Bengaluru Garbage Crisis: ಕಸ ತೆಗೆಯದಿದ್ದಾಗ ಸಹಿಸಿಕೊಳ್ಳೋಕೆ ರೆಡಿ, ತೆರಿಗೆ ಕಟ್ಟದಿದ್ದರೆ ಸುಮ್ನಿರ್ತಾರಾ: ರಾಜೀವ ಹೆಗಡೆ ಬರಹ

Bengaluru Waste: ಈ ದೇಶದಲ್ಲಿ ಯಾವುದೇ ಹೊಸ ವ್ಯವಸ್ಥೆಯನ್ನು ಜನ ಕಲ್ಯಾಣಕ್ಕಾಗಿ ಮಾಡುತ್ತಿದ್ದಾರೆ ಎಂದುಕೊಂಡರೆ ಅದಕ್ಕಿಂತ ದೊಡ್ಡ ಭ್ರಮೆ ಇನ್ನೊಂದಿಲ್ಲ. ಬಿಬಿಎಂಪಿಯನ್ನು ಒಡೆದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಕಸ ವಿಲೇವಾರಿಗೆ ಇನ್ನೊಂದು ಪ್ರಾಧಿಕಾರ ಮಾಡುವಾಗ ರಾಜ್ಯ ಸರ್ಕಾರದ ಸಚಿವರು ವಿಧಾನಸಭೆಯಲ್ಲಿ ಪುಂಖಾನುಪುಂಖವಾಗಿ ರೋಚಕ ಕಥೆಗಳನ್ನು ಹೇಳಿ ಜನರ ಕಣ್ಣಿಗೆ ಮಣ್ಣೆರಚಿರುವುದು ಈಗ ಪ್ರತಿದಿನ ಸಾಬೀತಾಗುತ್ತಿದೆ. ಬೆಂಗಳೂರು ನಗರದಲ್ಲಿ ಕಸ ವಿಂಗಡಣೆ ಹಾಗೂ ವಿಲೇವಾರಿ ಎನ್ನುವುದು ಪರಿಹಾರವಿಲ್ಲದ ವಿಷಯವಾಗಿ ಮಾರ್ಪಡುತ್ತಿದೆ. ಇದುವೇ ವ್ಯವಸ್ಥೆ ಎನ್ನುವ ರೀತಿಯಲ್ಲಿ ಸರ್ಕಾರ ಹಾಗೂ ಅಧಿಕಾರ ವರ್ಗ ಕೂಡ ವರ್ತಿಸುತ್ತಿದೆ.

ಇದು ಬೆಂಗಳೂರು ನಗರದ ಹಲವಾರು ಪ್ರದೇಶಗಳ ಸಮಸ್ಯೆ ಆಗಿರಬಹುದು. ನಮ್ಮ ಬಡಾವಣೆಯ ಉದಾಹರಣೆಯನ್ನೇ ಇರಿಸಿಕೊಂಡು ನಗರದ ಅವ್ಯವಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣದಿಂದ ಕಸ ವಿಲೇವಾರಿಗೆ ವಾರಾಂತ್ಯದವರೆಗೆ ಕಾಯುವುದು ಅನಿವಾರ್ಯ. ಆದರೆ ಹಸಿ ಕಸವನ್ನು ಒಂದು ವಾರದವರೆಗೆ ಕಾಯುವುದು ಅಸಾಧ್ಯವಾಗಿರುವುದರಿಂದ, ವಾರದಲ್ಲಿ ಎರಡು ಬಾರಿ ವಿಲೇವಾರಿ ಮಾಡಬೇಕಾಗುತ್ತದೆ. ಕಳೆದ ಎರಡು ತಿಂಗಳಿಂದ ಒಣಕಸ ವಿಲೇವಾರಿಯು ಮನಸ್ಸಿಗೆ ಬಂದಂತೆ ನಡೆಯುತ್ತಿದೆ. ನಿರ್ದಿಷ್ಟ ದಿನ, ಸಮಯ ಯಾವುದೂ ಇಲ್ಲ. ಅವರಿಗೆ ಬೇಕಾದಂತೆ ಮಾಡುತ್ತಿದ್ದಾರೆ.

