ಬೆಂಗಳೂರು - ಜಪಾನ್ ನಡುವೆ ಮಹತ್ವದ ಒಪ್ಪಂದ, ಜಂಟಿ ಉದ್ದೇಶ ಘೋಷಣೆ!
ಬೆಂಗಳೂರು ನಗರ ಹಾಗೂ ಜಪನ್ ದೇಶದ ನಡುವೆ ಮಹತ್ವದ ಚರ್ಚೆ ನಡೆದಿದೆ. ಬೆಂಗಳೂರು ನಗರ ಹಾಗೂ ಜಪಾನ್ ದೇಶದ ನಗೋಯಾ ನಗರಗಳ ನಡುವೆ ಆರ್ಥಿಕ ವಿನಿಮಯವನ್ನು ಉತ್ತೇಜಿಸಲು ನಗೋಯಾ ನಗರದ ಮೇಯರ್ ಇಚಿರೋ ಹಿರೊಸಾವಾ ಮತ್ತು ಬಿಬಿಎಂಪಿಯ ಆಡಳಿತಾಧಿಕಾರಿಯಾದ ತುಷಾರ್ ಗಿರಿನಾಥ್ ಅವರು ಪರಸ್ಪರ ಸಹಿಹಾಕುವ ಮೂಲಕ ಜಂಟಿ ಉದ್ದೇಶ ಘೋಷಣೆ (Joint Declaration of Intent) ಮಾಡಿಕೊಳ್ಳಲಾಗಿದೆ. ಇದು ಬೆಂಗಳೂರು ಇತಿಹಾಸದಲ್ಲಿ ಹೊಸ ಬದಲಾವಣೆ ಎಂದೇ ಹೇಳಲಾಗುತ್ತಿದೆ.
ಸಹೋದರ ನಗರಗಳ ಉತ್ತೇಜನಕ್ಕಾಗಿ ಈ ಜಂಟಿ ಉದ್ದೇಶ ಘೋಷಣೆ (Joint Declaration of Intent) ಯನ್ನು ನಗೋಯಾ ನಗರ ಮತ್ತು ಬೆಂಗಳೂರು ನಗರಗಳ ನಡುವೆ ವಿಕಾಸಸೌಧದ ಕೊಠಡಿ ಸಂಖ್ಯೆ 422 ರಲ್ಲಿ ಕೈಗೊಳ್ಳಲಾಗಿದೆ. ನಗೋಯಾ ನಗರ ಮತ್ತು ಬೆಂಗಳೂರು ನಗರಗಳ ನಡುವಿನ ಸ್ನೇಹ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ, ಕೆಳಗಿನಂತೆ ಪರಸ್ಪರ ಸಹಕರಿಸುವ ಉದ್ದೇಶ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ಮಾಡಲಾಗಿದೆ.

1. ಎರಡೂ ನಗರಗಳ ನಡುವೆ ಆರ್ಥಿಕ ವಿನಿಮಯವನ್ನು ಉತ್ತೇಜಿಸುವ ಸಲುವಾಗಿ, ತಮ್ಮ ತಮ್ಮ ಪ್ರದೇಶಗಳ ಕೈಗಾರಿಕಾ ಪ್ರವೃತ್ತಿಗಳ ಕುರಿತು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವುದು ಮತ್ತು ಆ ಮಾಹಿತಿಯನ್ನು ವ್ಯಾಪಾರ ಸಂಸ್ಥೆಗಳು ಹಾಗೂ ಇತರ ಸಂಬಂಧಿತ ಘಟಕಗಳಿಗೆ ಲಭ್ಯವಾಗುವಂತೆ ಮಾಡುವುದು.
2. ಎರಡೂ ನಗರಗಳು ಉದ್ಯಮಿಗಳನ್ನು, ವ್ಯಾಪಾರ ಸಂಸ್ಥೆಗಳನ್ನು ತಮ್ಮ ವ್ಯವಹಾರ ವಿಸ್ತರಣೆಗಾಗಿ ಪ್ರೋತ್ಸಾಹಿಸುತ್ತವೆ. ವಿಶೇಷವಾಗಿ ಪ್ರತಿ ಪ್ರದೇಶದ ಶಕ್ತಿ ಹೊಂದಿರುವ ಕೈಗಾರಿಕಾ ಕ್ಷೇತ್ರಗಳಲ್ಲಿ.
3. ಎರಡೂ ಪ್ರದೇಶಗಳ ಆರ್ಥಿಕತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ, ಆಯಾ ಪ್ರದೇಶಗಳ ವಿಶ್ವವಿದ್ಯಾಲಯಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ಮಾನವ ಸಂಪನ್ಮೂಲ ವಿನಿಮಯವನ್ನು ಉತ್ತೇಜಿಸುವುದು.
ಬಿಬಿಎಂಪಿ ಆಡಳಿತಾಧಿಕಾರಿಯಾದ ತುಷಾರ್ ಗಿರಿ ನಾಥ್ ಅವರು ಮಾತನಾಡಿ, ನಗೋಯಾ ನಗರವು ಸುಂದರವಾದ ಸ್ಥಳವಾಗಿದ್ದು, ಅಲ್ಲಿನ ಸಂಸ್ಥೆಗಳು ಹೆಚ್ಚಾಗಿ ಬೆಂಗಳೂರು ನಗರಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ ಎಂದು ಹೇಳಿದರು.
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ಬಿಬಿಎಂಪಿ ಜೊತೆ ನಗೋಯ ಜಂಟಿ ಉದ್ದೇಶ ಘೋಷಣೆ ಮಾಡಿಕೊಂಡಿರುವುದು ವ್ಯಾಪಾರ ಬೆಳವಣಿಗೆಗೆ ಭಾರಿ ಉತ್ತೇಜನ ನೀಡಲಿದೆ. ಇದರಿಂದ ಜಪಾನ್‌ನ ಸಾಕಷ್ಟು ಸಂಸ್ಥೆಗಳು ಬೆಂಗಳೂರು ನಗರಕ್ಕೆ ಬರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಗೋಯಾದ ಮೇಯರ್ ಇಚಿರೋ ಹಿರೊಸಾವಾ ಅವರು ಮಾತನಾಡಿ, ಬೆಂಗಳೂರು ನಗರದಲ್ಲಿ ಈಗಾಗಲೇ ಸಾಕಷ್ಟು ಸಂಸ್ಥೆಗಳಿದ್ದು, ಎರಡೂ ನಗರಗಳ ಜೊತೆ ಆರ್ಥಿಕ ವಿನಿಮಯವನ್ನು ಉತ್ತೇಜಿಸಲು ಬಿಬಿಎಂಪಿಯ ಜೊತೆ ಜಂಟಿ ಉದ್ದೇಶ ಘೋಷಣೆ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದಿದ್ದಾರೆ.












Click it and Unblock the Notifications