Bengaluru Airport Toll: ಕೇಂಪೇಗೌಡ ಏರ್‌ಪೋರ್ಟ್ ಟೋಲ್ ದರ ದಿಢೀರ್ ಹೆಚ್ಚಳ
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಟೋಲ್ ದರ ಏರಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆ ಸಾದಹಳ್ಳಿ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ಎಲ್ಲ ವಾಹನಗಳಿಗೆ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಏಪ್ರಿಲ್ 2ರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಇನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಟೋಲ್ ದರ ದುಬಾರಿಯಾಗಿದೆ.
ಕರ್ನಾಟಕದ ಅತ್ಯಂತ ದುಬಾರಿ ಟೋಲ್ ಎಂದು ಕರೆಸಿಕೊಂಡಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟೋಲ್‌ನಲ್ಲಿ ಈ ದರ ಹೆಚ್ಚಳವು ದೈನಂದಿನ ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಿದೆ. ಈ ಹೊಸ ದರಗಳು ಸಿಂಗಲ್ ಟ್ರಿಪ್ ಹಾಗೂ 24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣ ಎರಡಕ್ಕೂ ಅನ್ವಯಿಸಲಿದೆ. ಹಾಗಾಗಿ ಸಾದಹಳ್ಳಿ ಟೋಲ್ ಪ್ಲಾಜಾದಲ್ಲಿ ಇಂದಿನಿಂದಲೇ ದುಬಾರಿ ಶುಲ್ಕ ಪಾವತಿಸಬೇಕಾಗಿದೆ. ಹೆಚ್ಚಿಸಿದೆ. ಪ್ರಯಾಣ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ಪ್ರಯಾಣಿಕರು ಮತ್ತು ಸಾರಿಗೆ ನಿರ್ವಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಷ್ಕೃತ ದರದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟೋಲ್ ಮೂಲಕ ಸಾಗುವ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು (ಲಘು ಮೋಟಾರು ವಾಹನಗಳು) ಒಂದೇ ಪ್ರಯಾಣಕ್ಕೆ 120 ರೂಪಾಯಿ ಪಾವತಿಸಬೇಕು. 24 ಗಂಟೆಗಳ ಒಳಗೆ ಹಿಂತಿರುಗಲು 180 ರೂಪಾಯಿ ಟೋಲ್ ಕಟ್ಟಬೇಕು. ಇದರ ಹಿಂದಿನ ದರಗಳು 115 ರೂಪಾಯಿ ಹಾಗೂ 170 ರೂಪಾಯಿ ಇತ್ತು.
ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು ಒಂದೇ ಪ್ರಯಾಣಕ್ಕೆ ಪ್ರಸ್ತುತ 175 ರೂಪಾಯಿ ಹಾಗೂ 265 ರೂಪಾಯಿಗೆ ರಿಟರ್ನ್ ಟ್ರಿಪ್‌ಗೆ ಪಾವತಿಸಬೇಕಿತ್ತು. ಈ ದರ ಕೂಡ ಹೆಚ್ಚಾಗಿದ್ದು, ಈಗ ಸಿಂಗಲ್ ಟ್ರಿಪ್‌ಗೆ 185 ರೂಪಾಯಿ ಹಾಗೂ ಹಿಂತಿರುಗುವ ಟ್ರಿಪ್‌ಗೆ 275 ರೂಪಾಯಿ ಹೆಚ್ಚಾಗಿದೆ.

ಬಸ್ಸುಗಳು ಮತ್ತು ಟ್ರಕ್‌ಗಳಿಗೆ ಇದ್ದ 355 ರೂಪಾಯಿ ಹಾಗೂ 535 ರೂಪಾಯಿ ಟೋಲ್ ದರವು ಈಗ 370 ರೂಪಾಯಿ ಸಿಂಗಲ್ ಟ್ರಿಪ್ ಹಾಗೂ ರಿಟರ್ನ್ ಟ್ರಿಪ್ 550 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನುಳಿದಂತೆ ಭಾರೀ ಮೋಟಾರ್ ನಿರ್ಮಾಣ ಉಪಕರಣಗಳು ಮತ್ತು ಮೂರರಿಂದ ಆರು ಆಕ್ಸಲ್ ವಾಹನಗಳು ಸೇರಿದಂತೆ ದೊಡ್ಡ ವಾಹನಗಳು ಸಿಂಗಲ್ ಟ್ರಿಪ್‌ಗೆ ಈಗ 560 ರೂಪಾಯಿ ಹಾಗು ರಿಟರ್ನ್ ಟ್ರಿಪ್‌ಗೆ 840 ರೂಪಾಯಿ ಟೋಲ್ ಪಾವತಿಸಬೇಕು.
ಏಳು ಆಕ್ಸಲ್‌ಗಳಿಗಿಂತ ಹೆಚ್ಚಿನ ಭಾರೀ ವಾಹನಗಳು ಈಗ ಏಕಮುಖ ಪ್ರಯಾಣಕ್ಕೆ 725 ರೂಪಾಯಿ ಹಾಗೂ ರಿಟರ್ನ್ ಟ್ರಿಪ್‌ಗೆ 1,090 ರೂಪಾಯಿ ದರ ನಿಗದಿ ಮಾಡಲಾಗಿದೆ. ಡೀಸೆಲ್ ದರ ಏರಿಕೆ ಬೆನ್ನಲ್ಲೇ ಟೋಲ್ ದರ ಕೂಡ ಹೆಚ್ಚಾಗಿರುವುದು ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಈಗಾಗಲೇ ಜನ ಹಾಲಿನ ದರ ಏರಿಕೆ ಸೇರಿದಂತೆ ಕರ್ನಾಟಕದಲ್ಲಿ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್‌ನಲ್ಲಿದ್ದಾರೆ. ನಿನ್ನೆಯಷ್ಟೇ ರಾಜ್ಯ ಸರ್ಕಾರ ಡೀಸೆಲ್ ದರ ಏರಿಸಿರುವ ಬೆನ್ನಲ್ಲೇ ಇದೀಗ ಟೋಲ್ ಶುಲ್ಕ ಕೂಡ ಹೆಚ್ಚಾಗಿದೆ.












Click it and Unblock the Notifications