ಬೆಂಗಳೂರು vs ದೆಹಲಿ ಮೆಟ್ರೋ: ಲಗೇಜ್ ಶುಲ್ಕದ ವ್ಯತ್ಯಾಸಗಳ ಚರ್ಚೆ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು: ಬೆಂಗಳೂರು ಜನರಿಂದ ಹೆಚ್ಚು ಸ್ಪಂದನೆ ಪಡೆದ ಸಾರ್ವಜನಿಕ ಸಾರಿಗೆಯಾದ ನಮ್ಮ ಮೆಟ್ರೋ ದರ ಏರಿಕೆ ಹಾಗೂ ಲಗೇಜ್ ಶುಲ್ಕದಿಂದ ಮತ್ತೆ ಸುದ್ದಿಯಲ್ಲಿದೆ. ಪ್ರಯಾಣಿಕರು ಲಗೇಜ್ ಶುಲ್ಕ 30 ರೂ. ಸಂಗ್ರಹವನ್ನು ಖಂಡಿಸುತ್ತಿದ್ದಾರೆ. ಜೊತೆಗೆ ಬೇರೆ ನಗರದ ಮೆಟ್ರೋದಲ್ಲಿ ಈ ರೀತಿ ಇಲ್ಲ. ಶುಲ್ಕವಿಲ್ಲದೇ ಉಚಿತವಾಗಿ ಬ್ಯಾಗ್ ಒಯ್ಯಲು ಅವಕಾಶ ಮಾಡಿಕೊಡಲಾಗುತ್ತದೆ. ನಮ್ಮ ಮೆಟ್ರೋ ಅದಕ್ಕೆ ತದ್ವಿರುದ್ಧವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಎದ್ದಿದೆ.
ವ್ಯಕ್ತಿಯೊಬ್ಬರು ಬೆಂಗಳೂರು ನಮ್ಮ ಮೆಟ್ರೋ ಹಾಗೂ ದೆಹಲಿ ಮೆಟ್ರೋ ರೈಲುಗಳಲ್ಲಿ ಸಂಚಾರ ಮಾಡಿದ್ದಾರೆ. ಎರಡು ಪ್ರಯಾಣಗಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರ್ವಜನಿಕ ಸಾರಿಗೆ ವೆಚ್ಚಗಳು, ಪ್ರಯಾಣಿಕರ ಸೌಕರ್ಯ, ನಗರ ಸಾರಿಗೆ ವ್ಯವಸ್ಥೆಗಳಿಂದ ಪ್ರಯಾಣಿಕರು ನಿರೀಕ್ಷಿಸುವುದು ಏನು? ದರ ಹೆಚ್ಚಳ ಕುರಿತು ಚರ್ಚಿಸಿದ್ದು, ಅದೀಗ ವೈರಲ್ ಆಗಿದೆ.

ದೆಹಲಿ, ಬೆಂಗಳೂರು ಮೆಟ್ರೋಗಿರುವ ವ್ಯತ್ಯಾಸ?
ಪ್ರಯಾಣಿಕ ಅವಿನಾಶ್ ಚಂಚಲ್ ಅವರು ಎರಡೂ ಮೆಟ್ರೋ ರೈಲಿನಲ್ಲಿ ಬ್ಯಾಗ್ ಸಮೇತ ಸಂಚಾರ ಮಾಡಿದ್ದ ಅನುಭವ ತಿಳಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಸ್ತು/ಬ್ಯಾಗ್ ಸಾಗಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ನಾನು ಹೆಚ್ಚಿನ ಟಿಕೆಟ್ ದರ ನೀಡಿದ್ದಲ್ಲದೇ ಬ್ಯಾಗ್‌ಗೆ ಪ್ರತ್ಯೇಕ 30 ರೂಪಾಯಿ ನೀಡಬೇಕಾಯಿತು. ಇಂತಹ ಶುಲ್ಕ ವಸೂಲಾತಿ ಕ್ರಮ ದೆಹಲಿ ಮೆಟ್ರೋದಲ್ಲಿ ಇಲ್ಲ ಎಂಬುದರ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ.
ದೆಹಲಿ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮೊಂದಿಗನ ಬ್ಯಾಗ್‌ಗೆ ಹೆಚ್ಚುವರಿ ಹಣ ಪಾವತಿಸುವುದಿಲ್ಲ. ಶುಲ್ಕರಹಿತವಾಗಿ ಸಂಚಾರ ಮಾಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಟಿಕೆಟ್ ದರವೆ ಹೆಚ್ಚಿದೆ. ಅದೊಂದಿಗೆ ಬ್ಯಾಗ್ ಸಾಗಿಲು 30 ರೂ. ಹೆಚ್ಚುವರಿ ಪಾವತಿಸಬೇಕಿದೆ ಎಂದು ಚಂಚಲ್ ಅವರು ಬೇಸರ ಹೊರ ಹಾಕಿದ್ದಾರೆ. ಅವರ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನೆಟ್ಟಿಗರಿಂದ ನಮ್ಮ ಮೆಟ್ರೋ ಬಗ್ಗೆ ಮಿಶ್ರ ಪ್ರತಿಕ್ರಿಯೆ
ಕೆಲ ನೆಟ್ಟಿಗರು ನಮ್ಮ ಮೆಟ್ರೋದಲ್ಲಿ ಲಗೇಜ್, ಮಾನಿಟರ್‌ಗಳು ಮತ್ತು ಪ್ರಯಾಣ ಬ್ಯಾಗ್ ಸಾಗಿಲು ನಾವು ಹೆಚ್ಚುವರಿ ಹಣ ನೀಡಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ನಿಗದಿತ ಅಥವಾ ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ವಿಶೇಷವಾಗಿ ರೈಲು ನಿಲ್ದಾಣಗಳು ಅಥವಾ ಜನನಿಬಿಡ ವಾಣಿಜ್ಯ ಪ್ರದೇಶಗಳ ಬಳಿ ಟ್ರಾಲಿ ಬ್ಯಾಗ್/ಲಗೇಜ್‌ಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಹೆಚ್ಚುವರಿ ಲಗೇಜ್ ಶುಲ್ಕ, ನಿಯಮಿತ ಶುಲ್ಕ ವೆಚ್ಚಗಳು ಮತ್ತು ಕೊನೆಯ ಮೈಲಿ ಪ್ರಯಾಣ ವೆಚ್ಚಗಳು ಒಟ್ಟಾಗಿ ಮೆಟ್ರೋ ಪ್ರಯಾಣವನ್ನು ಆಕರ್ಷಿಸದಂತೆ ಮಾಡುತ್ತವೆ. ಈ ಬಗ್ಗೆಯು ಒಂದಷ್ಟು ಚರ್ಚೆಗಳು ಶುರುವಾಗಿವೆ. ಈ ಹಿಂದೆ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿದ್ದಾಗಲೂ ಇಂಥದ್ದೆ ಚರ್ಚೆ ನಡೆದಿದ್ದವು. ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಲಗೇಜ್ ಶುಲ್ಕ ಮತ್ತೆ ಮುನ್ನೆಲೆಗೆ ಬಂದಿದೆ.
ಸಾರ್ವಜನಿಕ ಸಾರಿಗೆ ಸುಲಭವಾಗಿ ಸಿಗಬೇಕು
ಜನರಿಗೆ ಸಾರ್ವಜನಿಕ ಸಾರಿಗೆ ಸುಲಭವಾಗಿ ಸಿಗಬೇಕು. ಅಂದಾಗ ಅದರ ಬಳಕೆ ಹೆಚ್ಚಾಗುತ್ತದೆ. ಇಲ್ಲವಾದರೆ ಖಾಸಗಿ ವಾಹನಗಳ ಬಳಕೆ ಹೆಚ್ಚಾಗುತ್ತದೆ. ಟಿಕೆಟ್ ದರ, ಮೂಲ ಸೌಕರ್ಯ, ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳು ಇರಬೇಕು. ಅದು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತದೆ ಎಂದು ಕೆಲವು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರೊಬ್ಬರು, ಶುಲ್ಕ ಹೆಚ್ಚಳ, ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿನ ಜನದಟ್ಟಣೆ, ಹೊಸ ಮಾರ್ಗದ ನಿಧಾನಗತಿ ಕಾಮಗಾರಿ, ವಿಳಂಬ ಯೋಜನೆ ಬಗ್ಗೆ ಕಳವಳ ಹೊರ ಹಾಕಿದ್ದಾರೆ. ಆದರೆ ಮೆಟ್ರೋ ಒದಗಿಸುತ್ತಿರುವ ಸೇವೆ, ಅದರ ವಿಸ್ತರಣೆ ಗುರಿಯನ್ನು ಶ್ಲಾಘಿಸಿದ್ದಾರೆ.












Click it and Unblock the Notifications