Bengaluru Garbage Crisis

ಮೊನ್ನೆ ಶನಿವಾರದಂದು ನಾನು ಹೊರಗಡೆ ಹೋಗಬೇಕಿದ್ದರೂ, ಬರಬಹುದು ಎನ್ನುವ ಹಂಬಲದಲ್ಲಿ 9 ಗಂಟೆವರೆಗೆ ಕಾದೆ. ಆದರೆ ಹಸಿ ಕಸದವರು ಬಂದು ಹೋದರಷ್ಟೆ. ಒಣ ಕಸದವರು ಬರಲೇ ಇಲ್ಲ. ದೂರು ಸಲ್ಲಿಸಿದಾಗ, ಹಸಿ ಕಸದವರೇ ಸ್ವಲ್ಪ ಹೊತ್ತಿನ ಬಳಿಕ ಒಣ ಕಸವನ್ನೂ ತೆಗೆದುಕೊಂಡು ಹೋಗಲು ಬರುತ್ತಾರೆ ಎನ್ನುವ ಸಮಜಾಯಿಷಿ ಬಂತು. ಶನಿವಾರವೂ ತಲೆ ಹಾಕಲಿಲ್ಲ, ನಿನ್ನೆ ಭಾನುವಾರದಂದು ಒಣ ಕಸದವರ ಜೊತೆಗೆ ಹಸಿ ಕಸದವರು ಕೂಡ ಚಕ್ಕರ್ ಹಾಕಿದರು. ನಮ್ಮ ಪಕ್ಕದ ರಸ್ತೆಗೆ ಬಂದು, ಅಲ್ಲಿಯೇ ಕಸ ತುಂಬಿದ ಕಾರಣದಿಂದ ನಮ್ಮ ರಸ್ತೆಗೆ ಬರದೇ ಹೋದರು.

ಇಂದಾದರೂ ಕಸವನ್ನು ಕೊಡೋಣವೆಂದು ಕಚೇರಿಗೆ ಹೋಗುವ ಸಮಯವನ್ನು ಮುಂದೂಡಿಕೊಂಡು ಕುಳಿತೆ. ಪ್ರತಿ ದಿನ 6.15ಕ್ಕೆ ನಾನು ಮನೆ ಬಿಡುತ್ತೇನೆ. ಕಸದ ವಾಹನವು ಸಾಮಾನ್ಯವಾಗಿ 7.30ರಿಂದ 8 ಗಂಟೆಗೆ ಬರಬೇಕು. ಹಸಿ ಕಸವನ್ನಾದರೂ ಕೊಟ್ಟು ಹೋಗೋಣವೆಂದು ಕಾದರೆ 10 ಗಂಟೆಯಾದರೂ ಕಸ ಸಂಗ್ರಹಣೆ ವಾಹನವು ನಮ್ಮ ಮನೆಯವರೆಗೆ ಬಂದಿಲ್ಲ. ಬೆಳಗ್ಗೆ ಸರಿಯಾದ ಸಮಯಕ್ಕೆ ಬರದಿರುವುದಕ್ಕೆ ಕರೆ ಮಾಡಿ ಅಧಿಕಾರಿಗಳಿಗೆ ಬೈದಾಗ, ವಾಹನವನ್ನು ಕಳುಹಿಸಿಕೊಡುತ್ತಿದ್ದಾರೆ. ಹೀಗಾಗಿ ಇಂದು ಸೀಟಿಯ ಸದ್ದಾದರೂ ಕೇಳುತ್ತಿದೆ. ವಾರದಲ್ಲಿ ಎರಡು ದಿನ ಇದೇ ರೀತಿ ಕಸ ಕೊಡುವ ಸಲುವಾಗಿ ಸುಡು ಬಿಸಿಲಿನಲ್ಲಿ ಕಚೇರಿಗೆ ಹೋಗಬೇಕಿದೆ. ಅಂದ್ಹಾಗೆ ಮನೆಯ ಹೊರಗಡೆ ಕಸ ಇಟ್ಟು ಹೋದರೆ ಕಸ ತೆಗೆಯುವವರು ಬರುವುದು ಖಾತ್ರಿಯಿಲ್ಲದಿದ್ದರೂ ನಾಯಿಗಳು ಬಂದು ಕಿತ್ತಾಡುವುದು ಪಕ್ಕಾ.

