ಬೆಂಗಳೂರಿನ ಫುಟ್‌ಪಾತ್ ಕಂಡು ಕೆನಡಾ ವ್ಲಾಗರ್ ಶಾಕ್; ‘ಬೇರೆ ದೇಶದಲ್ಲಿದ್ರೆ ಒಪ್ಪುತ್ತಿರಲಿಲ್ಲ’
ಬೆಂಗಳೂರು: ಭಾರತದ ಟೆಕ್ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ರಸ್ತೆ ಹಾಗೂ ಫುಟ್‌ಪಾತ್‌ಗಳ ದುಸ್ಥಿತಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ನಗರದ ಇಂದಿರಾನಗರ 12ನೇ ಮೇನ್‌ನಲ್ಲಿ ಹಾನಿಗೊಳಗಾದ ಫುಟ್‌ಪಾತ್, ಬಿದ್ದಿರುವ ಅವಶೇಷಗಳು, ಗುಂಡಿಗಳು ಹಾಗೂ ಕಸವನ್ನು ತೋರಿಸಿರುವ ಕೆನಡಾದ ವ್ಲಾಗರ್ ಕ್ಯಾಲೆಬ್ ಫ್ರೀಸೆನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ಇಂದಿರಾನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಫುಟ್‌ಪಾತ್‌ನ ಸ್ಥಿತಿಯನ್ನು ತೋರಿಸಿದ ಫ್ರೀಸೆನ್, ಈ ಫುಟ್‌ಪಾತ್ ಯಾವಾಗ ಬೇಕಾದರೂ ಮುರಿದು ಬೀಳುವಂತಿದೆ. ಬೇರೆ ಯಾವುದೇ ದೇಶದಲ್ಲಿದ್ದರೂ ಇಂತಹ ಫುಟ್‌ಪಾತ್ ಸ್ವೀಕಾರಾರ್ಹವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಭಾರತದ ಪ್ರಮುಖ ನಗರಗಳಲ್ಲೊಂದು ಹಾಗೂ ದೇಶದ ಪ್ರಮುಖ ಟೆಕ್ ಹಬ್‌ಗಳಲ್ಲಿ ಒಂದಾಗಿದೆ. ಹಲವು ಸ್ಟಾರ್ಟ್‌ಅಪ್‌ಗಳು ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಕಾರ್ಯನಿರ್ವಹಿಸುವ ಇಂದಿರಾನಗರದಂತಹ ಪ್ರಮುಖ ಪ್ರದೇಶದಲ್ಲೇ ಫುಟ್‌ಪಾತ್‌ಗಳ ಪರಿಸ್ಥಿತಿ ಹೀಗಿರುವುದು ಬೇಸರದ ಸಂಗತಿ. ಇದು ನಿಜಕ್ಕೂ ಶೋಚನೀಯ. ಬೆಂಗಳೂರಿನಂತಹ ಪ್ರಮುಖ ಟೆಕ್ ನಗರದಲ್ಲಿ ಇಂತಹ ಫುಟ್‌ಪಾತ್‌ಗಳನ್ನು ನೋಡುವುದು ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
'ಆಸ್ಟರಾಯ್ಡ್ ಬಡಿದಂತೆ ಕಾಣುತ್ತಿದೆ'
ವಿಡಿಯೋದಲ್ಲಿ ಒಡೆದುಹೋದ ಫುಟ್‌ಪಾತ್, ರಸ್ತೆಯ ಬದಿಯಲ್ಲಿ ಬಿದ್ದಿರುವ ಕಟ್ಟಡ ಕಾಮಗಾರಿಯ ಅವಶೇಷಗಳು ಹಾಗೂ ಕಸ ತುಂಬಿಕೊಂಡಿರುವ ದೊಡ್ಡ ಗುಂಡಿಯನ್ನೂ ಅವರು ತೋರಿಸಿದ್ದಾರೆ. ದೊಡ್ಡ ಗುಂಡಿಯನ್ನು ತೋರಿಸುತ್ತಾ, "ಆಸ್ಟರಾಯ್ಡ್ ಭೂಮಿಗೆ ಅಪ್ಪಳಿಸಿ ದೊಡ್ಡ ಕುಳಿ ನಿರ್ಮಾಣವಾದಂತೆ ಕಾಣುತ್ತಿದೆ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ನಗರದ ಕೆಲವು ಭಾಗಗಳಲ್ಲಿ ಫುಟ್‌ಪಾತ್‌ಗಳು ಉತ್ತಮ ಸ್ಥಿತಿಯಲ್ಲಿದ್ದರೂ, ಅಲ್ಲಲ್ಲಿ ಕಂಡುಬರುವ ಇಂತಹ ಹಾನಿಗೊಳಗಾದ ಪ್ರದೇಶಗಳು ಒಟ್ಟಾರೆ ಅನುಭವವನ್ನು ಹಾಳು ಮಾಡುತ್ತವೆ ಎಂದು ಫ್ರೀಸೆನ್ ಹೇಳಿದ್ದಾರೆ. ನಗರದೆಲ್ಲೆಡೆ ನಿರ್ಮಾಣದ ಅವಶೇಷಗಳು ಮತ್ತು ಕಸದ ಸಮಸ್ಯೆ ಕಂಡುಬರುತ್ತಿದೆ ಎಂದೂ ಅವರು ಹೇಳಿದ್ದಾರೆ.
ಭಾರತದ ಅಭಿವೃದ್ಧಿ, ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿ ಕುರಿತು ತಾವು ನಿರಂತರವಾಗಿ ವಿಡಿಯೋಗಳನ್ನು ಮಾಡುತ್ತಿರುವುದಾಗಿ ತಿಳಿಸಿದ ಅವರು, ಅದೇ ನಗರಗಳಲ್ಲಿನ ಮೂಲಸೌಕರ್ಯದ ಸ್ಥಿತಿ ಈ ರೀತಿಯಾಗಿರುವುದು ನಿರಾಶಾದಾಯಕ ಎಂದು ಹೇಳಿದ್ದಾರೆ.
ಭಾರತದ ನಗರಗಳು, ಅದರಲ್ಲೂ ಈ ವಿಡಿಯೋದಲ್ಲಿ ತೋರಿಸಿರುವ ಬೆಂಗಳೂರು, ದೇಶದ ಅಭಿವೃದ್ಧಿ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯನ್ನು ಪ್ರತಿಬಿಂಬಿಸುವಂತಿರಬೇಕು. ಆದರೆ ನಗರ ಮೂಲಸೌಕರ್ಯದ ಪರಿಸ್ಥಿತಿ ಅದಕ್ಕೆ ಹೊಂದಿಕೆಯಾಗುತ್ತಿಲ್ಲ ಎಂಬುದು ಅವರ ಅಭಿಪ್ರಾಯ.
ಇಂದಿರಾನಗರ ಹೀಗಿರಬಾರದು
ವಿಡಿಯೋವನ್ನು ಹಂಚಿಕೊಂಡಿರುವ ಫ್ರೀಸೆನ್, ಇಂದಿರಾನಗರ ಹೀಗಿರಬಾರದು. ಫುಟ್‌ಪಾತ್‌ಗಳು ಜನರು ಸುಲಭವಾಗಿ ನಡೆದುಕೊಂಡು ಹೋಗುವಂತಿರಬೇಕು, ಸುರಕ್ಷಿತವಾಗಿರಬೇಕು ಹಾಗೂ ಪಾದಚಾರಿಗಳಿಗೆ ಅನುಕೂಲಕರವಾಗಿರಬೇಕು. ನಗರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳಿಗೆ ಅವುಗಳು ಪ್ರತಿಬಿಂಬವಾಗಿರಬೇಕು. ಆದರೆ ಈಗ ಅವುಗಳ ಸ್ಥಿತಿ ಗೊಂದಲಮಯವಾಗಿದೆ ಎಂದು ಬರೆದಿದ್ದಾರೆ.
ಬೆಂಗಳೂರಿನ ಪಾದಚಾರಿ ಮೂಲಸೌಕರ್ಯವನ್ನು ದೊಡ್ಡ ಮಟ್ಟದಲ್ಲಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ನಗರದ ಇತಿಹಾಸದಲ್ಲೇ ಕಂಡಿರದ ರೀತಿಯಲ್ಲಿ ಸಮಗ್ರ ಫುಟ್‌ಪಾತ್ ಸುಧಾರಣಾ ಯೋಜನೆ ಕೈಗೊಳ್ಳುವ ಸಮಯ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Bengaluru Footpaths: ನೆಟ್ಟಿಗರಿಂದಲೂ ಪ್ರತಿಕ್ರಿಯೆ
ವಿಡಿಯೋಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಹಲವು ಪ್ರತಿಕ್ರಿಯೆಗಳು ಬಂದಿವೆ. "ಬೆಂಗಳೂರಿಗೆ ಇದಕ್ಕಿಂತ ಉತ್ತಮ ಫುಟ್‌ಪಾತ್‌ಗಳು ಬೇಕು", "ಭಾರತದ ಹಲವು ನಗರಗಳಲ್ಲೂ ಇದೇ ಸಮಸ್ಯೆ ಇದೆ", "ಉತ್ತಮ ಮೂಲಸೌಕರ್ಯ ಮೂಲಭೂತ ಅಗತ್ಯವಾಗಬೇಕು" ಹಾಗೂ "ಇಂದಿರಾನಗರವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬೇಕು" ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬೆಂಗಳೂರಿನ ರಸ್ತೆ ಮತ್ತು ಪಾದಚಾರಿ ಮೂಲಸೌಕರ್ಯದ ಬಗ್ಗೆ ಸ್ಥಳೀಯರು ಹಲವು ವರ್ಷಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆಯೇ, ವಿದೇಶಿ ವ್ಲಾಗರ್ ಹಂಚಿಕೊಂಡಿರುವ ಈ ವಿಡಿಯೋ ಮತ್ತೊಮ್ಮೆ ನಗರದ ಫುಟ್‌ಪಾತ್‌ಗಳ ನಿರ್ವಹಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.


Click it and Unblock the Notifications
