ಬೆಂಗಳೂರಿಗರ ಸರಾಸರಿ ಸಂಬಳ ಎಷ್ಟು ಗೊತ್ತಾ? ದೇಶದಲ್ಲೇ ಹೆಚ್ಚು ಎಂದ ವರದಿ!
ಉದ್ಯಾನನಗರಿ ಬೆಂಗಳೂರು ಈಗಗಾಲೇ ಜಾಗತಿಕವಾಗಿ ಗುರುತಿಸಿಕೊಂಡಿದೆ. ಹಲವು ವಿಷಯಗಳಲ್ಲಿ ನಮ್ಮೂರು ಒಂದು ಹೆಜ್ಜೆ ದೇಶದಲ್ಲೇ ಮುಂದಿದೆ. ಈಗ ಮತ್ತೊಂದು ವಿಚಾರದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್ 1 ಸ್ಥಾನಕ್ಕೇರಿದೆ.
ಟೀಮ್ ಲೀಸ್ ಸರ್ವೀಸಸ್‌ನ ಉದ್ಯೋಗ ಮತ್ತು ವೇತನ ವರದಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ ಸಿಕ್ಕಿದೆ. ಇನ್ನು ಇಲ್ಲಿನ ಸರಾಸರಿ ವೇತನ ಹೆಚ್ಚಳ ಪ್ರಮಾಣ ಶೇ 9.3ರಷ್ಟು ಎಂದು ಬಹಿರಂಗವಾಗಿದೆ. ಅಲ್ಲದೆ ಸರಾಸರಿ ಏಕೀಕೃತ ಮಾಸಿಕ ಸಂಬಳ 29,500 ರೂಪಾಯಿ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯವನ್ನು ಬಂಡವಾಳ ಹೂಡಿಕೆಯ ಪ್ರಶಸ್ತ ತಾಣವಾಗಿಸಿದ ನಮ್ಮ ಸರ್ಕಾರದ ಪ್ರಯತ್ನಗಳು ಹಾಗೂ ಯುವ ಜನರಿಗೆ ಕೈಗಾರಿಕೆಗಳು ಮತ್ತು ಉದ್ದಿಮೆಗಳಲ್ಲಿ ಬೇಡಿಕೆಯಿರುವ ಕೌಶಲ್ಯಾಧಾರಿತ ತರಬೇತಿ ನೀಡುತ್ತಿರುವುದರ ಪರಿಣಾಮ ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್ 01 ಸ್ಥಾನಕ್ಕೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಟೀಮ್ ಲೀಸ್ ಸರ್ವೀಸಸ್‌ನ ಉದ್ಯೋಗ ಮತ್ತು ವೇತನ ವರದಿಯಲ್ಲಿ ಬೆಂಗಳೂರಿನ ಸರಾಸರಿ ವೇತನ ಹೆಚ್ಚಳ 9.3% ಹಾಗೂ ಸರಾಸರಿ ಏಕೀಕೃತ ಮಾಸಿಕ ಸಂಬಳ ರೂ.29,500 ಇದ್ದು, ಇದು ಇತರೆ ಎಲ್ಲ ನಗರಗಳಿಗಿಂತ ಗರಿಷ್ಠ ಮಟ್ಟದಲ್ಲಿದೆ ಎಂದು ವಿವರಿಸಿದ್ದಾರೆ. ಇದನ್ನು ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತದ ಇನ್ನೊಂದು ಮೈಲುಗಲ್ಲು ಎಂದು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ.
ವಿದ್ಯಾರ್ಥಿಗಳಿಗೆ ಸಿಎಂ ಮಹತ್ವದ ಸಲಹೆ: ಪ್ರತಿ ವರ್ಷ ಇಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳಲ್ಲಿ ಕೇವಲ ಶೇ.15 ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿದೆ. ಕೈಗಾರಿಕೆಗಳಲ್ಲಿ ಹಾಗೂ ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಬೇಡಿಕೆಯಿರುವ ವಿಷಯಗಳಿಗೆ ಮಹತ್ವ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಕೌಶಲ್ಯಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯಾಭಿವೃದ್ಧಿಯ ತರಬೇತಿ ನೀಡಿದರೆ, ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಎಂದಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟಗಳ ಆದರ್ಶಗಳನ್ನು ಪಾಲಿಸಬೇಕಾದುದ್ದು ವಿದ್ಯಾರ್ಥಿಗಳ ಕರ್ತವ್ಯವಾಗಿದ್ದು, ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದು ಹೇಳಿದ್ದಾರೆ.
ಜಾತಿವ್ಯವಸ್ಥೆಯಿಂದ ಸಮಾಜದಲ್ಲಿ ವೈರುಧ್ಯತೆ, ಅಸಮಾನತೆಯಿದೆ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಬುದ್ಧ, ಬಸವಾದಿ ಶರಣರು, ಮಹಾತ್ಮ ಗಾಂಧೀಜಿಯವರ ಸಮಸಮಾಜದ ಕನಸು ಈಡೇರಬೇಕು. ಅಸಮಾನತೆಯ ನಿರ್ಮೂಲನೆಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ವೈಚಾರಿಕ ಶಿಕ್ಷಣದಿಂದ ಅಸಮಾನತೆ ಹೋಗಲಾಡಿಸಲು ಸಾಧ್ಯ. ವಿದ್ಯಾವಂತರು ಮಾನವೀಯ ಗುಣವನ್ನು ರೂಢಿಸಿಕೊಂಡು ಮನುಷ್ಯ ಮನುಷ್ಯನನ್ನೇ ದ್ವೇಷಿಸಬಾರದು. ಇದಕ್ಕೆ ಪ್ರಚೋದನೆ ನೀಡುವಂತಹವರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಅಂತಹವರಿಂದ ನಮ್ಮ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications