ಬೆಂಗಳೂರು ಭಾರತದ 5ನೇ ಅತ್ಯಂತ ಕೊಳಕು ನಗರ! ಮತ್ತೆ ಟ್ರೋಲ್‌ಗೆ ಕಾರಣವಾದ ರಿಪೋರ್ಟ್
Swachh Survekshan 2025: ರಾಷ್ಟ್ರ ಮಟ್ಟದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಬೆಂಗಳೂರಿಗೆ ಕೆಟ್ಟ ಹೆಸರು ಬರುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಿವೇ ಕಾರಣ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯವೂ ಮುಂದುವರಿದಿದೆ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಕಸ ಸಂಗ್ರಹ ಲೋಪ ಹಾಗೂ ಮಿಶ್ರ ಕಸ ಅಂದರೆ ಒಣ ಹಾಗೂ ಹಸಿಕಸವನ್ನು ಸೇರಿಸಿ ತೆಗೆದುಕೊಳ್ಳುವುದು ಹೆಚ್ಚಾಗಿದೆ. ಇದರೊಂದಿಗೆ ಬೆಂಗಳೂರಿನ ರಸ್ತೆಗಳಲ್ಲಿ ಕಳೆದ ಎರಡು ಮೂರು ವರ್ಷಗಳ ಅವಧಿಯಲ್ಲಿ ತೀರ ಎಂದರೆ ತೀರ ಕಳಪೆ ಹಂತಕ್ಕೆ ತಲುಪಿದೆ. ಇದೀಗ ಈ ವಿಷಯವು ಬೆಂಗಳೂರಿನ ಟ್ರೋಲ್‌ಗೆ ಹಾಗೂ ಅಪಹಾಸ್ಯಕ್ಕೂ ಕಾರಣವಾಗಿದೆ.
ಬೆಂಗಳೂರು ಈ ಬಾರಿಯೂ ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2025ರಲ್ಲಿ ಸಂಪೂರ್ಣ ಫೇಲ್ ಆಗಿದೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆಯಲ್ಲಿ ಮಿಸ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಕೇಂದ್ರ ಸರ್ಕಾರವು ಈ ರ‍್ಯಾಂಕಿಂಗ್ ಕೊಟ್ಟಿದೆ. ಕೇಂದ್ರ ಸರ್ಕಾರವು ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯನ್ನು ಪ್ರತಿ ವರ್ಷವೂ ನಡೆಸುತ್ತದೆ. ಆದರೆ ಈ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಇದು ಮತ್ತೆ ಬೆಂಗಳೂರನ್ನು ಆಡಿಕೊಳ್ಳುವವರಿಗೆ ಆಹಾರವಾಗಿದೆ. ಇದು ಬ್ರ್ಯಾಂಡ್ ಬೆಂಗಳೂರಿಗೆ ಭಾರೀ ಪೆಟ್ಟು ಕೊಟ್ಟಿದೆ ಎಂದೇ ಹೇಳಲಾಗುತ್ತಿದೆ. ಬೆಂಗಳೂರನ್ನು ಬ್ರ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ರಾಜ್ಯ ಸರ್ಕಾರವು ಹೇಳಿತ್ತು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಪರಿಚಯಿಸಿದ್ದರು. ಆದರೆ, ಅದು ಹೆಸರಿಗೆ ಮಾತ್ರ ಸೀಮಿತವಾಗಿದೆ. ಕಸ ವಿಲೇವಾರಿ ವಿಚಾರದಲ್ಲಿ ಬಿಬಿಎಂಪಿ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿಗೆ ಕೊಳಕು ನಗರ ಎನ್ನುವ ಹಣೆಪಟ್ಟಿ ಬಂದಿದೆ. ಸ್ವಚ್ಛ ಸರ್ವೇಕ್ಷಣ 2025 ಸಮೀಕ್ಷೆಯಲ್ಲಿ ಬೆಂಗಳೂರು ಭಾರತದ ಐದನೇ ಕೊಳಕು ನಗರವೆಂದು ಸ್ಥಾನ ಪಡೆದಿದೆ. ಇದು ನಿಜಕ್ಕೂ ಬೆಂಗಳೂರಿಗರಿಗೆ ಮುಜುಗರವನ್ನು ತರುವ ಸಂಗತಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಒಂದು ಕಾಲದಲ್ಲಿ ಗಾರ್ಡ್‌ಸಿಟಿ ಹಾಗೂ ಸಿಲಿಕಾನ್ ಸಿಟಿ ಎನ್ನುವ ಖ್ಯಾತಿಯನ್ನು ಗಳಿಸಿರುವ ಬೆಂಗಳೂರು ಇದೀಗ ಗಾರ್ಬೇಜ್ ಸಿಟಿ ಎನ್ನುವ ಕುಖ್ಯಾತಿಯನ್ನು ಗಳಿಸಿದೆ. ಸ್ವಚ್ಛ ಸರ್ವೇಕ್ಷಣಾ 2025 ಸಮೀಕ್ಷೆಯಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯ ಇರುವ ನಗರಗಳ ವಿಭಾಗದಲ್ಲಿ ದೇಶದ ಐದನೇ ಕೊಳಕು ನಗರ ಎನ್ನುವ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದ್ದು. ಭಾರೀ ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ದೇಶದಲ್ಲಿರುವ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ಸ್ವಚ್ಛತೆ ಕಳಪೆ ಆಗಿದೆ. ಬೆಂಗಳೂರಿನ ಸ್ವಚ್ಛತೆಯು ರಾಷ್ಟ್ರೀಯ ರ‍್ಯಾಂಕಿಂಗ್ ನಲ್ಲಿ 36ನೇ ಸ್ಥಾನದಲ್ಲಿದ್ದರೆ, ಕರ್ನಾಟಕ 15 ನೇ ರ‍್ಯಾಂಕಿಂಗ್ ನಲ್ಲಿದೆ.
ಬೆಂಗಳೂರಿನೊಂದಿಗೆ ರಾಂಚಿ, ಚೆನ್ನೈ, ಲುಧಿಯಾನ ಹಾಗೂ ಮಧುರೈ ಪ್ರದೇಶಗಳು ಅತ್ಯಂತ ಕೊಳಕು ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇದರೊಂದಿಗೆ ಅಹಮದಾಬಾದ್, ಭೋಪಾಲ್, ಲಕ್ನೋ, ರಾಯ್‌ಪುರ ಹಾಗೂ ಜಬಲ್‌ಪುರಗಳು ಮೊದಲ ಐದು ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.












Click it and Unblock the Notifications