Toll Fee Hike: ಜುಲೈ 1ರಿಂದ ಬೆಂಗಳೂರಿನ ಈ ರಸ್ತೆ ಟೋಲ್‌ಗಳ ದರ ಭಾರೀ ಹೆಚ್ಚಳ
ಬೆಂಗಳೂರು, ಜೂನ್ 28: ಇದೇ ಜುಲೈ 01ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ ಶುಲ್ಕ ದರದಲ್ಲಿ ಬದಲಾವಣೆ ಆಗಲಿದೆ. ಬೆಂಗಳೂರಿನಿಂದ ನೆರೆ ರಾಜ್ಯ ತಮಿಳುನಾಡು ಸಂಪರ್ಕಿಸುವ ಪ್ರಮುಖ ರಸ್ತೆಯ ಟೋಲ್‌ಗಳ ಶುಲ್ಕ ಪರಿಷ್ಕರಿಸಲಾಗಿದೆ. ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ ದರ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಾದ್ರೆ ಎಲ್ಲಿಂದ ಎಲ್ಲಿಗೆ ಓಡಾಡುವ ಪ್ರಯಾಣಿಕರು ಟೋಲ್ ಶುಲ್ಕ ಕಟ್ಟಬೇಕು ಎಂಬ ವಿವರ ಇಲ್ಲಿದೆ.
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‌ವೇ ಶುಲ್ಕ ಹೆಚ್ಚಾಗಿದೆ. ಹೌದು ನಗರ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗವಾಗಿ ಕರ್ನಾಟಕದಿಂದ ತಮಿಳುನಾಡು ಗಡಿಗೆ ಅಂದರೆ ಅತ್ತಿಬೆಲೆ ಮಾರ್ಗವಾಗಿ ಹಾದು ಹೋಗುವ ಪ್ರಯಾಣಿಕರಿಗೆ ಇದು ಅನ್ವಯಿಸುತ್ತದೆ. ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿರುವ ಟೋಲ್ ಶುಲ್ಕ ಹಾಗೂ ಅತ್ತಿಬೆಲೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಪರಿಷ್ಕರಿಸಲಾಗಿದೆ. ಈ ಹೊಸ ದರ ಜುಲೈ 1ರಿಂದ ಜಾರಿಗೆ ಬರಲಾಗುತ್ತದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ ಎಂಬ ವಿವರ ಇಲ್ಲಿದೆ.

ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮಾರ್ಗವಾಗಿ ತಮಿಳುನಾಡಿಗೆ ತೆರಳುವ ವಾಹನಗಳಿಗೆ ಇದು ಅನ್ವಯಿಸಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ 44ರ ಈ ಭಾಗದ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುತ್ತಿದೆ. ಪ್ರಾಧಿಕಾರವು 8.765 ಕಿ.ಮೀ ನಿಂದ 18.750 ಕಿ.ಮೀ (ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಎಲೆಕ್ಟ್ರಾನಿಕ್ಸ್ ಸಿಟಿ) ವರೆಗಿನ ಎತ್ತರ ಹೆದ್ದಾರಿ ರಸ್ತೆಯ ಟೋಲ್ ಶುಲ್ಕ ಹೆಚ್ಚಿಸಿದೆ.
ಯಾವ ವಾಹನಗಳಿಗೆ ದರ ಎಷ್ಟು ಹೆಚ್ಚಾಗಿದೆ?
ನಾಲ್ಕು ಚಕ್ರದ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು ಒಂದು ಪ್ರಯಾಣಕ್ಕೆ ರೂ.65, ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 95 ಹಾಗೂ ಮಾಸಿಕ ಪಾಸ್‌ಗೆ ₹1,885 ಶುಲ್ಕ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಗಳು ಈಗ ಒಂದೇ ಪ್ರಯಾಣಕ್ಕೆ ₹25 ಪಾವತಿಸಬೇಕಾಗಿದೆ. ಇನ್ನೂ ಲಾರಿ, ಮಲ್ಟಿ-ಆಕ್ಸಲ್ ವಾಹನಗಳು (MAV) ನಂತಹ ದೊಡ್ಡ ವಾಹನಗಳಿಗೆ, ದರಗಳು ಇದಕ್ಕಿಂತಲೂ ಹೆಚ್ಚಾಗಿವೆ. ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 ರೂಪಾಯಿ ಹಾಗೂ ಮಾಸಿಕ ಪಾಸ್‌ಗಳಿಗೆ ₹5,275 ಶುಲ್ಕ ವಿಧಿಸಲಾಗುತ್ತದೆ. ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ. ಮಾಸಿಕ ಪಾಸ್ ಬೇಕಾದರೆ 10,550 ರೂಪಾಯಿ ಟೋಲ್‌ಗೆ ಕಟ್ಟಬೇಕಿದೆ.
ಹೆದ್ದಾರಿ ಟೋಲ್ ದರ ಪರಿಷ್ಕರಣೆ
ಬೆಂಗಳೂರಿನಿಂದ 32 ಕಿ.ಮೀ ದೂರ ಅತ್ತಿಬೆಲೆ ಬಳಿ ಇರುವ ಪ್ಲಾಜಾದಲ್ಲಿ, ನಾಲ್ಕು ಚಕ್ರದ ವಾಹನಗಳು ಮತ್ತು ದೊಡ್ಡ ವಾಹನಗಳಿಗೆ ಮಾತ್ರ ಟೋಲ್‌ಗಳು ವಿಧಿಸಲಾಗುತ್ತದೆ. ಇಲ್ಲಿ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ಮುಂದುವರೆದಿದೆ. ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂಪಾಯಿ, ಮಾಸಿಕ ಪಾಸ್‌ಗೆ 1,130 ರೂಪಾಯಿ ಇದೆ. ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ. ತಿಂಗಳ ಪಾಸ್‌ಗೆ 7,915 ರೂಪಾಯಿ ಕಟ್ಟಬೇಕಾಗುತ್ತದೆ.
ಈ ಟೋಲ್ ದರ ಹೆಚ್ಚಳಕ್ಕೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಅಗತ್ಯವಸ್ತುಗಳ ದರ ಏರಿಕೆ ಆಗಿದೆ. ಈ ಮಧ್ಯೆ ಹೀಗೆ ದರ ಪರಿಷ್ಕರಣೆ ಮಾಡಿದರೆ ನಿತ್ಯ ಓಡಾಡುವವರಿಗೆ ಆರ್ಥಿಕ ತೊಂದರೆ ಆಗುತ್ತದೆ ಎಂದಿದ್ದಾರೆ. ದರ ಏರಿಕೆ ನಿರ್ಧಾರವನ್ನು ಪಶ್ನಿಸಿದ್ದಾರೆ.












Click it and Unblock the Notifications