Bengaluru: ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಮುಂದಾದ ಜಿಬಿಎ
ಬೆಂಗಳೂರು: ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕೃಷ್ಣರಾಜಪುರ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ರೂಪಿಸುವುದರ ಜೊತೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೃಷ್ಣರಾಜಪುರ ಮಾರುಕಟ್ಟೆಗೆ ಏಪ್ರಿಲ್ 1ರ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ, ಸಿ.ಸಿ ಕ್ಯಾಮೆರಾಗಳ ಅಳವಡಿಕೆ, ಒಳಭಾಗದ ರಸ್ತೆಗೆ ಕಾಂಕ್ರೀಟ್ ಹಾಕುವುದು, ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ ಕಲ್ಪಿಸುವುದು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿಗಳ ಪೂರ್ಣಗೊಳಿಸುವ ವೇಳಾಪಟ್ಟಿಯೊಂದಿಗೆ ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಕೆ.ಆರ್. ಮಾರುಕಟ್ಟೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವ ಕುರಿತು ಪರಿಶೀಲನೆ ನಡೆಸಿ ತಕ್ಷಣ ವರದಿ ಸಲ್ಲಿಸಬೇಕು. ನಂತರ ತ್ವರಿತಗತಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮಾರುಕಟ್ಟೆಯ ಒಳಭಾಗದಲ್ಲಿರುವ ರಸ್ತೆಯ ಮೇಲ್ಮೈ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡಿ ಒಂದು ಪದರದ ಕಾಂಕ್ರೀಟ್ ಹಾಕಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಕೆ.ಆರ್ ಮಾರುಕಟ್ಟೆ ಜಂಕ್ಷನ್‌ನಲ್ಲಿ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದ್ದು, ಮಾರುಕಟ್ಟೆಯ ಸರ್ವಿಸ್ ರಸ್ತೆಯನ್ನು ಕಾಂಕ್ರೀಟ್‌ನಿಂದ ಅಭಿವೃದ್ಧಿಪಡಿಸಲಾಗಿದೆ. ಈ ಸಂಬಂಧ ಮೇಲ್ಸೇತುವೆಯ ಡೌನ್ ರ್ಯಾಂಪ್ ನಿಂದ ಶೀಘ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.
ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ
ಇನ್ನು ಇಲ್ಲಿನ ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಹೂವು ಖರೀದಿಸಲು ಸಮಸ್ಯೆಗಳು ಉಂಟಾಗುತ್ತಿವೆ ಎಂದು ಮಾರುಕಟ್ಟೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಈ ವಿಷಯಕ್ಕೆ ಪ್ರತಿಕ್ರಿಯೇ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸ್ಥಳ ಪರಿಶೀಲನೆ ನಡೆಸಿ, ಸಮರ್ಪಕ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಮೆಟ್ಟಿಲುಗಳ ಬಳಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸಮಗ್ರ ಯೋಜನೆ ರೂಪಿಸಲಾಗಿದೆ. ತರಕಾರಿ, ಹಣ್ಣು ಮತ್ತು ಹೂವಿನ ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಟ್ರಾಲಿ ಹಾಗೂ ಕ್ರೇಟ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ತ್ಯಾಜ್ಯ ಸಂಗ್ರಹಣೆಗೆ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಎಲ್ಲಿಯೂ ತ್ಯಾಜ್ಯ ಚದರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆ.ಆರ್. ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಿರುವ ಹಿನ್ನೆಲೆ, ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರೈಟ್ ಪಾರ್ಕಿಂಗ್ ಸಂಸ್ಥೆಯ ಮೂಲಕ ತಳಮಹಡಿಯಲ್ಲಿ 400 ದ್ವಿಚಕ್ರ ವಾಹನಗಳು ಹಾಗೂ 200 ಕಾರುಗಳ ನಿಲುಗಡೆ ವ್ಯವಸ್ಥೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಪಾರ್ಕಿಂಗ್ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ತೆರೆಯಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಪಾರ್ಕಿಂಗ್ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 67 ಎ.ಐ ಆಧಾರಿತ ಕ್ಯಾಮೆರಾಗಳು, 12 ಅಲಾರಂ ವ್ಯವಸ್ಥೆಗಳು, ವಾಹನಗಳ ನಿಲುಗಡೆಗೆ ಮಾರ್ಕಿಂಗ್ ವ್ಯವಸ್ಥೆ ಹಾಗೂ ಎಂಟ್ರಿ-ಎಕ್ಸಿಟ್ ಪಾಯಿಂಟ್‌ಗಳ ಗೋಡೆಗಳಲ್ಲಿ ಚಿತ್ರಕಲೆಗಳನ್ನು ಅಳವಡಿಸಲಾಗಿದೆ.
ಜಿಬಿಎ ಅಧಿಕಾರಿಗಳಿಗೆ ಮಹೇಶ್ವರ್ ನೀಡಿದ ಸೂಚನೆ ಏನು
1. ಕೆ.ಆರ್. ಮಾರುಕಟ್ಟೆ ಮುಂಭಾಗದ ಫೆನ್ಸಿಂಗ್ ಹದಗೆಟ್ಟಿರುವುದರಿಂದ ಅದನ್ನು ತೆರವುಗೊಳಿಸಲು ಸೂಚನೆ
2. ಸಂಚಾರ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿನ್ಯಾಸ ರೂಪಿಸಲು ಸೂಚನೆ
3. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಸುಧಾರಣೆ
4. ಪಾರ್ಕಿಂಗ್‌ಗೆ ಸಂಪರ್ಕ ಕಲ್ಪಿಸಲು ಮೀಡಿಯನ್ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳಿಸಲು ಸೂಚನೆ
ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಹೆಚ್ಚುವರಿ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಲವರು ಇದ್ದರು.












Click it and Unblock the Notifications