ನಾನು ಬೈದ ಪರಿಣಾಮದಿಂದ ನಮ್ಮ ಮನೆಯಲ್ಲಿನ ಒಣ ಕಸವನ್ನು ಕೂಡ ಹಸಿ ಕಸದವರೇ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಬಡಾವಣೆಯಲ್ಲಿನ ಈ ಒಣ ಕಸ ವಿಲೇವಾರಿಯು ಕಳೆದ ನಾಲ್ಕೈದು ವರ್ಷಗಳಿಂದಲೂ ಸಮಸ್ಯೆಯಾಗಿಯೇ ಉಳಿದಿದೆ. ಈ ಬಗ್ಗೆ ಹಿಂದೊಮ್ಮೆ ಕೇಳಿದಾಗ ನಾಚಿಕೆ ಬಿಟ್ಟು ಬಾಂಗ್ಲಾದವರತ್ತ ಕೈ ತೋರಿಸಿದ್ದರು. ʼಬಾಂಗ್ಲಾ ವಲಸಿಗರು ಹೆದರಿಕೊಂಡು ಓಡಿ ಹೋಗಿದ್ದಾರೆ, ಹೀಗಾಗಿ ಸಮಸ್ಯೆ ಆಗುತ್ತಿದೆʼ ಎಂದಿದ್ದರು. ಕಳೆದ ಕೆಲ ವಾರಗಳ ವಿಳಂಬಕ್ಕೆ ಕಾರಣ ಕೇಳಿದಾಗ, ʼಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವುದರಿಂದ ಊರಿಗೆ ಹೋಗಿದ್ದಾರೆʼ ಎನ್ನುವ ಕಾರಣ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಪ್ರತಿ ಬಾರಿಯೂ ಒಂದೊಂದು ಕಾರಣವಿರುತ್ತದೆ. ಆದರೆ ಅಧಿಕಾರಿಗಳಿಗೆ ಹುಚ್ಚು ನಾಯಿಗೆ ಬೈದ ರೀತಿಯಲ್ಲಿ ಕ್ಲಾಸ್‌ ತೆಗೆದು ಕೊಂಡರೆ ವಾಹನ ಬರುತ್ತದೆ. ಅಲ್ಲಿಗೆ ಸಮಸ್ಯೆ ಇರುವುದು ಬೇರೆಲ್ಲೋ ಎನ್ನುವುದು ಸ್ಪಷ್ಟವಾಗುತ್ತದೆ.
ಕಳೆದ ನಾಲ್ಕೈದು ವರ್ಷಗಳಿಂದ ಅಧಿಕಾರ ವ್ಯವಸ್ಥೆಯು ಇಷ್ಟೊಂದು ಹದಗೆಟ್ಟಿದೆ. ಜನರ ಆಕ್ರೋಶಕ್ಕೂ ಹೆದರದ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಸಹಾಯವಾಣಿ ಹಾಗೂ ಎಲ್ಲ ವ್ಯವಸ್ಥೆಗಳು ದುಡ್ಡು ಮಾಡುವ ಮಾರ್ಗಗಳಾಗಿವೆಯೇ ಹೊರತು, ಜನರ ಸಮಸ್ಯೆಗೆ ಪರಿಹಾರ ಕೊಡುವ ಪ್ರಕ್ರಿಯೆಯಿಂದ ಹೊರಬಂದಾಗಿದೆ. ಪರಿಹಾರವಿದ್ದರೂ ಮಾಡುವ ಮನಸ್ಸಿಲ್ಲ.

ಬೆಂಗಳೂರಿನ ನಗರವಾಸಿಗಳ ದೈನಂದಿನ ಅಡುಗೆ ಬಳಕೆಗೆ ಸುಮಾರು 25-30 ಲಕ್ಷ ಕ್ಯೂಬಿಕ್‌ ಮೀಟರ್‌ ಬಯೋಗ್ಯಾಸ್‌ ಬೇಕಾಗುತ್ತದೆ. ಕಸ ವಿಂಗಡಣೆಯಿಂದ ನಗರದ ಶೇ.10 ರಷ್ಟು ಬೇಡಿಕೆಯನ್ನು ಪೂರೈಸಬಹುದಾಗಿದೆ. ಅಥವಾ ಪ್ರತಿದಿನ ಸುಮಾರು 30 ಸಾವಿರ ಸಿಎನ್‌ಜಿ ವಾಹನಗಳ ಬೇಡಿಕೆಯನ್ನು ಪೂರೈಸುವ ಶಕ್ತಿಯನ್ನು ಹೊಂದಿದೆ. ಇದಲ್ಲದೇ ಒಣ ಕಸದಿಂದ ಪ್ರತಿದಿನ ಸುಮಾರು 2 ಗಿಗಾ ವ್ಯಾಟ್‌ ವಿದ್ಯುತ್‌ ತಯಾರಿಸಬಹುದು. ಇದು ನಗರದ ಬೇಡಿಕೆಯಲ್ಲಿ ಶೇ.2 ರಿಂದ 3ರಷ್ಟನ್ನು ಪೂರೈಸಬಹುದು. ಇವೆರಡು ಯೋಜನೆಗೆ ರಾಜ್ಯ ಸರ್ಕಾರವು ಸುಮಾರು ₹11 ಸಾವಿರ ಕೋಟಿ ಹೂಡಿಕೆ ಮಾಡಬೇಕಾಗುತ್ತದೆ.

ಪಿಪಿಪಿ ಮಾಡೆಲ್‌ ಮೂಲಕ ಹೋದರೆ ಹೂಡಿಕೆಯ ವೆಚ್ಚವು ಶೇ.50ಕ್ಕೆ ಇಳಿಯಬಹುದು. ಇದರಿಂದ ಪ್ರಮುಖವಾಗಿ ಎರಡು ವಿಚಾರಗಳಿಗೆ ಶಾಶ್ವತ ಪರಹಾರ ಸಿಗುತ್ತದೆ. ಕಸ ಸಂಗ್ರಹಣೆ ಹಾಗೂ ಡಂಪ್‌ ಯಾರ್ಡ್‌ಗಳ ವಿಚಾರದಲ್ಲಿ ಸಮಸ್ಯೆಗಳು ಬಹುತೇಕ ಅಂತ್ಯವಾಗಲಿವೆ. ಕಸದಿಂದ ಹಣ ಬರುತ್ತದೆ ಹಾಗೂ ಅದಕ್ಕೆ ಉದ್ಯಮದ ಸ್ಪರ್ಶ ನೀಡಿದಾಗ, ಕಸ ಸಂಗ್ರಹಣೆಯು ನಿರಂತರ ಹಾಗೂ ಸ್ವಯಂ ಪ್ರೇರಿತವಾಗಿ ನಡೆಯುತ್ತದೆ. ಇನ್ನೊಂದೆಡೆ ಡಂಪ್‌ ಯಾರ್ಡ್‌ಗಳ ನಗರದ ಹೊರವಲಯದಲ್ಲಿರುವ ಜನರಿಗೆ ಕಷ್ಟ ಕೊಡುವ ಸಮಸ್ಯೆಯೂ ಇರದು.

ಆದರೆ ಇವೆರಡನ್ನೂ ಮಾಡಿದರೆ ಒಂದು ವರ್ಗಕ್ಕೆ ದೊಡ್ಡ ನಷ್ಟವಾಗಲಿದೆ. ಕಸ ಸಂಗ್ರಹಣ ಹಾಗೂ ವಿಲೇವಾರಿಯಲ್ಲಿ ಪ್ರತಿ ವರ್ಷ ನೂರಾರು ಕೋಟಿ ಲೂಟಿ ಮಾಡುವ ದೊಡ್ಡ ಮಾಫಿಯಾ ಬೆಂಗಳೂರಿನಲ್ಲಿದೆ. ಇದಕ್ಕೆ ಸಿಲಿಕಾನ್‌ ಸಿಟಿಯ ದೊಡ್ಡ ದೊಡ್ಡ ರಾಜಕಾರಣಿಗಳ ಆಶೀರ್ವಾದವಿದೆ. ಒಂದು ಆಟೋ, ಲಾರಿಯ ಹೆಸರಲ್ಲಿ ಹತ್ತಾರು ವಾಹನಗಳ ಬಿಲ್‌ ಮಾಡಲಾಗುತ್ತಿದೆ. ಒಂದೊಮ್ಮೆ ಕಸ ವಿಂಗಡಣೆಯು ಸುಲಲಿತವಾದರೆ ಇವರ ಲೂಟಿ ಕಾರ್ಯಕ್ರಮ ನಿಂತು ಹೋಗುತ್ತದೆ. ಹೀಗಾಗಿ ಜನರಿಗೆ ಕಷ್ಟ ಕೊಡುವುದರಲ್ಲೇ ಸುಖ ಕಾಣುವ ರಕ್ತ ಹೀರುವ ವಿಕೃತ ವಿಷಜಂತುಗಳು ನಮ್ಮನ್ನಾಳುತ್ತಿವೆ.

Bengaluru Waste: ದೂರವಾದ ತಂತ್ರಜ್ಞಾನ

ವಿಧಾನಸೌಧದಲ್ಲಿ ಕುಳಿತು ಭಾಷಣ ಮಾಡುವಾಗ ಸಿಲಿಕಾನ್‌ ಸಿಟಿ, ಸ್ಟಾರ್ಟಪ್‌ ರಾಜಧಾನಿ ಎಂದೆಲ್ಲ ಕಥೆ ಹೇಳುತ್ತಾರೆ. ಆಡಳಿತದ ವಿಚಾರದಲ್ಲಿ ಇದೆಲ್ಲವೂ ಮರೆತು ಹೋಗುತ್ತದೆ. ಇದೇ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ಜಿಪಿಎಸ್‌ನ ನೆರವು ಪಡೆಯಬಹುದು. ರೈಲ್ವೆಯಲ್ಲಿ ಇರುವ ರೀತಿಯಲ್ಲೇ ಕಸದ ವಾಹನ ಎಲ್ಲಿ ಬರುತ್ತಿದೆ ಎನ್ನುವ ರೂಟ್‌ ಮ್ಯಾಪ್‌ನ್ನು ಜನರಿಗೆ ಸಿಗುವ ರೀತಿಯಲ್ಲಿ ಮಾಡಬಹುದು. ಇದರಿಂದ ಜನರು ಸುಲಭವಾಗಿ ಅದನ್ನು ಟ್ರ್ಯಾಕ್‌ ಮಾಡಿಕೊಂಡು ಪ್ರತಿದಿನ ಕಸ ಕೊಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಬೆಳಗ್ಗೆ 6.15ಕ್ಕೆ ಕಚೇರಿಗೆ ಹೋಗಬೇಕಾದವರು ಹತ್ತು ಗಂಟೆಯಾದರೂ ಈ ರೀತಿ ಸರ್ಕಾರಕ್ಕೆ ಬೈದುಕೊಂಡು ಲೇಖನ ಬರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕೊನೆಯದಾಗಿ: ವಿಧಾನಸೌಧದಲ್ಲಿ ಕುಳಿತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಾಡಿದರೆ ಬೆಂಗಳೂರು ನಗರವು ಗ್ರೇಟ್‌ ಆಗುವುದಿಲ್ಲ. ಲೂಟಿಗೆ ನಿಯಂತ್ರಣ ಹಾಕಿಕೊಂಡು, ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಮಾಡುವುದನ್ನು ಬಿಟ್ಟು ಜನರ ಪರವಾಗಿ ಕೆಲಸ ಮಾಡಲು ಬಿಡಬೇಕು. ಲೂಟಿ ಮಾಡುವುದೇ ಕಾಯಕವಾದಾಗ ವಿಧಾನಸೌಧದಿಂದ ಹಿಡಿದು ಕಸ ಎತ್ತುವ ಜನರವರೆಗೂ ಎಲ್ಲರಲ್ಲೂ ದುರಹಂಕಾರ ತುಂಬಿ ತುಳುಕತ್ತಲೇ ಇರುತ್ತದೆ. ಹಾಗೆಯೇ ಕಸ ತೆಗೆಯದಿದ್ದಾಗ 'ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳೋದನ್ನು ಕಲಿಬೇಕು ಸಾರ್' ಎಂದು ರಾಗ ಎಳೆಯುವ ಆಡಳಿತ ವರ್ಗವು, ತೆರಿಗೆ ಕಟ್ಟಲು ವಿಳಂಬ ಮಾಡುವ ಜನಸಾಮಾನ್ಯರ ಬಗೆಗೂ ಇದೇ ಕನಿಕರ ತೋರಿಸುತ್ತದೆಯೇ ?

ಬರಹ: ರಾಜೀವ ಹೆಗಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+