ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್: ಬೆಂಗಳೂರಿನ ಈ ಪ್ರದೇಶಗಳಿಗೆ ಬಂಪರ್: ಎಚ್.ಡಿ ಕುಮಾರಸ್ವಾಮಿ
ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಸಿರು ನಿಶಾನೆ ತೋರಿಸಿದ್ದಾರೆ. ಈ ಭಾಗದಲ್ಲಿ ಮೆಟ್ರೋ ರೈಲಿನಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಬೆಂಗಳೂರಿನ ಪ್ರಮುಖ ಭಾಗದಲ್ಲಿ ಟ್ರಾಫಿಕ್ ಜಾಮ್ ಸಹ ಕಡಿಮೆ ಆಗಲಿದೆ ಎಂದೂ ಹೇಳಲಾಗಿದೆ. ಈ ಸಂಬಂಧ ಇದೀಗ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸಹ ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು, ಬೆಂಗಳೂರು ನಗರದ ಮಹಾಜನರ ಬಹುನಿರೀಕ್ಷಿತವಾಗಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಇಂದು ಲೋಕಾರ್ಪಣೆ ಮಾಡಿದರು. ಈ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 19 ಕಿ.ಮೀ. ದೂರದ ಎತ್ತರದ ಕಾರಿಡಾರ್‌ನಲ್ಲಿ 16 ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್‌ನಂತಹ ಅತ್ಯಂತ ಪ್ರಮುಖ ತಂತ್ರಜ್ಞಾನ ತಾಣಗಳಿಗೆ ಪ್ರಯಾಣವನ್ನು ಪರಿವರ್ತನಾತ್ಮಕವಾಗಿ ಸುಗಮಗೊಳಿಸುತ್ತದೆ.

ಈ ಭಾಗದಲ್ಲಿ ರಸ್ತೆಗಳ ಮೇಲೆ ವಾಹನಗಳ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಅಲ್ಲದೆ, ಬೆಂಗಳೂರು ನಗರದ ಆರ್ಥಿಕ, ಕೈಗಾರಿಕಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ. ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಸಶಕ್ತ ನೇತೃತ್ವದಲ್ಲಿ ಭಾರತವು ಸದೃಢ ಹಾಗೂ ದೂರಗಾಮಿ ಸಂಚಾರ ವ್ಯವಸ್ಥೆಯನ್ನು ಹೊಂದುತ್ತದೆ. ಇದರಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವೂ ಭಾಗವಾಗುತ್ತಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕ್ರೆಡಿಟ್ ವಾರ್: ಇನ್ನು ಸೋಷಿಯಲ್ ಮೀಡಿಯ ಎಕ್ಸ್‌ನಲ್ಲಿ ನಮ್ಮ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕ್ರಾಂಗ್ರೆಸ್ ಪಕ್ಷದ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ನಮ್ಮ ಮೆಟ್ರೋ! ರಾಜ್ಯ ಕಾಂಗ್ರೆಸ್ ಸರ್ಕಾರಗಳ ಕನಸಿನ ಕೂಸು! ಅಂದಿನ ಎಸ್.ಎಂ ಕೃಷ್ಣ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಮತ್ತು ಬದ್ಧತೆಯಿಂದ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆ, ಇಂದು ಉದ್ಘಾಟನೆಯಾಗುತ್ತಿರುವ ಹಳದಿ ಮಾರ್ಗದ ಹಂತಕ್ಕೆ ತಲುಪಿದೆ. ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ವಾಹನ ದಟ್ಟಣೆಗೆ ಪರಿಣಾಮಕಾರಿ ಪರಿಹಾರ ಒದಗಿಸಿ, ಜನರಿಗೆ ಸುಗಮ ಸಂಚಾರದ ನೂತನ ಯುಗವನ್ನು ಆರಂಭಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು ಮೆಟ್ರೋ ಯೋಜನೆಯ ಪ್ರತಿಯೊಂದು ಹಂತದಲ್ಲೂ, ಕರ್ನಾಟಕ ಸರ್ಕಾರ ಹಣಕಾಸು, ಅಗತ್ಯ ಭೂಮಿ, ಪುನರ್ವಸತಿ ವೆಚ್ಚ ಸೇರಿದಂತೆ ಸಂಪೂರ್ಣ ಸಹಕಾರ ನೀಡಿ, ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ನೋಡಿಕೊಂಡಿದೆ ಎಂದು ಟ್ವೀಟ್ ಮಾಡಿದೆ.
ಮತ್ತೊಂದು ಕಡೆ ಬಿಜೆಪಿ ಈ ಯೋಜನೆಯ ಅನುಷ್ಠಾನಕ್ಕೆ ಬಿಜೆಪಿಯೇ ಕಾರಣ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ. ಕರ್ನಾಟಕದ ಕಲ್ಯಾಣಕ್ಕೆ ಮಹೋನ್ನತ ಕೊಡುಗೆಗಳನ್ನು ನೀಡಿ, ಕರ್ನಾಟಕದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕರ್ನಾಟಕಕ್ಕೆ ಹಾರ್ದಿಕ ಸ್ವಾಗತ ಎಂದು ಹೇಳಿದೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಹಲವು ಬಿಜೆಪಿ ನಾಯಕರು ಮೆಟ್ರೋ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ಬಿಜೆಪಿಯೇ ಕಾರಣ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications