ಸಾರ್ವತ್ರಿಕ ಚುನಾವಣೆ 2024: ಬೆಂಗಳೂರಲ್ಲಿ ಕಾಂಗ್ರೆಸ್‌ಗೆ 'ಗ್ಯಾರೆಂಟಿ' ವರ್ಚಸ್ 'ಕೈ' ಹಿಡಿಯುತ್ತಾ?
ಬೆಂಗಳೂರು, ಮಾರ್ಚ್ 07: ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆ ಜೊತೆಗೆ ಸವಾಲು ಆಗಿದೆ.
ಬೆಂಗಳೂರಲ್ಲಿ ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗದ ಬೆಂಗಳೂರು ನಗರ ಎಂದು ಮೂರು ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೆಚ್ಚು ಸವಾಲಾಗಲಿದೆ. ಏಕೆಂದರೆ ಈ ಕ್ಷೇತ್ರಗಳಲ್ಲಿ ಪ್ರಭಾವಿ ಗೆಲ್ಲುವ ಅಭ್ಯರ್ಥಿಗಳನ್ನೇ ನಿಲ್ಲಿಸಬೇಕಾಗುತ್ತದೆ. ಒಂದು ವೇಳೆ ಟಿಕೆಟ್ ಆಯ್ಕೆಯಲ್ಲಿ ಯಡವಿದರೆ ಸೋಲು ಎದುರಿಸಬೇಕಾಗುತ್ತದೆ.

ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ 2009 ರಿಂದ ಕೇಸರಿ ಪಡೆ ಕಬಂಧಬಾಹು ಚಾಚಿದೆ. ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಆದರೆ ಈ ಬಾರಿ ಬಿಜೆಪಿಯ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ತಂತ್ರ ಹೆಣೆದಿದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಹುಮ್ಮಸ್ಸು , ಛಲ ಹೆಚ್ಚಾಗಿದೆ. ಅಲ್ಲದೇ ಐದು ಗ್ಯಾರೆಂಟಿ ಯೋಜನೆಗಳನ್ನು ಸಾಕಾರ ಮಾಡಿದ್ದೇವೆ ಎಂದು ಪ್ರಚಾರ ಮಾಡಿ, ಮತಗಳನ್ನು ಸೆಳೆಯುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಬಿಜೆಪಿ-ಕಾಂಗ್ರೆಸ್ ಉತ್ತಮ ಸ್ಪರ್ಧೆ
ವಿಧಾನಸಭಾ ಚುನಾವಣೆ ಗೆಲುವಿನಿಂದ ಕಾಂಗ್ರೆಸ್‌ಗೆ ಮತ್ತೆ ಬಲ ಬಂದಿದೆ. ಕಾಂಗ್ರೆಸ್ ನಾಯಕರ ಟಿಕೆಟ್ ಹಂಚಿಕೆ ತಂತ್ರ, ಗೆಲುವಿನ ತಂತ್ರ ಕೈ ಹಿಡಿದಿವೆ. ಗ್ಯಾರೆಂಟಿ ಘೋಷಣೆ ಬಳಿಕ ತೆಲಂಗಾಣವು ಕಾಂಗ್ರೆಸ್‌ಗೆ ಒಲಿದಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16 ಸ್ಥಾನ ಗೆದ್ದರೆ, ಕಾಂಗ್ರೆಸ್ ಉತ್ತಮ ಸ್ಪರ್ಧೆ ಒದ್ದಿ, ಸಂಚಿತ ಮತಗಳ ಹಂಚಿಕೆಯನ್ನು ನಿರ್ವಹಿಸಿದೆ.
ಬೆಂಗಳೂರಿನಲ್ಲಿ ತನ್ನ ಹಿಡಿತ ಕಳೆದುಕೊಳ್ಳದಿರಲು ಇತ್ತ ಬಿಜೆಪಿ ನಿರ್ಧರಿಸಿದೆ. ಯಾವೊಂದು ಕ್ಷೇತ್ರ ಬಿಟ್ಟುಕೊಡದೇ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮತ್ತೆ ಗೆಲುವಿನ ನಗೆ ಬೀರಲು, ಕಾಂಗ್ರೆಸ್ ಠಕ್ಕರ್ ಕೊಡಲು ಬಿಜೆಪಿಯು ಮೇಲಿಂದ ಮೇಲೆ ಸಭೆ ನಡೆಸುತ್ತಿದೆ.

