಬಿಂದುವಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ನಿನ್ನೆ ಬೆಳಿಗ್ಗೆಯಿಂದಲೇ ಜನರಿಂದ ತುಂಬಿತ್ತು. ಲಕ್ಷಾಂತರ ಮಂದಿ ಸೇರುವ ಈ ಎರಡೂ ರಸ್ತೆಯು ಝಗಮಗಿಸುವ ಮೂಲಕ ಸಾವಿರಾರು ಜನರನ್ನು ಆಕರ್ಷಿಸಿದೆ. ಸಂಜೆ ಬಳಿಕ ಈ ಪ್ರದೇಶದಲ್ಲಿ ವಾಹನ ನಿರ್ಬಂಧ ಆರಂಭವಾಗಿದ್ದು, ಜನದಟ್ಟಣೆಯು ಹೆಚ್ಚಾಗಿತ್ತು. ರಾತ್ರಿ 1 ಗಂಟೆಯವರೆಗೂ ಜನ ಈ ರಸ್ತೆಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಇದಲ್ಲದೇ ಹಲವು ಪ್ರಮುಖ ವಾಣಿಜ್ಯ ಕೇಂದ್ರ ಪ್ರದೇಶಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿವೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶ ಹಾಗೂ ಸಂಭ್ರಮಾಚರಣೆ ನಡೆಯುವ ರಸ್ತೆಗಳಲ್ಲಿ ಈ ಬಾರಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಐಷಾರಾಮಿ ಹೋಟೆಲ್‌ಗಳು, ಪಬ್‌ಗಳು, ಗಗನಚುಂಬಿ ಕಟ್ಟಡಗಳು ಚಿತ್ತಾಕರ್ಷಕವಾಗಿ ಸಿಂಗಾರಗೊಂಡು ಸಿಲಿಕಾನ್ ಸಿಟಿ ಮಂದಿಯನ್ನು ಮೋಡಿ ಮಾಡಿವೆ. ಯುವ ಸಮೂಹ ಅತಿಹೆಚ್ಚು ಸೇರುವ ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಸೇರಿ ನಗರದ ದಶದಿಕ್ಕುಗಳ ಪಬ್, ರೆಸ್ಟೋರೆಂಟ್‌ಗಳು, ಕ್ಲಬ್, ಮಾಲ್‌ಗಳು ಅಲಂಕೃತಗೊಂಡು ಹೊಸ ವರ್ಷವನ್ನು ಬರಮಾಡಿಕೊಂಡಿವೆ.
ಜೊತೆಗೆ ಕಳೆದ ದಿನ ನಾನಾ ಕಡೆ ಪಬ್, ರೆಸ್ಟೋರೆಂಟ್, ಕ್ಲಬ್, ಮಾಲ್‌ಗಳಲ್ಲಿ ಔತಣಕೂಟ, ಡಿ.ಜೆ ಸಂಗೀತ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಗ್ರಾಹಕರಿಗೆ ಹತ್ತಾರು ಪಬ್‌ಗಳಲ್ಲಿ ರಿಯಾಯಿತಿ ಘೋಷಿಸಲಾಗಿತ್ತು. ಮಾತ್ರವಲ್ಲದೆ ಕಪಲ್ಸ್, ಫ್ಯಾಮಿಲಿ ಪ್ಯಾಕೇಜ್‌ಗಳು ಕೆಲವೆಡೆ ಸಿಕ್ಕಿವೆ. ಪಾರ್ಟಿಗಳ ಪ್ರವೇಶ ಶುಲ್ಕ ಒಂದು ಸಾವಿರದಿಂದ ಆರಂಭಗೊಂಡು 10 ಸಾವಿರ ರೂ. ನಿಗದಿಯಾಗಿದ್ದವು. ಇದೆಲ್ಲದರ ಉಪಯೋಗವನ್ನು ಸಿಲಿಕಾನ್ ಸಿಟಿ ಮಂದಿ ಸದುಪಯೋಗ ಮಾಡಿಕೊಂಡಿದ್ದಾರೆ. ಇಂತೆಲ್ಲಾ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೆಟ್ರೋದಲ್ಲೇ ಪ್ರಯಾಣ ಮಾಡಿದ್ದಾರೆ.
ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವವರು ಮದ್ಯ ಸೇವಿಸಿ ವಾಹನ ಚಲಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತು ಪಡಿಸಿ ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರವನ್ನು ಡಿ.31ರಂದು ರಾತ್ರಿ 11 ಗಂಟೆಯಿಂದ ಮರುದಿನ ಬೆಳಗ್ಗೆ 6ರವರೆಗೆ ನಿರ್ಬಂಧಿಸಲಾಗಿತ್ತು.
ಈ ಕಾರಣದಿಂದಾಗಿಯೂ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ. ಜತೆಗೆ ಇಡೀ ರಾತ್ರಿ ಸಂಚಾರ ಪೊಲೀಸರು 48 ಕಡೆ ನಾಕಾಬಂಧಿ ನಿರ್ಮಿಸಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದ್ದಾರೆ. ವೀಲಿಂಗ್, ಡ್ರ್ಯಾಗ್ ರೇಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾತ್ರಿಯಿಡಿ ವಿಶೇಷ ತಂಡಗಳು ಗಸ್ತು ತಿರಿಗಿವೆ.












Click it and Unblock the Notifications