Bengaluru: ಜನವರಿಯಿಂದ ಜೂನ್ ಅವಧಿಯಲ್ಲಿ ಮನೆ ಮಾರಾಟ, ಆಫೀಸ್ ಲೀಸಿಂಗ್ ವ್ಯವಹಾರದಲ್ಲಿ ಭಾರೀ ಕುಸಿತ- ಅಂಕಿಅಂಶ, ವಿವರ
ಬೆಂಗಳೂರು, ಜುಲೈ 04: ಭಾರತದ ಪ್ರಾಪರ್ಟಿ ಮಾರುಕಟ್ಟೆಯು ದೇಶದ ಎಂಟು ಪ್ರಮುಖ ನಗರಗಳಲ್ಲಿ ಅಲ್ಪ ಪ್ರಮಾಣದ ಕುಸಿತವನ್ನು ಕಂಡಿದೆ. ಈ ವರ್ಷದ ಮೊದಲಾರ್ಧದಲ್ಲಿ ನಡೆದ ಮನೆ ಮಾರಾಟ ಮತ್ತು ಕಚೇರಿ ಸ್ಥಳದ ಗುತ್ತಿಗೆ ವ್ಯವಹಾರಗಳಲ್ಲಿ ಹಿನ್ನೆಡೆ ಉಂಟಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ 'ನೈಟ್ ಫ್ರಾಂಕ್ ಇಂಡಿಯಾ' ತಿಳಿಸಿದೆ.
ಭಾರತದಲ್ಲಿ ವಸತಿ ಮಾರಾಟವು ಸ್ಥಿರವಾಗಿದೆ. ಕೇವಲ 1 ಪ್ರತಿ ಶತದಷ್ಟು ಕಡಿಮೆಯಾಗಿದೆ. ಕಾರಣ, ಒಟ್ಟು ಕಚೇರಿ ಸ್ಥಳದ ಗುತ್ತಿಗೆ ಬೆಲೆಗಳು ಶೇಕಡಾ 3 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಬೆಲೆಗಳು ಶೇಕಡಾ 2 ರಿಂದ 10 ರಷ್ಟು ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ.

ಸಂಸ್ಥೆಯು ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ದೆಹಲಿ-ಎನ್‌ಸಿಆರ್, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಎಂಟು ನಗರಗಳಲ್ಲಿ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿದೆ.
ಬೆಂಗಳೂರು ನಗರವು ವಸತಿ ಪ್ರಾಪರ್ಟಿಗಳ ಮಾರಾಟ ಮತ್ತು ಕಚೇರಿ ಗುತ್ತಿಗೆ ಎರಡರಲ್ಲೂ ಅನುಕ್ರಮವಾಗಿ ಶೇಕಡಾ 2 ಮತ್ತು 10 ರಷ್ಟು ಭಾರೀ ಕುಸಿತ ಕಂಡಿದೆ. ವಸತಿ ಪ್ರಾಪರ್ಟಿಗಳ ಮಾರಾಟವು 26,677 ಯೂನಿಟ್‌ಗಳಿಂದ 26,247 ಯೂನಿಟ್‌ಗಳಿಗೆ ಇಳಿಕೆಯಾಗಿದೆ. ಆದರೆ ಕಚೇರಿ ಗುತ್ತಿಗೆಯು 7.7 ಮಿಲಿಯನ್ ಚದರ ಅಡಿಯಿಂದ 7 ಮಿಲಿಯನ್ ಚದರ ಅಡಿಗಳಿಗೆ ಇಳಿದಿದೆ.

ಮುಂಬೈನಲ್ಲಿ ವಸತಿ ಮಾರಾಟವು 44,200 ಯೂನಿಟ್‌ಗಳಿಂದ 40,798 ಯೂನಿಟ್‌ಗಳಿಗೆ ಇಳಿದೆ. ಇದು ಶೇಕಡಾ 8 ರಷ್ಟು ಕಡಿಮೆಯಾಗಿದೆ. ಒಟ್ಟು ಆಫೀಸ್ ಸ್ಪೇಸ್ ಲೀಸಿಂಗ್ 3 ಮಿಲಿಯನ್ ಚದರ ಅಡಿಗಳಿಂದ 3.2 ಮಿಲಿಯನ್ ಚದರ ಅಡಿಗಳಿಗೆ ( 9 ಶೇಕಡಾ ) ಏರಿಕೆಯಾಗಿದೆ.
ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ದೆಹಲಿ-ಎನ್‌ಸಿಆರ್‌ನಲ್ಲಿ ವಸತಿ ಮಾರಾಟ ಮತ್ತು ಆಫೀಸ್ ಸ್ಪೇಸ್ ಲೀಸಿಂಗ್ ಎರಡೂ ಹೆಚ್ಚಾಗಿದ್ದು, ಕ್ರಮವಾಗಿ ಶೇಕಡಾ 3 ಮತ್ತು 24 ರಷ್ಟು ಏರಿಕೆ ಕಂಡಿದೆ. ತುಲನಾತ್ಮಕವಾಗಿ ನೋಡುವುದಾದರೆ ಪುಣೆ ನಗರವು ಎರಡೂ ವ್ಯವಹಾರಗಳಲ್ಲಿ ಕುಸಿತವನ್ನು ಕಂಡಿದೆ. ವಸತಿ ಮಾರಾಟವು ಶೇಕಡಾ 1 ರಷ್ಟು ಕಡಿಮೆಯಾಗಿದೆ. ಆದರೆ ಕಚೇರಿ ಸ್ಥಳದ ಲೀಸಿಂಗ್ ಶೇಕಡಾ 30 ರಷ್ಟು ಕುಸಿದಿದೆ.

