ಬೆಂಗಳೂರು ಖಾಸಗಿ ಶಾಲೆಗಳಿಂದ ಪೋಷಕರಿಗೆ ಶುಲ್ಕದ ಬರೆ: ಪ್ರಶ್ನಿಸಿದರೆ ಬೆದರಿಕೆ
ಬೆಂಗಳೂರು, ಮೇ 20: ಬೇಸಿಗೆ ರಜೆ ಕಳೆದು ಜೂನ್‌ಗೆ ಮಕ್ಕಳನ್ನು ಶಾಲೆಗಳಿಗೆ ಕಳಹಿಸಲು ಸಿದ್ಧರಾಗಿರುವ ಪೋಷಕರು ಸ್ಕೂಲ್ ಅಡ್ಮಿಷನ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ 2024-25ರ ಸಾಲಿನಲ್ಲಿ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ಹೆಚ್ಚಿಸಿಕೊಂಡಿವೆ. ಅದಲ್ಲದೇ ಅದನ್ನು ಒಂದೇ ಕಂತಿನಲ್ಲಿ ಕಟ್ಟುವಂತೆ ಸೂಚಿಸಿವೆ. ಈ ಕುರಿತು ಪ್ರಶ್ನೆ ಮಾಡಿದರೆ ಪೋಷಕರಿಗೆ ಬೆದರಿಕೆ ಹಾಕಿವೆ ಎಂದು ತಿಳಿದು ಬಂದಿವೆ.
ನಗರದ ಖಾಸಗಿ ಶಾಲೆಗಳು ಶೇ. 20ರಿಂದ 30ರಷ್ಟು ಶುಲ್ಕ ಹೆಚ್ಚಳ ಮಾಡಿವೆ. ಈ ಮೂಲಕ ಸುಲಿಗೆ ಮಾಡಲು ನಿರ್ಧರಿಸಿವೆ. ಇದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಆರ್ಥಿಕ ಹೊರ ಉಂಟಾಗುತ್ತಿದೆ. ಖಾಸಗಿ ಶಾಲೆಗಳು ಬರೆ ಹಾಕಿವೆ ಎಂದು 'ಕನ್ನಡಪ್ರಭ' ವರದಿ ಮಾಡಿದೆ.

ಎರಡೇ ಕಂತಿನಲ್ಲಿ ಶುಲ್ಕ ಪಾವತಿಗೆ ಸೂಚನೆ
ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಕರ್ನಾಟಕ ಪಠ್ಯಕ್ರಮ ಮೂರು ಮಾದರಿಯೂ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಪದ್ಧತಿಯನ್ನು ಸದರಿ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಯಾವುದೇ ಪ್ರಯೋಜನವಾಗಿಲ್ಲ. ಹೆಚ್ಚಿಸಲಾದ ಶೇ. 20ರಿಂದ 30ರಷ್ಟು ಶುಲ್ಕವನ್ನು ಒಂದೇ ಕಂತಿನಲ್ಲಿ ಇಲ್ಲವೇ ಎರಡು ಕಂತಿನಲ್ಲಿ ಪಾವತಿಸುವಂತೆ ಪೋಷಕರಿಗೆ ತಿಳಿಸಿವೆ.
ಈ ಹಿಂದೆ ಇದೇ ಶಾಲೆಗಳು ಶುಲ್ಕವನ್ನು ಗರಿಷ್ಠ ನಾಲ್ಕರಿಂದ ಐದು ಕಂತಿನಲ್ಲಿ ಪೂರೈಸುವಂತೆ ಹೇಳಿದ್ದವು. ಆದರೆ ಈ ಭಾರಿ ನಿರೀಕ್ಷೆಗೂ ಮೀರಿ ಶುಲ್ಕ ಹೆಚ್ಚಿಸಿದ್ದಲ್ಲದೇ ಎರಡೇ ಕಂತಿನಲ್ಲಿ ಕಟ್ಟುವಂತೆ ಸೂಚಿಸಿವೆ. ಇದು ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಪೋಷಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ.
ಹೆಚ್ಚಾದ ಖಾಸಗಿ ಶಾಲೆಗಳ ಶುಲ್ಕದ ವಿವರ
ಕಳೆದ ವರ್ಷ 25ರಿಂದ 30,000 ರೂಪಾಯಿವರೆಗೆ ಶುಲ್ಕ ಪಡೆಯುತ್ತಿದ್ದ ಬೆಂಗಳೂರಿನ ಅದೇ ಶಾಲೆಗಳು ಇದೀಗ 30ರಿಂದ 35,000 ರೂಪಾಯಿ ಶುಲ್ಕ ಸಂಗ್ರಹಿಸಲು ಮುಂದಾಗಿವೆ. ಇನ್ನೂ 40ರಿಂದ 50,000 ರೂಪಾಯಿ ವರೆಗೆ ಶುಲ್ಕ ಪಡೆಯುತ್ತಿದ್ದ ಖಾಸಗಿ ಶಾಲೆಗಳು ಶುಲ್ಕವನ್ನು ಗರಿಷ್ಠ 65,000 ರೂ.ವರೆಗೆ ಹೆಚ್ಚಿಸಿವೆ.
ಪ್ರತಿಷ್ಠಿತ ಉತ್ತಮ ಗುಣಮಟ್ಟದ ಶಾಲೆಗಳು ಎಂದು ಬಿರುದು ಪಡೆದುಕೊಂಡ ಶಾಲೆಗಳು ಶುಲ್ಕವನ್ನು 70ರಿಂದ 90000 ರೂ.ವರೆಗಿನ ಶುಲ್ಕ ಬದಲಾಗಿ ಈ ವರ್ಷ ಸುಮಾರು 1.20 ಲಕ್ಷ ರೂಪಾಯಿ ನಿಗಿದಿ ಮಾಡಿವೆ. ಈ ಹಣವನ್ನು ಎರಡು ಕಂತಿನಲ್ಲಿ ಕಟ್ಟುವಂತೆ ತಿಳಿಸಿವೆ ಎಂದು ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ.

