ಬೆಂಗಳೂರಲ್ಲಿ ಹೆಚ್ಚಾದ ಏಪ್ರಿಲ್ ಬಿಸಿಲಿನ ಕಾವು: 37°C ತಾಪಮಾನ ದಾಖಲು, 40 ಡಿಗ್ರಿ ತಲುಪುವ ನಿರೀಕ್ಷೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ತೀವ್ರ ಸೆಕೆ, ಅಧಿಕ ಬಿಸಿಲಿನ ಅನುಭವವಾಗುತ್ತಿದೆ. ಈ ಮಾತಿಗೆ ಪೂರಕವೆಂಬಂತೆ ನೆನ್ನೆ ಮಂಗಳವಾರ (ಏಪ್ರಿಲ್ 14) ಅಧಿಕ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಂತೆ ಬೆಂಗಳೂರಿನಲ್ಲೂ ಮುಂದಿನ 05 ದಿನ ದಾಖಲೆಯ ಉಷ್ಣಾಂಶ ಕಂಡು ಬರಲಿದ್ದು, ಐಎಂಡಿ 'ಹೀಟ್ ವೇವ್' ಅಲರ್ಟ್ ನೀಡಿದೆ. ಕಳೆದ 10 ವರ್ಷಗಳಲ್ಲಿ ಏಪ್ರಿಲ್ ತಿಂಗಳ ಅತ್ಯಧಿಕ ತಾಪಮಾನ ಮಾಹಿತಿಯೂ ಲೇಖನದಲ್ಲಿ ಕೊಡಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕ್ರಮೇಣ ಗರಿಷ್ಠ ಉಷ್ಣಾಂಶ 35, 36 ಮತ್ತು 37 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇಂದು ಬುಧವಾರ (ಏ.15) ಬೆಳಗ್ಗೆಯೇ ಬೆಂಗಳೂರು ನಗರದಲ್ಲಿ 36, ಬೆಂಗಳೂರು ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್‌ನಲ್ಲಿ 37 ಹಾಗೂ ಬೆಂಗಳೂರು ಎಚ್‌ಎಎಲ್‌ನಲ್ಲಿ 36.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಇಂದು ಮಧ್ಯಾಹ್ನ ಮತ್ತು ನಾಳೆ ಹೊತ್ತಿಗೆ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಲಕ್ಷಣಗಳು ನೋಡಿದರೆ ನಗರದ ಗರಿಷ್ಠ ತಾಪಮಾನ 38-40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ 37 ಡಿ.ಸೆ. ಕಂಡು ಬಂದಿದ್ದು, ಮುಂದಿನ ಐದು ದಿನ ಮತ್ತಷ್ಟು ಹೆಚ್ಚಾಗುವುದರ ಬಗ್ಗೆ ಐಎಂಡಿ ತಿಳಿಸಿದೆ.
ಬೆಂಗಳೂರಲ್ಲಿ ಹೆಚ್ಚಾಯ್ತು ಬಿಸಿಲಿನ ಕಾವು!
ನಗರದಲ್ಲಿ ಬೆಳಗ್ಗೆ ಸುಮಾರು 9 ಗಂಟೆಯಿಂದಲೇ ಉರಿಬಿಸಿಲಿನ ವಾತಾವರಣ ನಗರದಲ್ಲಿ ನಿರ್ಮಾಣವಾಗುತ್ತಿದೆ. ಮಧ್ಯಾಹ್ನ 12 ಗಂಟೆ ಹಾಗೂ 2-3 ಗಂಟೆ ಹೊತ್ತಿಗೆ ಗರಿಷ್ಠ ಬಿಸಿಲು ಕಂಡು ಬರಲಿದೆ. ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂಚಾರ, ಜನರ ಓಡಾಟ ಕಡಿಮೆ ಆಗುತ್ತಿದೆ. ಜನ ಎಳನೀರು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನ ಜನರು ಬಿಸಲಿನ ಕಾವು ತಟ್ಟುತ್ತಿದೆ. ರಾಯಚೂರು, ಕಲಬುರಗಿಯಂತೆ ತಾಪಮಾನ, ಕೊಂಚ ಕರಾವಳಿಯಂತಹ ಸೆಕೆಯು ಅನುಭವವಾಗುತ್ತಿದೆ.
ಮತ್ತೆ ಸಾರ್ವಕಾಲಿಕ ದಾಖಲೆ (39 ಡಿಸೆ) ಆಗುತ್ತಾ?
ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಹಿಂದಿನ ವರ್ಷಗಳ ಗರಿಷ್ಠ ತಾಪಮಾನ ದಾಖಲಾತಿ ನೋಡುವುದಾದರೆ 2016ರಲ್ಲಿ ಸಾರ್ವಕಾಲಿಕ ದಾಖಲೆಯ ಬಿಸಿಲು ಬಿದ್ದಿತ್ತು. ಆ ವರ್ಷ ಏಪ್ರಿಲ್ 25ರಂದು 39 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿತ್ತು. ಉಳಿದಂತೆ ಎಲ್ಲ ವರ್ಷಗಳಲ್ಲೂ (2012-2021ರವರೆಗೆ) ಏಪ್ರಿಲ್‌ನಲ್ಲಿ ಹೆಚ್ಚಾಗಿ 36 ಮತ್ತು 37 ಡಿಗ್ರಿ ಸೆಲ್ಸಿಯಸ್ ತಾಪಮಾನವೇ ಅಧಿಕವಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ನೆನ್ನೆ ಮಂಗಳವಾರ (2026 ಏಪ್ರಿಲ್ 14) 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾದರೆ ಮತ್ತೆ ಸಾರ್ವಕಾಲಿಕ ದಾಖಲೆ ಆಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಉಷ್ಣ ಅಲೆ ಎಚ್ಚರಿಕೆ
ಕರ್ನಾಟಕದಲ್ಲಿ ಕಲಬುರಗಿಯಲ್ಲಿ ನೆನ್ನೆ 44 ಮತ್ತು ಕೊಪ್ಪಳದಲ್ಲಿ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ವಿಜಯಪುರ, ಬಳ್ಳಾರಿ, ಬೆಳಗಾವಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಯಾದಗಿರಿ, ರಾಯಚೂರು ಸೇರಿದಂತೆ ನಾನಾ ಕಡೆಗಳಲ್ಲಿ ತಾಪಮಾನ ಕನಿಷ್ಠ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಮುಂದಿನ ಐದು ದಿನ ಹೀಗೆ ಇರಲಿದ್ದು, 12 ಜಿಲ್ಲೆಗಳಿಗೆ 'ಉಷ್ಣ ಅಲೆ' ಅಲರ್ಟ್ (ಯೆಲ್ಲೋ ಅಲರ್ಟ್) ನೀಡಲಾಗಿದೆ.












Click it and Unblock the Notifications