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಕಚೇರಿ ಸ್ಥಳದ ಲೀಸಿಂಗ್ 2.2 ಮಿಲಿಯನ್ ಚದರ ಅಡಿಯಿಂದ 4.5 ಮಿಲಿಯನ್ ಚದರ ಅಡಿಗಳಿಗೆ ಅಂದರೆ ಎರಡು ಪಟ್ಟು ಹೆಚ್ಚಿಗಿದೆ. ಆದರೆ ವಸತಿ ಮಾರಾಟವು 6,951 ಯುನಿಟ್‌ಗಳಿಂದ 7,150 ಯೂನಿಟ್‌ಗಳಿಗೆ ( 3 ಶೇಕಡಾ ) ಹೆಚ್ಚಾಗಿದೆ.
ಹೈದರಾಬಾದ್‌ನ ವಸತಿ ಮಾರಾಟವು ಶೇಕಡಾ 5 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಚೇರಿ ಸ್ಥಳದ ಲೀಸಿಂಗ್ ಶೇಕಡಾ 8 ರಷ್ಟು ಕುಸಿತ ಕಂಡಿದೆ. ಏತನ್ಮಧ್ಯೆ, ಕೋಲ್ಕತ್ತಾದಲ್ಲಿ ಮಾರಾಟವು ಶೇಕಡಾ 3 ರಷ್ಟು ಏರಿಕೆ ಕಂಡಿದೆ. ಆದರೆ ಕಚೇರಿ ಬೇಡಿಕೆಯು ಶೇಕಡಾ 3 ರಷ್ಟು ಕಡಿಮೆಯಾಗಿದೆ.
ಅಹಮದಾಬಾದ್‌ನ ಆಫೀಸ್ ಸ್ಪೇಸ್ ಲೀಸಿಂಗ್ ಶೇಕಡಾ 59 ರಷ್ಟು ಕುಸಿದಿದೆ. ವಸತಿ ಮಾರಾಟವು ಶೇಕಡಾ 3 ರಷ್ಟು ಕಡಿಮೆಯಾಗಿದೆ.
'ಗೃಹ ಸಾಲಗಳ ಮೇಲಿನ ಬಡ್ಡಿದರಗಳ ಹೊರತಾಗಿಯೂ ಈ ವರ್ಷದ ಮೊದಲಾರ್ಧದಲ್ಲಿ ಪ್ರಮುಖ ನಗರಗಳಾದ್ಯಂತ ವಸತಿ ಮತ್ತು ಕಚೇರಿ ಮಾರುಕಟ್ಟೆಗಳು ಸ್ಥಿರವಾಗಿವೆ. ಆರು ತಿಂಗಳ ಅವಧಿಯಲ್ಲಿ ಮಾರಾಟವು ಸ್ಥಿರವಾಗಿ 1.5 ಲಕ್ಷ ಯುನಿಟ್‌ಗಳಿಗಿಂತ ಹೆಚ್ಚಿದೆ. ಒಟ್ಟಾರೆ ವಸತಿ ಮಾರಾಟದಲ್ಲಿ ಐಷಾರಾಮಿ ಮನೆಗಳ ಮಾರಾಟದ ಪಾಲು ಏರಿಕೆಯಾಗಿದೆ. ಆದರೆ ಮಾರಾಟದಲ್ಲಿ ಕೈಗೆಟುಕುವ ವಸತಿಗಳ ಪಾಲು ಕಡಿಮೆಯಾಗಿದೆ' ಎಂದು ನೈಟ್ ಫ್ರಾಂಕ್ ಇಂಡಿಯಾದ ಸಿಎಂಡಿ ಶಿಶಿರ್ ಬೈಜಾಲ್ ಹೇಳಿದ್ದಾರೆ.












Click it and Unblock the Notifications