ಡಿಸೆಂಬರ್ 21ರಂದು ಹಳದಿ ಮೆಟ್ರೋ ಮಾರ್ಗದ ಸೇವೆ ಒಂದು ಗಂಟೆ ತಡ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಿತ್ಯ ಓಡಾಡುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಮಹತ್ವದ ಸೂಚನೆ ನೀಡಿದೆ. ಇದೇ ಭಾನುವಾರ ಡಿಸೆಂಬರ್ 21ರಂದು ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ (RV Road-Bommasandra Metro Yellow Line) ಮಾರ್ಗದಲ್ಲಿ ರೈಲು ಸೇವೆಗಳು ಬೆಳಗ್ಗೆ ಒಂದು ತಡವಾಗಿ ಆರಂಭಗೊಳ್ಳಲಿವೆ. ಸಮಯದ ವಿಳಂಬ ನೋಡಿಕೊಂಡು ನೀವು ಪ್ರಯಾಣದ ಯೋಜನೆ ರೂಪಿಸಿಕೊಳ್ಳಬೇಕಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಳದಿ ಮಾರ್ಗದಲ್ಲಿ ಹೊಸ ರೈಲುಗಳ (6ನೇ ಮತ್ತು 7ನೇ ರೈಲು) ಪರೀಕ್ಷೆಗಳನ್ನು ನಡೆಸುತ್ತಿದೆ. ಶೀಘ್ರವೇ ಮಾರ್ಗದಲ್ಲಿ ಹೆಚ್ಚು ರೈಲುಗಳು ಸೇವೆಗೆ ಇಳಿಯಲಿವೆ ಎಂದು ಗುಡ್ ನ್ಯೂಸ್ ನೀಡಿತ್ತು. ಇದರ ಬೆನ್ನಲ್ಲೆ ನಾಳೆ ಭಾನುವಾರ ಒಂದು ದಿನ ಹಳದಿ ಮಾರ್ಗದ ಕಾರ್ಯಾಚರಣೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶ ಹೊಂದಿದೆ. ಅದಕ್ಕಾಗಿ ಒಂದಷ್ಟು ತುರ್ತು ನಿರ್ವಹಣೆ /ನವೀಕರಣ ಕಾರ್ಯ ಕೈಗೊಳ್ಳಲು ಮುಂದಾಗಿದೆ. ಈ ಕಾರಣದಿಂದ ಹಳದಿ ಮಾರ್ಗದಲ್ಲಿ ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ಎಂದಿನಂತೆ ನಿಗದಿತ ಸಮಯದಲ್ಲಿ ಸಂಚರಿಸುವ ಬದಲಾಗಿ ಒಂದು ತಡವಾಗಿ ಸೇವೆ ಶುರು ಮಾಡುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 8ಕ್ಕೆ ಮೊದಲ ರೈಲು ಸಂಚಾರ ಶುರು
ಪ್ರತಿ ಭಾನುವಾರ ಹಳದಿ ಮಾರ್ಗದಲ್ಲಿ ಮೊದಲ ರೈಲು ಸೇವೆ ಬೆಳಗ್ಗೆ 7 ಗಂಟೆಯ ಆರಂಭವಾಗುತ್ತವೆ. ಆದರೆ ಈ ಭಾನುವಾರ (ಡಿಸೆಂಬರ್ 21) ತುರ್ತು ಕೆಲಸಗಳು ನಡೆಸುವ ಕಾರಣ ಒಂದು ಗಂಟೆ ತಡವಾಗಿ ಅಂದರೆ ಬೆಳಗ್ಗೆ 8 ಗಂಟೆಗೆ ಮೊದಲ ರೈಲು ಸಂಚಾರ ಆರಂಭಿಸುತ್ತದೆ. ನಂತರ ಭಾನುವಾರದ ಸಾಮಾನ್ಯ ವೇಳಾಪಟ್ಟಿಯಂತೆ ಎಲ್ಲ ಐದು ಮೆಟ್ರೋಗಳು ಕಾರ್ಯಾಚರಣೆ ಮಾಡಲಿವೆ. ಈ ಬದಲಾವಣೆ ಕೇವಲ ಒಂದು ದಿನಕ್ಕೆ ಮಾತ್ರ ಅನ್ವಯಿಸುತ್ತದೆ.
ಈ ಬದಲಾವಣೆ ಹಳದಿ ಮಾರ್ಗಕ್ಕೆ ಮಾತ್ರ ಸಿಮೀತವಾಗಿದೆ. ನಮ್ಮ ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವುಗಳು ಭಾನುವಾರ ಎಂದಿನಂತೆ 7 ಗಂಟೆಗೆ ಸಂಚಾರ ಆರಂಭಿಸುತ್ತವೆ. ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಕೋರಿದೆ.
ನಮ್ಮ ಮೆಟ್ರೋ ಸಂಚಾರ ವೇಳಾಪಟ್ಟಿ
ಹಳದಿ ಮೆಟ್ರೋ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 05 ಗಂಟೆಗೆ ಸೇವೆ ಆರಂಭವಾಗಿ ರಾತ್ರಿ 11 ಗಂಟೆಗೆ ಕೊನೆಗೊಳ್ಳುತ್ತದೆ. ಈ ವೇಳಾಪಟ್ಟಿ ನೇರಳೆ ಮತ್ತು ಹಸಿರು ಮಾರ್ಗಕ್ಕೂ ಅನ್ವಯಿಸುತ್ತದೆ. ಭಾನುವಾರ ರಜಾ ದಿನವಾದ್ದ ಕಾರಣ ಮೂರು ಮೆಟ್ರೋ ಮಾರ್ಗಗಳಲ್ಲಿ 7 ಗಂಟೆಗೆ ಸೇವೆ ಆರಂಭವಾಗುತ್ತದೆ. ಆದರೆ ಈ ಭಾನುವಾರ ಹಳದಿ ಮಾರ್ಗ ಒಂದರಲ್ಲಿ ಮಾತ್ರವೇ 08 ಗಂಟೆಯಿಂದ ಮೆಟ್ರೋ ಸೇವೆ ಲಭ್ಯವಿದೆ.
ಡಿಸೆಂಬರ್ 22ರಿಂದ ಹೊಸ ರೈಲು ಸೇವೆ ನಿರೀಕ್ಷೆ
ಹಳದಿ ಮಾರ್ಗದಲ್ಲಿ ಐದು ರೈಲುಗಳ ಸೇವೆ ಲಭ್ಯವಿದೆ. ಆರನೇ ರೈಲು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅದರ ಪರೀಕ್ಷೆಗಳು ಪೂರ್ಣಗೊಂಡಿವೆ. ಹೀಗಾಗಿ ಇದೇ ಡಿಸೆಂಬರ್ 22ರಂದು ಸೇವೆ ಶುರುವಾಗುವ ನಿರೀಕ್ಷೆ ಇದೆ. ಹಾಗಾದಲ್ಲಿ ನಿಲ್ದಾಣಗಳಲ್ಲಿ ಮೆಟ್ರೋಗೆ ಕಾಯುವ ಸಮಯ 15 ನಿಮಿಷದಿಂದ 12 ನಿಮಿಷಗಳಿಗೆ ಇಳಿಯುವ ನಿರೀಕ್ಷೆ ಇದೆ.
ಇನ್ನೂ ಏಳನೇ ಡ್ರೈವರ್‌ಲೆಸ್ ರೈಲು ಈಗಾಗಲೇ ಹೆಬ್ಬಗೋಡಿ ಡಿಪೋಗೆ ಮೊನ್ನೆಯಷ್ಟೇ ಆಗಮಿಸಿದೆ. ಮುಂದಿನ ಎರಡು ವಾರಗಳ ಕಾಲ ಅದರ ಪರೀಕ್ಷೆಗಳು ನಡೆಯಲಿವೆ. ಬಳಿಕವೇ (2026 ಜನವರಿ ಮಧ್ಯ ಭಾಗ) ಅದರ ಸೇವೆ ಜನರಿಗೆ ಸಿಗಲಿದೆ. ಜನವರಿ ಆರಂಭದಲ್ಲಿ ಮತ್ತೊಂದು ಎಂಟನೇ ರೈಲು ಬೆಂಗಳೂರಿಗೆ ಪೂರೈಕೆ ಆಗುವ ಸಾಧ್ಯತೆ ಇದೆ. ಹಾಗಾದಲ್ಲಿ ಅದರ ಪರೀಕ್ಷೆಗಳು ತಿಂಗಾಂತ್ಯಕ್ಕೆ ಪೂರ್ಣಗೊಂಡರೆ, ಫೆಬ್ರವರಿ ಮೊದಲ ವಾರ ಎಂಟನೇ ರೈಲಿನ ಸೇವೆ ಜನರಿಗೆ ಸಿಗುವ ಸಂಭವವಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಅಧಿಕೃತ ಮಾಹಿತಿ ಇನ್ನೇನು ನೀಡಲಿದ್ದಾರೆ.












Click it and Unblock the Notifications