ಮದುವೆ ಆಮಿಷವೊಡ್ಡಿ ವಂಚನೆ, ಸಿಸಿಟಿವಿ ಆಫ್ ಮಾಡಿ ಕೃತ್ಯ: ಹುಣಸಮಾರನಹಳ್ಳಿ ಮಠದ ಸ್ವಾಮೀಜಿ ಅರೆಸ್ಟ್

ಬೆಂಗಳೂರು: ಮದುವೆಯಾಗುವುದಾಗಿ ಯುವತಿಗೆ ಆಮಿಷವೊಡ್ಡಿ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಗಂಭೀರ ಆರೋಪದ ಮೇಲೆ ಚಿಕ್ಕಜಾಲ ಸಮೀಪದ ಹುಣಸಮಾರನಹಳ್ಳಿ ಮಠದ ಸ್ವಾಮೀಜಿಯನ್ನ ಪೊಲೀಸರು ಬಂಧಿಸಿದ್ದಾರೆ.

ಹುಣಸಮಾರನಹಳ್ಳಿಯ ಮುದ್ದಣಪುರ ದೇವವೀರ ಸಂಸ್ಥಾನಮಠದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ (45) ಅಲಿಯಾಸ್ ದಯಾನಂದ ಬಂಧಿತ ಆರೋಪಿ. 25 ವರ್ಷದ ತನ್ನದೇ ಸಂಬಂಧಿ ಯುವತಿಗೆ ವಂಚಿಸಿದ ಹಿನ್ನೆಲೆಯಲ್ಲಿ, ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಈಶಾನ್ಯ ವಿಭಾಗದ ಮಹಿಳಾ ಠಾಣೆ ಪೊಲೀಸರು ಹುಣಸಮಾರನಹಳ್ಳಿ ಸ್ವಾಮೀಜಿ ಬಂಧನ ಮಾಡಿದ್ದಾರೆ.

Bengaluru Hunasamaranahalli Mutt Swamiji Arrested for Sexual Assault Under Pretext of Marriage

ಸಿಸಿಟಿವಿ ಆಫ್ ಮಾಡಿ ಲೈಂಗಿಕ ದೌರ್ಜನ್ಯ

ಸಂತ್ರಸ್ತೆಯು ತನ್ನ 10ನೇ ವಯಸ್ಸಿನಿಂದಲೂ ಮಠದ ಸಮೀಪದಲ್ಲೇ ಇರುವ ತನ್ನ ಅತ್ತೆ ಮನೆಯಲ್ಲಿ ವಾಸವಾಗಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. 2023ರಲ್ಲಿ ಸಂತ್ರಸ್ತೆಯ ಕುಟುಂಬ ಹಾಗೂ ಆರೋಪಿ ಸ್ವಾಮೀಜಿ ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಸ್ವಾಮೀಜಿ, ನಿರಂತರವಾಗಿ ಫೋನ್ ಮತ್ತು ಮೆಸೇಜ್ ಮಾಡುವ ಮೂಲಕ ಆಕೆಯೊಂದಿಗೆ ತೀವ್ರ ಸಲುಗೆ ಬೆಳೆಸಿಕೊಂಡಿದ್ದ.

ತನ್ನ ವೈಯಕ್ತಿಕ ವಿಚಾರಗಳನ್ನ ಯುವತಿಯ ಬಳಿ ಹಂಚಿಕೊಳ್ಳುತ್ತಿದ್ದ ಸ್ವಾಮೀಜಿ, "ನಿನ್ನನ್ನು ಮದುವೆಯಾಗುತ್ತೇನೆ, ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ನಂಬಿಸಿದ್ದನು. ಇದೇ ಭರವಸೆಯ ಮೇಲೆ 2025ರಿಂದ ಯುವತಿಯ ಜೊತೆ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದನು.