ಬೆಂಗಳೂರಲ್ಲಿ ಭಾರೀ ಬದಲಾವಣೆ: ಡಿಕೆಶಿ ಭವಿಷ್ಯ
ರಾಜಧಾನಿಯು ಈ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳುವ ಮೂಲಕ ಸಂದೇಶ ರವಾನಿಸಿದ್ದಾರೆ. ಬಿಜೆಪಿಗೆ ಭಾರೀ ಹೊಡೆತ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ನಾವು ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ಗ್ಯಾರೆಂಟಿ ಅಸ್ತ್ರ
ಬೆಂಗಳೂರು ಅಭಿವೃದ್ಧಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಕಾಂಗ್ರೆಸ್ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಅಭ್ಯರ್ಥಿ ಆಯ್ಕೆಯ ಉಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ. ಚುನಾವಣೆ ವೇಳೆ ಡಿಸಿಎಂ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರೆಂಟಿಗಳನ್ನು ಅಸ್ತ್ರವಾಗಿ ಬಳಸಲಿದ್ದಾರೆ. ಇದು ಅವರ ಕೈ ಹಿಡಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಪ್ರಬಲ ಒಕ್ಕಲಿಗ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸಲ ಕಾಂಗ್ರೆಸ್ ಯೋಚಿಸಿದೆ. ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಮತ್ತು ಈ ಹಿಂದೆ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಸುಮಾ ಹನುಮಂತರಾಯಪ್ಪ ಅವರ ಹೆಸರು ಇಲ್ಲಿಗೆ ಕೇಳಿ ಬಂದಿವೆ.
ಬೆಂಗಳೂರು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು
ಉತ್ತರದಲ್ಲಿ ಬಿಜೆಪಿಯ ಹಿಡಿತ ಸಡಿಲಿಸಲು ತಂತ್ರ ರೂಪಿಸಿರುವ ಕಾಂಗ್ರೆಸ್ 'ಅಸಾಧಾರಣ' ಅಭ್ಯರ್ಥಿಯನ್ನು ಹುಡುಕುತ್ತಿದೆ. ಬೆಂಗಳೂರು ಉತ್ತರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಸಚಿವ ಕೆ.ಸುಧಾಕರ್ ಅಥವಾ ಎಸ್.ಟಿ.ಸೋಮಶೇಖರ್ ಕಣಕ್ಕಿಳಿಯುವ ಊಹಾಪೋಹ ಮಾತುಗಳು ಕೇಳಿ ಬಂದಿವೆ.
ವಿಧಾನಸಭೆಯಲ್ಲಿ ಹೀನಾಯ ಸೋಲುಂಡ ಬಿಜೆಪಿಗೆ ಕಾಂಗ್ರೆಸ್ ಗ್ಯಾರೆಂಟಿ ವರ್ಚಸ್ ಮುಳ್ಳಿನಂತೆ ಚುಚ್ಚುತ್ತಿದೆ. ವಿಧಾನಸಭೆಯಂತೆ ಮತದಾರರು ಲೋಕಸಭೆಯಲ್ಲೂ ಬದಲಾವಣೆಗೆ ಮನಸ್ಸು ಮಾಡಿದರೆ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಗಳು ಇವೆ. ಈ ಬಾರಿ ಉತ್ತರ ಕ್ಷೇತ್ರ ಹಾಲಿ ಸಂಸದ ಡಿ.ವಿ.ಸದಾನಂದಗೌಡರಿಗೆ ಟಿಕೆಟ್ ನೀಡದೇ ಹೊಸಬರಿಗೆ ನೀಡಬೇಕೆಂದು ಬಿಜೆಪಿಯ ಒಂದು ವರ್ಗ ಆಗ್ರಹಿಸುತ್ತಿದೆ.
ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ?
