Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್
ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಐಶಾರಾಮಿ ಲ್ಯಾಂಬೋರ್ಗಿನಿ ಕಾರಿನ ಡ್ರಿಫ್ಟಿಂಗ್ ನಡೆಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಡುರಸ್ತೆಯಲ್ಲಿ ಕಾರನ್ನು ಮನಬಂದಂತೆ ಓಡಿಸಲಾಗಿದೆ. ಇತರರಿಗೆ ತೊಂದರೆ ಆಗುವಂತೆ ಕಾರು ಡ್ರಿಫ್ಟಿಂಗ್ ಮಾಡಿ ಹುಚ್ಚಾಟ ಮೆರೆಯಲಾಗಿದ್ದರ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಮೂಲಕ ಸಿಕ್ಕ ಕಾರಿನ ಸಂಖ್ಯೆಯ ಆಧಾರದಲ್ಲಿ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಮುತ್ತಪ್ಪ ರೈ ಪುತ್ರನಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನಗರದ ಅನಿಲ್ ಕುಂಬ್ಳೆವೃತ್ತದಲ್ಲಿ ಶಿವಾಜಿನಗರದ ಕಡೆಯಿಂದ ವೇಗವಾಗಿ ಬಂದ ಐಶಾರಾಮಿ ವೈಟ್ ಲ್ಯಾಂಬೋರ್ಗಿನಿ ಕಾರು ನಡುರಸ್ತೆಯಲ್ಲಿ ಅಡ್ಡಾ ದಿಡ್ಡಿ ಸಂಚರಿಸಿತ್ತು. ಅತೀ ವೇಗದ ಚಾಲನೆ ಜೊತೆಗೆ ಕಾರನ್ನು ಡ್ರಿಫ್ಟಿಂಗ್ ಸ್ಟಂಟ್ ಮಾಡಲಾಗಿತು. ಬಳಿಕ ಬಂದ ಸ್ಪೀಡಿನಲ್ಲಿ ಶಿವಾಜಿನಗರದತ್ತ ಮರಳಿತ್ತು ಎಂಬ ಮಾಹಿತಿ ಲಭ್ಯವಗಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ತನಿಖೆ ಆರಂಭಿಸಿದ್ದಾರೆ.

ಲ್ಯಾಂಬೋರ್ಗಿನಿ ಕಾರು ಮುತ್ತಪ್ಪ ರೈ ಪುತ್ರನದ್ದು?
ಸ್ಟಂಟ್ ಮಾಡಿದ್ದ ಐಶಾರಾಮಿ ಕಾರಿನ ಸಂಖ್ಯೆ (ಕೆಎ 05 ಎನ್‌ಆರ್ 0009) ಆಧಾರದಲ್ಲಿ ಪೊಲೀಸರ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ನಿವಾಸಕ್ಕೆ ತೆರಳು ಕಾರು ವಶ ಪಡೆಸಿಕೊಂಡಿದ್ದಾರೆ. ಕಾರಿನ ದಾಖಲೆ ಪರಿಶೀಲಿಸಲಾಗಿದೆ. ಆದರೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಈ ರೀತಿ ಸ್ಟಂಟ್ ಮಾಡಿದ್ದು ರಿಕ್ಕಿ ರೈ? ಅಥವಾ ಬೇರೆಯವರಾ? ಎಂಬುದು ತಿಳಿಯಬೇಕಿದೆ. ಈ ಸಂಬಂಧ ಪೊಲೀಸರು ರಿಕ್ಕಿ ರೈಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಸಿಸಿಟಿವಿ ಆಧಾರದಲ್ಲಿ ಕಾರಿನ ಚಾಲಕ ಯಾರೆಂದು ಪೊಲೀಸರು ಪತ್ತೆ ಮಾಡಲಿದ್ದಾರೆ. ಇದರೊಂದಿಗೆ ಕಾರಿನ ಮಾಲೀಕರ ಬಗ್ಗೆ ಲಭ್ಯ ದಾಖಲೆ, ಸಂಖ್ಯೆಯನ್ನು ಪ್ರಾದೇಶಿಕ ಸಾರಿಗೆ ಕಚೇರಿ ರವಾನಿಸಿದ ಸಂಚಾರಿ ಪೊಲೀಸರು ಮಾಹಿತಿಗಾಗಿ ಕೋರಿದ್ದಾರೆ. ಆರ್‌ಟಿಓದಿಂದ ಮಾಹಿತಿ ಬರುವಷ್ಟರಲ್ಲಿ ರಿಕ್ಕಿ ರೈ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಬೆಂಗಳೂರಿನ ಹೃದಯಭಾಗದಲ್ಲಿ ತಡರಾತ್ರಿ ಕಾರಿನ ಸ್ಟಂಟ್ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಲಾಗಿದೆ. ಕಾರು, ಬೈಕ್ ಸೇರಿದಂತೆ ಇತರ ಯಾವುದೇ ವಾಹನಗಳಿಂದ ಈ ರೀತಿ ಸ್ಟಂಟ್, ವ್ಹೀಲಿಂಗ್ ಮಾಡುವುದು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವಂತೆ ಚಾಲನೆ ಮಾಡುವುದು ಸಂಚಾರ ಸುರಕ್ಷತಾ ನಿಯಮಕ್ಕೆ ವಿರುದ್ಧವಾಗಿದೆ. ಹೀಗೆ ಮಾಡಿದಲ್ಲಿ ದಂಡ, ಶಿಕ್ಷೆ ಹಾಗೂ ಚಾಲನಾ ಪರವಾನಿಗೆ ರದ್ದಿಗೆ ಅವಕಾಶ ಇರುತ್ತದೆ. ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಸೂಕ್ತ ಕಾನುನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications