ಬೆಂಗಳೂರಿನ ಅಪಾರ್ಟ್‌ಮೆಂಟ್ ವಾಟ್ಸಾಪ್ ಗ್ರೂಪ್‌ನಲ್ಲಿ ಬಿಸಿಬಿಸಿ ಚರ್ಚೆ: IT ಉದ್ಯೋಗಿಗಳಿಗಿಂತ ಮನೆಕೆಲಸದವರಿಗೆ ಹೆಚ್ಚು ಡಿಮ್ಯಾಂಡ್
ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲ, ಇಲ್ಲಿನ ಅಪಾರ್ಟ್‌ಮೆಂಟ್‌ಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ನಡೆಯುವ ಕೆಲವು ಚರ್ಚೆಗಳು ಕೂಡ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರ ವಾಟ್ಸಾಪ್ ಗ್ರೂಪ್‌ನಲ್ಲಿ 'ನ್ಯಾನಿ ಪೋಚಿಂಗ್' ಬಗ್ಗೆ ನಡೆದ ಬಿಸಿಬಿಸಿ ಚರ್ಚೆಯ ಸ್ಕ್ರೀನ್‌ಶಾಟ್ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
ಮಕ್ಕಳನ್ನು ನೋಡಿಕೊಳ್ಳುವ ನ್ಯಾನಿಗಳಿಗೆ (ಮನೆಕೆಲಸದವರು) ಇತರ ಮನೆಗಳವರು ಹೆಚ್ಚಿನ ಸಂಬಳದ ಆಮಿಷವೊಡ್ಡಿ ತಮ್ಮ ಮನೆಗೆ ಕೆಲಸಕ್ಕೆ ಕರೆದುಕೊಳ್ಳುವುದು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ನಿವಾಸಿಗಳ ನಡುವೆ ನಡೆದ ಚರ್ಚೆ ಇದೀಗ ಎಕ್ಸ್ ವೇದಿಕೆಯಲ್ಲಿ ಭಾರಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಏನಿದು ವಾಟ್ಸಾಪ್ ಗ್ರೂಪ್‌ನಲ್ಲಿ ನ್ಯಾನಿ ಪೋಚಿಂಗ್ ಚರ್ಚೆ?
ಆರ್ಮರ್‌ಕೋಡ್ (ArmorCode) ಕಂಪನಿಯ ರೆವೆನ್ಯೂ-ಆಪ್ಸ್ ಮುಖ್ಯಸ್ಥರಾಗಿರುವ ರಾಜೇಶ್ ಭಟ್ಟಡ್ ಎಂಬುವವರು ತಮ್ಮ ಅಪಾರ್ಟ್‌ಮೆಂಟ್ ಸೊಸೈಟಿಯ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಈ ಚರ್ಚೆಯ ಸ್ಕ್ರೀನ್‌ಶಾಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
"ನಮ್ಮ ಸೊಸೈಟಿಯ ವಾಟ್ಸಾಪ್‌ನಲ್ಲಿಮನೆಕೆಲಸದವರ ಬಗ್ಗೆ ಚರ್ಚೆ ನಡೆಯುತ್ತಿದೆ, ನಿಮ್ಮ ಅಭಿಪ್ರಾಯವೇನು?" ಎಂದು ಅವರು ನೆಟ್ಟಿಗರನ್ನ ಪ್ರಶ್ನಿಸಿದ್ದಾರೆ. ಈ ವಾಟ್ಸಾಪ್ ಸಂದೇಶದಲ್ಲಿ, ನಿವಾಸಿಯೊಬ್ಬರು ಬೇರೆಯವರ ಮನೆಗಳಲ್ಲಿ ಕೆಲಸ ಮಾಡುತ್ತಿರುವ ಮನೆಕೆಲಸದವರಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ಅವರನ್ನ ಕೆಲಸದಿಂದ ಸೆಳೆಯುತ್ತಿರುವ ಬಗ್ಗೆ ತೀವ್ರ ಹತಾಶೆ ವ್ಯಕ್ತಪಡಿಸಿದ್ದರು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗಿನ ಶಿಫ್ಟ್‌ಗೆ ಬರೋಬ್ಬರಿ 20,000 ರೂಪಾಯಿ ಸಂಬಳದ ಆಫರ್ ನೀಡುತ್ತಿರುವ ಬಗ್ಗೆ ಅವರು ಗ್ರೂಪ್‌ನಲ್ಲಿ ಅಸಮಾಧಾನ ಹೊರಹಾಕಿದ್ದರು.
ಹಣದ ಆಮಿಷದ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಯ ಅಸಮಾಧಾನ
"ಮಕ್ಕಳನ್ನ ನೋಡಿಕೊಳ್ಳುವ ನ್ಯಾನಿಗಳ ನೇಮಕ ಎನ್ನುವುದು ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯ ಆಧಾರದ ಮೇಲೆ ಇರಬೇಕು. ಯಾರು ಹೆಚ್ಚು ಹಣ ಕೊಡುತ್ತಾರೋ ಅವರು ಬೇರೆಯವರ ಮನೆಯ ಕೆಲಸದವರನ್ನ ಕರೆದೊಯ್ಯುವ ಹರಾಜು ಪ್ರಕ್ರಿಯೆ ಇದಾಗಬಾರದು," ಎಂದು ಆ ನಿವಾಸಿ ಬರೆದುಕೊಂಡಿದ್ದರು.
ಸಂಬಳದ ಬಗ್ಗೆ ಮಾತುಕತೆ ನಡೆಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಇತರರ ಮನೆಯಲ್ಲಿರುವ ವ್ಯವಸ್ಥೆಯನ್ನ ಗೌರವಿಸಬೇಕು. ಮಗುವೊಂದಕ್ಕೆ ಹೊಸ ಮನೆಕೆಲಸದವರೊಂದಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೆ, ಟವರ್ 2ರ ನಿವಾಸಿಯೊಬ್ಬರು ಈ ರೀತಿ ಹಣದ ಆಮಿಷವೊಡ್ಡಿ ನ್ಯಾನಿಗಳನ್ನು ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹೊಸದಾಗಿ ಕೆಲಸದವರು ಬೇಕಿದ್ದರೆ ವೆಬ್‌ಸೈಟ್‌ಗಳನ್ನ ಬಳಸಿಕೊಳ್ಳಿ, ಅದನ್ನು ಬಿಟ್ಟು ಇತರರ ಮನೆಯವರನ್ನ ಸೆಳೆಯಬೇಡಿ ಎಂದು ಮನವಿ ಮಾಡಿದ್ದರು.
Discussion in our society WhatsApp regarding "nanny poaching". What are your thoughts?🫣 https://t.co/VXzZ0voXo9
— 📊 Rajesh Bhattad | theRevOpsGuy (@theRevOpsGuy) November 3, 2026
ಐಟಿ ಉದ್ಯೋಗಿಗಳಿಗಿಂತ ನ್ಯಾನಿಗಳಿಗೆ ಡಿಮ್ಯಾಂಡ್: ಬೆಂಬಲಕ್ಕೆ ನಿಂತ ನೆಟ್ಟಿಗರು
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮನೆಕೆಲಸದವರ ಬೆಂಬಲಕ್ಕೆ ನಿಂತಿದ್ದಾರೆ. ಉತ್ತಮ ಸಂಬಳ ಮತ್ತು ಕೆಲಸದ ವಾತಾವರಣವನ್ನ ಹುಡುಕಿಕೊಳ್ಳುವುದು ಪ್ರತಿಯೊಬ್ಬ ಕಾರ್ಮಿಕನ ಹಕ್ಕು ಎಂದು ಅವರು ವಾದಿಸಿದ್ದಾರೆ.
"ಜ್ಞಾನಾಧಾರಿತ ವಲಯದಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳು ಕೇವಲ ಶೇ. 10ರಷ್ಟು ವೇತನ ಹೆಚ್ಚಳಕ್ಕಾಗಿ ಅಥವಾ ಕೆಟ್ಟ ಬಾಸ್‌ನಿಂದ ಪಾರಾಗಲು ತಮ್ಮ ಕೆಲಸವನ್ನ ಬಿಡಬಹುದಾದರೆ, ಮನೆಕೆಲಸದವರು ಏಕೆ ಹಾಗೆ ಮಾಡಬಾರದು?" ಎಂದು ನೆಟ್ಟಿಗರೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ.
ಇದು ಮುಕ್ತ ಮಾರುಕಟ್ಟೆ, ಇಲ್ಲಿ ಯಾರಿಗೆ ಎಲ್ಲಿ ಉತ್ತಮ ಸಂಬಳ ಹಾಗೂ ಸೌಲಭ್ಯ ಸಿಗುತ್ತದೆಯೋ ಅಲ್ಲಿಗೆ ಹೋಗುವುದು ಸಹಜ. ಈಗಿನ ದಿನಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಿಗಿಂತ ಮನೆಕೆಲಸದವರಿಗೆ ಹೆಚ್ಚಿನ ಬೇಡಿಕೆ ಇದೆ. ಮನೆಕೆಲಸದವರನ್ನ ಉಳಿಸಿಕೊಳ್ಳಬೇಕು ಎಂದಿದ್ದರೆ, ಅವರಿಗೆ ಉತ್ತಮ ಸಂಬಳ ನೀಡಿ ಹಾಗೂ ಗೌರವದಿಂದ ಕಾಣಿ ಎಂದು ಹಲವರು ಮಾಲೀಕರಿಗೆ ಕಿವಿಮಾತು ಹೇಳಿದ್ದಾರೆ.


Click it and Unblock the Notifications