ಈ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಕೇಳಿ ಬಂದಿವೆ. ಈ ಬಾರಿ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನಿಂದ ಸ್ಥಳಾಂತರಿಸುವ ಚರ್ಚೆ ಬಿಜೆಪಿಯಲ್ಲಿ ನಡೆದಿದೆ.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಸ್ವಕ್ಷೇತ್ರದಲ್ಲಿಯೇ ಉಳಿಯಲು ಮನಸ್ಸು ಮಾಡಿದ್ದಾರೆ.
ಮುಸ್ಲಿಮರಿಗೆ ಸೆಂಟ್ರಲ್ ಕ್ಷೇತ್ರ ಮೀಸಲು?
ಕಾಂಗ್ರೆಸ್ ಬೆಂಗಳೂರು ಕೇಂದ್ರ (ಸೆಂಟ್ರಲ್) ಕ್ಷೇತ್ರವನ್ನು ಮುಸ್ಲಿಮರಿಗೆ ಮೀಸಲಿಟ್ಟಿದೆ. ಈ ಕ್ಷೇತ್ರದ ಟಿಕೆಟ್ ಸ್ಥಳೀಯ ಶಾಸಕ ಎನ್ ಎ ಹ್ಯಾರಿಸ್ ಅವರಿಗೆ ಸಿಗುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಬಿಡಿಎ ಅಧ್ಯಕ್ಷರಾಗಿ ಎನ್‌ಎ ಹ್ಯಾರಿಸ್ ಅಧಿಕಾರ ವಹಿಸಿಕೊಂಡಿದ್ದಾರೆ.
ಇನ್ನು ಬಿಜೆಪಿಯು ಬೆಂಗಳೂರು ಸೆಂಟ್ರಲ್ ನಲ್ಲಿ ಹಾಲಿ ಸಂಸದರಾದ ಪಿಸಿ ಮೋಹನ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯರನ್ನು ಉಳಿಸಿಕೊಳ್ಳಲು ಇಚ್ಛಿಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಬೆಂಗಳೂರಿನ ಈ ಎರಡು ಕ್ಷೇತ್ರಗಳಿಂದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಯಾವುದು ಇನ್ನು ಅಂತಿಮವಾಗಿಲ್ಲ. ಎಲ್ಲವನ್ನು ಹೈಕಮಾಂಡ್ ನಿರ್ಧರಿಸಿದೆ.
ಯುವ ನಾಯಕರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ
ಇತ್ತ ಕಾಂಗ್ರೆಸ್ ಯುವ ನಾಯಕರನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅಥವಾ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರಂತಹ ಯುವ ನಾಯಕರನ್ನು ಕಣಕ್ಕಿಳಿಸುವ ಚರ್ಚೆಯು ಕಾಂಗ್ರೆಸ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಚುನಾವಣೆಯನ್ನು ತನ್ನದೇ ಆದ ಹೊಸ ಹೊಸ ಅಲೋಚನೆಗಳಿಂದ ನಿರ್ವಹಿಸುತ್ತಿದೆ. ಗ್ಯಾರೆಂಟಿ ಯೋಜನೆ ಘೋಷಣೆ, ಅದರಿಂದ ಪ್ರಚಂಡ ಗೆಲುವು ಪಡೆದ ಕಾಂಗ್ರೆಸ್ಸಿಗರಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸವ್ಯವಸ್ಥಿತ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರೆಂಟಿ ಯೋಜನೆ ಮುಂದಿಟ್ಟುಕೊಂಡು ಮತಯಾಚನೆ ಮಾಡಲಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ ಬದಲಾವಣೆ ಬಯಸಿದರೆ ಕಾಂಗ್ರೆಸ್ ಬೆಂಗಳೂರಿನಲ್ಲಿ ಖಾತೆ ತೆರೆಯುವ ಸಾಧ್ಯತೆ ಇದೆ.
ಸದ್ಯದ ಬೆಳವಣಿಗೆ ನೋಡಿದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಬೆಂಗಳೂರಿನ ಮೂರು ಕ್ಷೇತ್ರಗಳಿಗೆ ಎರಡು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಪೈನಲ್ ಆಗಬೇಕಿದೆ.












Click it and Unblock the Notifications