Bengaluru Horror: ಬೆಂಗಳೂರಿನಲ್ಲಿ ಲೈಟರ್ ವಿಚಾರಕ್ಕೆ ಸ್ನೇಹಿತರ ಸಣ್ಣ ಜಗಳ ಸಾವಿನಲ್ಲಿ ಅಂತ್ಯ: ಇಲ್ಲಿದೆ ಭಯಾನಕ ಸ್ಟೋರಿ
Bengaluru crime news: ಲೈಟರ್ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಸಣ್ಣ ಜಗಳ, ಯುವಕನ ಸಾವಿನಲ್ಲಿ ಅಂತ್ಯವಾದ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಆಗಿರುವ ರೋಷನ್ ಹೆಗ್ಡೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟವರು ಪ್ರಶಾಂತ್ (33). ಇವರು ವೀರಸಂದ್ರದ ನಿವಾಸಿ ಆಗಿದ್ದು, ತಾಯಿಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರೋಷನ್ ಹೆಗ್ಡೆ ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರಾಗಿದ್ದು, ದೋಮ್ಮಲೂರಿನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಾರ್ಟಿಗೆ ಹೋಗಿದ್ದ ಪ್ರಶಾಂತ್: ಪೊಲೀಸರ ಮಾಹಿತಿ ಪ್ರಕಾರ, ಜನವರಿ 24ರಂದು ಹೆಬ್ಬಗೋಡಿ ಸಮೀಪದ ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಶಾಂತ್ ಮತ್ತು ರೋಷನ್ ಸೇರಿದ್ದ ತಂಡ ಸೋಲನುಭವಿಸಿತ್ತು. ಈ ಹಿನ್ನೆಲೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಮನೆಗೆ ತೆರಳಿದ ಪ್ರಶಾಂತ್, ಪಂದ್ಯದಲ್ಲಿ ಸೋತ ಬೇಸರವನ್ನು ತಾಯಿಯ ಬಳಿ ವ್ಯಕ್ತಪಡಿಸಿದ್ದ. ಜನವರಿ 25ರ ಭಾನುವಾರ ಇಡೀ ದಿನ ಮನೆಯಲ್ಲೇ ಇದ್ದ ಪ್ರಶಾಂತ್‌ನನ್ನು ಸಂಜೆ ವೇಳೆ ರೋಷನ್ ಪಾರ್ಟಿಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ.
ರೋಷನ್‌ಗೆ ಅವಾಚ್ಯವಾಗಿ ನಿಂದನೆ: ಕಮ್ಮಸಂದ್ರದ ಆಟದ ಮೈದಾನದಲ್ಲಿ ಪ್ರಶಾಂತ್, ರೋಷನ್ ಮತ್ತು ಇತರ ಸ್ನೇಹಿತರು ಮದ್ಯಪಾನ ಮಾಡುತ್ತಿದ್ದಾಗ, ಸಿಗರೇಟ್ ಹಚ್ಚಲು ಲೈಟರ್ ಕೇಳಿದ ವಿಚಾರಕ್ಕೆ ಮತ್ತೆ ಜಗಳ ಉಂಟಾಗಿದೆ. ಈ ವೇಳೆ ರೋಷನ್ ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದಾನೆ. ಸ್ನೇಹಿತರು ಮಧ್ಯ ಪ್ರವೇಶಿಸಿ ಜಗಳವನ್ನು ಶಮನಗೊಳಿಸಿದ ಬಳಿಕ, ರೋಷನ್ ತನ್ನ ಕಾರಿನಲ್ಲಿ ಸ್ಥಳದಿಂದ ಹೊರಟಿದ್ದಾನೆ. ಆದರೆ, ಪ್ರಶಾಂತ್ ಕಾರಿನ ಬಳಿ ಹೋಗಿ ಬಾಗಿಲು ಹಿಡಿದುಕೊಂಡು ರೋಷನ್‌ಗೆ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಚಲಿಸುತ್ತಿದ್ದರೂ ಪ್ರಶಾಂತ್ ಬಾಗಿಲು ಬಿಡದೆ ಫುಟ್‌ರೆಸ್ಟ್ ಮೇಲೆ ನಿಂತಿದ್ದ. ಇದನ್ನು ಲೆಕ್ಕಿಸದೆ ರೋಷನ್ ಸುಮಾರು 400 ಮೀಟರ್ ದೂರದವರೆಗೆ ವೇಗವಾಗಿ ಕಾರು ಚಾಲನೆ ಮಾಡಿದ್ದು, ರಸ್ತೆ ಬದಿಯ ಮರ ಹಾಗೂ ಕಾಂಪೌಂಡ್‌ಗೆ ಗುದ್ದಿದ್ದಾನೆ. ಪರಿಣಾಮ ಪ್ರಶಾಂತ್ ತಲೆ ಮತ್ತು ಎದೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆ ಸಂಬಂಧ ಪ್ರಶಾಂತ್ ತಾಯಿ ನೀಡಿದ ದೂರಿನ ಮೇರೆಗೆ ಹೆಬ್ಬಗೋಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ರೋಷನ್ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಗಳು ಸೆರೆ ಆಗಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರೆದಿದೆ. ಅಪಘಾತದ ವೇಳೆ ಪ್ರಶಾಂತ್ ಕಾರಿನ ಎಡಭಾಗದ ಕಿಟಕಿಗೆ ನೇತಾಡುತ್ತಿದ್ದು, ಮರ ಮತ್ತು ಕಾಂಪೌಂಡ್ ನಡುವೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಆರೋಪಿ ರೋಷನ್‌ಗೂ ಗಾಯಗಳಾಗಿದ್ದು, ನಾಲಿಗೆಗೆ ಗಾಯವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಆತನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications