ಬೆಂಗಳೂರು ವಿಮಾನ ನಿಲ್ದಾಣ:ಪ್ರಯಾಣಿಕನ ಸೂಟ್‌ಕೇಸ್‌ನಲ್ಲಿ 70ಕ್ಕೂ ಹೆಚ್ಚು ಜೀವಂತ ಹಾವು, 6 ಕೋತಿಗಳು ಪತ್ತೆ- ಹೌಹಾರಿದ ಅಧಿಕಾರಿಗಳು
ಬೆಂಗಳೂರು, ಸೆಪ್ಟೆಂಬರ್ 07: ಬುಧವಾರ ರಾತ್ರಿ ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ತಮಿಳುನಾಡಿನ ವ್ಯಕ್ತಿಯೊಬ್ಬರ ಸೂಟ್‌ಕೇಸ್‌ನಲ್ಲಿ 20 ನಾಗರ ಹಾವು ಸೇರಿದಂತೆ 70 ಕ್ಕೂ ಅಧಿಕ ಹಾವುಗಳು ಪತ್ತೆಯಾಗಿವೆ. ಇದೇ ವ್ಯಕ್ತಿಯ ಸೂಟ್‌ಕೇಸ್‌ನಲ್ಲಿ 6 ಕೋತಿಗಳೂ ಕಂಡುಬಂದಿವೆ. ತಮಿಳುನಾಡಿನ ವ್ಯಕ್ತಿ ವನ್ಯಜೀವಿ ಕಳ್ಳಸಾಗಣೆದಾರ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಗಳ ಪ್ರಕಾರ, ಥಾಯ್ಲೆಂಡ್‌ನಿಂದ ಬಂದ ವಿಮಾನ ಪ್ರಯಾಣಿಕರ ವಿವರಗಳನ್ನು ಪಡೆಯುತ್ತಿದ್ದ ಸಮಯದಲ್ಲಿ ಇದು ಪತ್ತೆಯಾಗಿದೆ. ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಇದನ್ನು ಭೇದಿಸಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರಯಾಣಿಕನನ್ನು ತಡೆಹಿಡಿದು ಆತನ ಲಗೇಜ್ ಅನ್ನು ಸ್ಕ್ಯಾನ್ ಮಾಡಲಾಗಿದೆ. ಅದರಲ್ಲಿ ಕಂಡುಬಂದಿರುವ ಹಾವು, ಕೋತಿಗಳನ್ನು ನೋಡಿ ತನಿಖಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
'20 ಅತ್ಯಂತ ವಿಷಕಾರಿ ಕಿಂಗ್ ಕೋಬ್ರಾಗಳು ಮತ್ತು 50 ಕ್ಕೂ ಹೆಚ್ಚು ಇತರ ಮರಿ ಹಾವುಗಳನ್ನು ವ್ಯಕ್ತಿ ಹೊತ್ತೊಯ್ಯುತ್ತಿದ್ದ. ಎಲ್ಲಾ ಸರೀಸೃಪಗಳನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿಟ್ಟುಕೊಂಡಿದ್ದ. ಆತನ ಚೆಕ್-ಇನ್ ಸೂಟ್ಕೇಸ್ನಲ್ಲಿ ಇವೆಲ್ಲವೂ ಕಂಡುಬಂದಿವೆ. ಇವುಗಳನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು' ಎಂದು ತನಿಖಾಧಿಕಾರಿಯೊಬ್ಬರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.

ಒಟ್ಟು 78 ಪ್ರಾಣಿಗಳು ಜೀವಂತವಾಗಿ ಕಂಡುಬಂದಿವೆ. 6 ಮಂಗಗಳು ಸತ್ತ ಸ್ಥಿತಿಯಲ್ಲಿ ಕಂಡುಬಂದಿವೆ. 1962 ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110 ರ ಅಡಿಯಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೀವಂತ ಪ್ರಾಣಿಗಳನ್ನು ಅವುಗಳ ಮೂಲ ದೇಶಕ್ಕೆ ವಾಪಸ್ಸು ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಸತ್ತ ಪ್ರಾಣಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಗೇಜ್‌ನಲ್ಲಿದ್ದ ಆರು ಕೋತಿಗಳನ್ನು ಸಹ ವ್ಯಕ್ತಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

6.5 ಕೆಜಿ ತೂಕದ ಚಿನ್ನ ಪತ್ತೆ
ಕಳೆದು ತಿಂಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 6.5 ಕೆಜಿ ತೂಕದ ಚಿನ್ನ ಪತ್ತೆಯಾಗಿತ್ತು.
ವ್ಯಕ್ತಿಯೊಬ್ಬರಿಂದ 6.5 ಕೆಜಿ ತೂಕದ 4 ಕೋಟಿ ಮೌಲ್ಯದ ಚಿನ್ನದ ತುಂಡುಗಳನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ವ್ಯಕ್ತಿ ಇಂದೋರ್‌ನಿಂದ ಬೆಂಗಳೂರಿಗೆ ಬಂದಿದ್ದರು. ಅವರ ಸೂಟ್‌ಕೇಸ್‌ನಿಂದ ಚಿನ್ನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಚಿನ್ನವು 6.5 ಕೆಜಿ ತೂಕದ್ದಾಗಿತ್ತು. ಇದರ ಮೌಲ್ಯ 4 ಕೋಟಿ ರೂಪಾಯಿಯಾಗಿದೆ.












Click it and Unblock the Notifications