ಬೆಂಗಳೂರು: ದೇವರಿಗೆ ಮಾಂಸದ ಮಾಲೆ: ಸಲಹೆ ಕೊಟ್ಟ 'ದೇವಮಾನವ' ನಾಪತ್ತೆ, ಇಬ್ಬರ ಬಂಧನ!
ಬೆಂಗಳೂರಿನ ವಿವಿದೆಡೆ ದೇವಸ್ಥಾನದಲ್ಲಿ ಮಾಂಸದ ಮಾಲೆ ಅರ್ಪಿಸಲು ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ. ಶನ ದೇವಸ್ಥಾನದಲ್ಲಿ ಮಾಂಸ ಮಾಲೆಯನ್ನು ಅರ್ಪಿಸಲು ಕಾರಣವನ್ನು ಬಂಧಿತರು ಹೇಳಿದ್ದಾರೆ.
ಬೆಂಗಳೂರು ಮಾರ್ಚ್ 14: ದೇವರಿಗೆ ಮಾಂಸದ ಮಾಲೆ ಅರ್ಪಿಸಲು ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮಧುರೆಯ ಶನಿ ಮಹಾತ್ಮಾ ದೇವಸ್ಥಾನದಲ್ಲಿ ಶನೇಶ್ವರ ದೇವರಿಗೆ ಗುಲಾಬಿಯ ಕೆಳಗೆ ಹೊಂದಿಸಿದ ಮಾಂಸದ ಮಾಲೆಯನ್ನು ಅರ್ಪಿಸಲು ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆ ಕಳೆದ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೇವರಿಗೆ ಮಾಂಸದ ಮಾಲೆ ಅರ್ಪಿಸಲು ಯತ್ನಿಸಿದ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಕಂಬಳಹಳ್ಳಿ ನಿವಾಸಿ ಮುನಿರಾಜು (24) ಮತ್ತು ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿ ಆಟೋರಿಕ್ಷಾ ಚಾಲಕ ಸೋಮಶೇಖರ್ (45) ಎಂದು ಗುರುತಿಸಲಾಗಿದೆ.

ಇವರು ಶನಿವಾರ ಸಂಜೆ 4 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿದ್ದರು. ಇವರ ಕೈಯಲ್ಲಿದ್ದ ಮಾಲೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಪಾರ್ಕಿಂಗ್ ಸ್ಥಳದಲ್ಲಿ ತಡೆದಿದ್ದರು. ಭದ್ರತಾ ಸಿಬ್ಬಂದಿ ಮಾಲೆಯನ್ನು ಪರಿಶೀಲಿಸಿದಾಗ ಅದರಲ್ಲಿ ಮಾಂಸ ಇರುವುದು ಕಂಡುಬಂದಿದೆ. ಮಾಲೆಯನ್ನು ಕಿತ್ತೆಸೆದು ಬಳಿಕ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಇಬ್ಬರ ಬಂಧನದ ಬಳಿಕ ಇವರು ಜನವರಿಯಲ್ಲಿ ಇದೇ ರೀತಿಯ ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ. ಕಾವಲುಗಾರರು ಅವರಿಗಾಗಿ ಹುಡುಕುತ್ತಿದ್ದರು ಎನ್ನಲಾಗಿದೆ. ಆಗಲೂ ಮಾಲೆಯ ಬಗ್ಗೆ ಕೇಳಿದಾಗ, ದೇವರಿಗೆ ಅರ್ಪಿಸಲು ಬಂದಿರುವುದಾಗಿ ಹೇಳಿದ್ದರು. ಇವರು ತಂದಿದ್ದ ಮಾಲೆಯ ಗುಲಾಬಿಗಳ ಕೆಳಗೆ ಮಾಂಸವಿರುವುದನ್ನು ಕಾವಲುಗಾರರು ಗಮನಿಸಿದ್ದಾರೆ.

ಈ ಬಗ್ಗೆ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಕೆ.ವಿ ಮಾತನಾಡಿ, "(ಇಬ್ಬರೂ) ತಾವು ನಷ್ಟ ಅನುಭವಿಸಿದ ವ್ಯಾಪಾರಿಯ ಪರವಾಗಿ ಬಂದಿದ್ದೇವೆ ಮತ್ತು ಶನೇಶ್ವರ ದೇವರಿಗೆ ಹಾರವನ್ನು ಅರ್ಪಿಸಲು ಬಯಸಿದ್ದೇವೆ" ಎಂದು ಭದ್ರತಾ ಸಿಬ್ಬಂದಿಗೆ ಹೇಳಿಕೊಂಡಿದ್ದರು ಎಂದು ಪ್ರಕಾಶ್ ಅವರು ಹೇಳಿದ್ದಾರೆ.
ಸದ್ಯ ಅವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಎಲ್ಲರಿಂದ ಮಾಹಿತಿ ಪಡೆದ ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ವಿಚಾರಣೆ ಮಾಡಿದರು. ವಿಚಾರಣೆ ಬಳಿಕ ಈ ಕಥೆಯ ಅಸಲಿಯತ್ತು ಬಯಲಾಗಿದೆ. ವಾಸ್ತವವಾಗಿ, ಶನೇಶ್ವರ ದೇವರ ಕಾಟದಿಂದ ಅಥವಾ ಶಾಪವನ್ನು ತಪ್ಪಿಸಲು ಮಾಂಸದ ಮಾಲೆಯನ್ನು ಅರ್ಪಿಸಲು ಹೊಸಕೋಟೆ ತಾಲೂಕಿನ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಘೋಷಿತ ದೇವಮಾನವ ಮುನಿರಾಜುಗೆ ಸಲಹೆ ನೀಡಿದ್ದರು.

ಹೀಗಾಗಿ ಈತನ ಬಳಿ ಹೋದವರೆಲ್ಲಾ ತಮ್ಮ ಸ್ಥಳಗಳಲ್ಲಿರುವ ಶನೇಶ್ವರ ದೇವಸ್ಥಾನದಲ್ಲಿ ಮಾಂಸದ ಮಾಲೆಯನ್ನು ಅರ್ಪಿಸಲು ಮುಂದಾಗಿದ್ದಾರೆ. ಬಂಧಿತರ ಮಾಹಿತಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ದೇವಮಾನವ ಇನ್ನೂ ಸಿಕ್ಕಿಲ್ಲ. ಆತ ಈಗ ತಲೆಮರೆಸಿಕೊಂಡಿದ್ದಾನೆ.
ಈ ವರ್ಷದ ಆರಂಭದಲ್ಲಿ ಮುನಿರಾಜು ಮತ್ತು ಸೋಮಶೇಖರ್ ಇದೇ ರೀತಿಯ ಮಾಲೆಯೊಂದಿಗೆ ದೇವಸ್ಥಾನಕ್ಕೆ ಹೋಗಿದ್ದರು. ಪೂಜಾರಿ ಊಟಕ್ಕೆ ಹೋಗಿದ್ದರಿಂದ ದೇವಸ್ಥಾನ ತೆರೆದಿರಲಿಲ್ಲ. ಹೀಗಾಗಿ ಅವರು ಮಾಲೆಯನ್ನು ಸ್ಥಳದಲ್ಲೇ ಬಿಟ್ಟು ತೆರಳಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದರು. ತೀವ್ರ ಹುಡುಕಾಟದ ಬಳಿಕ ಇಬ್ಬರು ಸಿಕ್ಕಿಬಿದ್ದಿದ್ದಾರೆ.












Click it and Unblock the Notifications