ಸಮವಸ್ತ್ರ, ಪಠ್ಯ, ಕ್ರೀಡಾ ಶುಲ್ಕಸೇರಿದಂತೆ ಒಂದು ಲೆಕ್ಕವಾದರೆ, ಇತ್ತ ಶಾಲೆಗೂ ಮನೆಗಳಿಗೂ ದೂರ ವಿರುವ ಮಕ್ಕಳ ಪೋಷಕರಿಗೆ ಈ ಹೆಚ್ಚಳದ ಶುಲ್ಕದ ಮೇಲೆ ಮತ್ತೆ ಹೆಚ್ಚುವರಿ ಹಣ ಪೀಕಲು ನಿರ್ಧರಿಸಿವೆ. ದೂರದ ಮನೆಗಳಿಂದ ಶಾಲೆಗೆ ಮಕ್ಕಳನ್ನು ಕರೆತಲು ಸ್ಕೂಲ್ ವ್ಯಾನ್ ವ್ಯವಸ್ಥೆ ಮಾಡಿರುವ ಶಾಲೆಗೆ ಅದಕ್ಕಾಗಿ ಕನಿಷ್ಠ 10ರಿಂದ 20000 ವರೆಗೆ ಶುಲ್ಕ ವಿಧಿಸುತ್ತಿವೆ.
ನಗರದಲ್ಲಿ ಬಾಗಲಗುಂಟೆ, ಆರ್‌ಆರ್ ನಗರ, ರಾಜಾಜಿನಗರ, ಗೊರಗುಂಟೆಪಾಳ್ಯ, ವಿಜಯನಗರ, ಜಯನಗರ ಇನ್ನಿತರ ಕಡೆಗಳಲ್ಲಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಶುಲ್ಕ ಏರಿಕೆ ಮಾಡಿವೆ. ಸ್ಕೂಲ್ ವ್ಯಾನ್ ಶುಲ್ಕ ಹೆಚ್ಚಳ, ಶಾಲಾ ಶುಲ್ಕ ಏರಿಕೆ ಬಗ್ಗೆ ಪೋಷಕರು ಪ್ರಶ್ನೆ ಮಾಡಿದರೆ ನಿಮ್ಮ ಮಕ್ಕಳ ವರ್ಗಾವಣೆ ಪತ್ರ ನೀಡುವುದಾಗಿ ಶಾಲೆಗಳು ಬೆದರಿಕೆ ಹಾಕುತ್ತಿವೆ ಎಂದು ತಿಳಿದು ಬಂದಿವೆ.
ಪೋಷಕರ ಆಕ್ರೋಶ: ಕಾಮ್ಸ್ ಪ್ರತಿಕ್ರಿಯೆ ಏನು?
ಒಟ್ಟಾರೆಯಾಗಿ ಈ ವರ್ಷ ಇತರ ವಸ್ತುಗಳಂತೆ ಮಕ್ಕಳು ವಿದ್ಯಾಭ್ಯಾಸವು ದುಬಾರಿಯಾಗಿದೆ. ಖಾಸಗಿ ಶಾಲೆಗಳು ನಿಗಿದಿತ ಇತಿ ಮಿತಿ ಮೀರಿ ಶುಲ್ಕ ಹೆಚ್ಚಿಸುವೆ ಎಂದು ಪೊಲೀಸರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಮ್ಸ್ ಮುಖ್ಯಸ್ಥರೊಬ್ಬರು, ವರ್ಷದಿಂದ ವರ್ಷಕ್ಕೆ ಖರ್ಚು ವೆಚ್ಚಗಳು ಹೆಚ್ಚಾಗುವುದರಿಂದ ಶಾಲೆಗಳು ಶುಲ್ಕವು ಹೆಚ್ಚಾಗುತ್ತದೆ. ಕನಿಷ್ಠವೆಂದರೆ ಶೇ 10-15ರಷ್ಟು ಶುಲ್ಕ ಹೆಚ್ಚಾಗಬೇಕು. ಆದರೆ ಏಕಾಎಕಿ ಶೇಕಡಾ 30ರಷ್ಟು ಏರಿಕೆ ಮಾಡುವುದು ಸರಿಯಲ್ಲ. ಶುಲ್ಕ ಹೆಚ್ಚಳದ ತೀರ್ಮಾನವನ್ನು ಆಯಾ ಶಾಲಾ ಆಡಳಿತ ಮಂಡಳಿಗಳೇ ಮಾಡಿರಬೇಕು ಎಂದು ಹೇಳಿದರು.












Click it and Unblock the Notifications