ಮಠದಲ್ಲಿ ಕೃತ್ಯವೆಸಗುವಾಗ ಸಿಸಿಟಿವಿ ಕ್ಯಾಮೆರಾಗಳನ್ನ ಆಫ್ ಮಾಡಿಸಿ ಕೊಠಡಿಗೆ ಕರೆದೊಯ್ಯುತ್ತಿದ್ದನು. ಅಲ್ಲದೆ, ಕಾರಿನಲ್ಲಿ ಹಲವು ಬಾರಿ ಯುವತಿಯನ್ನ ಹೊರಗೆ ಕರೆದುಕೊಂಡು ಹೋಗಿಯೂ ಲೈಂಗಿಕವಾಗಿ ಬಳಸಿಕೊಂಡಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಣಬೆದರಿಕೆ ಹಾಗೂ ಸಹೋದರನ ಕೈವಾಡ

ಇತ್ತೀಚೆಗೆ ಯುವತಿಯು ಮದುವೆಯಾಗುವಂತೆ ಒತ್ತಾಯಿಸಿದಾಗ, ಸ್ವಾಮೀಜಿ ಆಕೆಯೊಂದಿಗೆ ಮದುವೆಗೆ ನಿರಾಕರಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. "ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ" ಎಂದು ಪ್ರಾಣ ಬೆದರಿಕೆ ಹಾಕಿದ್ದನು. ಇದರ ಜೊತೆಗೆ, ಆಕೆಯ ವಿರುದ್ಧವೇ ಮಠದಲ್ಲಿ ಸುಳ್ಳು ಆರೋಪಗಳನ್ನ ಮಾಡಿ ಷಡ್ಯಂತ್ರ ರೂಪಿಸಿದ್ದನು.

ಇದೇ ವೇಳೆ, ಸ್ವಾಮೀಜಿಯ ಆಪ್ತ ಹಾಗೂ ಸಹೋದರನಾಗಿರುವ ಜಗದೀಶ್ ಎಂಬಾತನೂ ಯುವತಿಗೆ ಬೆದರಿಕೆ ಹಾಕಿದ್ದನು. "ಸ್ವಾಮೀಜಿ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ, ಬೇರೆ ಯಾರನ್ನಾದರೂ ಮದುವೆಯಾಗು. ನಾವು ಕೊಡುವ ಹಣ ತೆಗೆದುಕೊಂಡು ಮನೆ ಖಾಲಿ ಮಾಡಿ ಬೇರೆಡೆ ಹೋಗು. ಇಲ್ಲವಾದಲ್ಲಿ ಸಾಯಿಸುತ್ತೇವೆ" ಎಂದು ಬೆದರಿಸಿದ್ದನು.

ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳಾ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿ, ಆತನ ಸಹೋದರ ಜಗದೀಶ್‌ನನ್ನೂ ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

2017ರ ರಾಸಲೀಲೆ ವೈರಲ್‌

ಬಂಧಿತ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆಯೂ ಸುಮಾರು ವಿವಾದಗಳಿಗೆ ಗುರಿಯಾಗಿದ್ದನು. 2017ರಲ್ಲಿ ಇದೇ ಸ್ವಾಮೀಜಿಯು ಯುವತಿಯೊಬ್ಬಳ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಎನ್ನಲಾದ ವಿಡಿಯೋವೊಂದು ರಾಜ್ಯಾದ್ಯಂತ ವೈರಲ್ ಆಗಿ ತೀವ್ರ ಕೋಲಾಹಲ ಸೃಷ್ಟಿಸಿತ್ತು.

ಇದಷ್ಟೇ ಅಲ್ಲದೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಮಠಕ್ಕೆ ಸೇರಿದ ಸಾವಿರಾರು ಎಕರೆ ಜಮೀನಿನ ವಿಚಾರದಲ್ಲೂ ಈ ಸ್ವಾಮೀಜಿಯ ವಿರುದ್ಧ ಹಲವು ಗಂಭೀರ ಆರೋಪಗಳು ಹಾಗೂ ವಿವಾದಗಳು ತಲೆದೋರಿದ್ದವು. ಇದೀಗ ಅತ್ಯಾಚಾರ ಹಾಗೂ ವಂಚನೆ ಪ್ರಕರಣದಲ್ಲಿ ಸ್ವಾಮೀಜಿ ಜೈಲು ಕಂಬಿ ಎಣಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+