Vote-A-Thon: ಮತದಾನ ಹೆಚ್ಚಳಕ್ಕೆ ಬಿಬಿಎಂಪಿಯಿಂದ ವೋಟ್-ಎ-ಥಾನ್ ಸ್ಪರ್ಧೆ ಆಯೋಜನೆ, ನೀವು ರೀಲ್ಸ-ವಿಡಿಯೋ ಕಳುಹಿಸಿ
ಬೆಂಗಳೂರು, ಏಪ್ರಿಲ್ 17: ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮತದಾನ ಆಗುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಶ್ರಮಿಸುತ್ತಿದೆ. ಇದೀಗ ಪಾಲಿಕೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಮೊಬೈಲ್‌ಗಳಲ್ಲಿ ಪೋಸ್ಟರ್, ಸ್ಲೋಗನ್ ರಚನೆ ಮಾಡುವವರು ಸೇರಿದಂತೆ ರೀಲ್ಸ್ ಸ್ಟಾರ್ಸ್‌ಗಳು ಮತದಾನ ಜಾಗೃತಿ ಕುರಿತು ವಿಡಿಯೋ-ರೀಲ್ಸ್‌ಗಳನ್ನು ಹಂಚಿಕೊಳ್ಳಬಹುದು. ನಿಮ್ಮ ವಿಡಿಯೋ ಜೊತೆಗೆ ನೀವು ಸಹ ಈ ಚುನಾವಣೆ ಸಂದರ್ಭದಲ್ಲಿ ಫೇಮಸ್ ಆಗುತ್ತಿದೆ. ಅದಕ್ಕಾಗಿ ಏನು ಮಾಡಬೇಕು, ಎಲ್ಲಿಗೆ ವಿಡಿಯೋ ಕಳುಹಿಸಬೇಕೆಂದು ಇಲ್ಲಿ ತಿಳಿಯಿರಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದಲ್ಲಿ ಅರ್ಹರೆಲ್ಲರು ಮತದಾನ ಮಾಡುವಂತೆ ಮಾಡಲು ನೂತನವಾಗಿ 'ವೋಟ್-ಎ-ಥಾನ್' (VOTE-A-THON) ಸ್ಪರ್ಧೆಯನ್ನು ಏರ್ಪಡಿಸಿದೆ.
ಬೆಂಗಳೂರಿನ ಜನತೆ ಚುನಾವಣೆ ಕುರಿತು ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡುವ 'ವೋಟ್-ಎ-ಥಾನ್ ಸ್ಪರ್ಧೆ' ಗೆ ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಸೋಮವಾರ ಚಾಲನೆ ನೀಡಿದರು.
ಈ ವಿಳಾಸಕ್ಕೆ ರೀಲ್ಸ್-ಪೋಸ್ಟರ್-ಸ್ಲೋಗನ್ ರವಾನಿಸಿ
ವೋಟ್-ಎ-ಥಾನ್ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17 ರಿಂದ ಏಪ್ರಿಲ್ 30 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕ್ರಿಯಾತ್ಮಕ ಆಲೋಚನೆಗಳ ಮೂಲಕ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡಿ ಹ್ಯಾಶ್ ಟ್ಯಾಗ್(#Vote-A-Thon) ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಥವಾ ಇ-ಮೇಲ್ ಐಡಿ [email protected] ಗೆ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಮಾಡಿರುವವರು ಏಪ್ರಿಲ್ 30 ರೊಳಗಾಗಿ ಕಳುಹಿಸಬೇಕು ಎಂದು ಅವರು ಸ್ಫರ್ಧೆ ಕುರಿತು ಮಾಹಿತಿ ನೀಡಿದರು.

ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಾಗೂ ಪಾಲಿಕೆ ವತಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ವಿವಿಧೆಡೆ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದೀಗ ವೋಟ್-ಎ-ಥಾನ್ ಎಂಬ ವಿನೂತನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವಿಡಿಯೋ-ರೀಲ್ಸ್ ಹೇಗಿರಬೇಕು?
ಕ್ರಿಯಾತ್ಮಕವಾಗಿ ರಚಿಸಿದ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳಿಗೆ ನಗದು ಬಹುಮಾನ, ಪ್ರಮಾಣ ಮತ್ರ ಹಾಗೂ ಇನ್ನಿತ್ಯಾದಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು. ವೊಟ್-ಎ-ಥಾನ್ ಸ್ಪರ್ಧೆಯ ಮೂಲಕ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಲ್ಲಿ ಉತ್ಸಾಹವನ್ನು ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಜಾಗೃತಿ
ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಜಯನಗರ ಹಾಗೂ ಡಾಲರ್ಸ್ ಕಾಲೋನಿಯ ಸುತ್ತಮುತ್ತ ವಸತಿ ಸಮುಚ್ಚಯಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಬಿಬಿಎಂಪಿ ನಡೆಸಿತು. ಪ್ರಸಕ್ತ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಅಧಿಕಾರಿಗಳು ಅರಿವು ಮೂಡಿಸಿದರು.
ಬಿಬಿಎಂಪಿ ಪೂರ್ವ ವಲಯ ಆಯುಕ್ತರಾದ ಪಿ.ಎನ್. ರವೀಂದ್ರ ಅವರ ನೇತೃತ್ವದಲ್ಲಿ ಸಂಜಯ್ ನಗರದ ಫೆಬೆಲ್ ಬೇ ಅಪಾರ್ಟ್‌ಮೆಂಟ್, ಸ್ಟರ್ಲಿಂಗ್ ಅಪಾರ್ಟ್‌ಮೆಂಟ್, ಆಂಡ್ರಿಯಾ ಅಪಾರ್ಟ್‌ಮೆಂಟ್ ಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಲ್ಲಿ ಮತದಾನ ಮಹತ್ವ ತಿಳಿಸಿದರು. ತಪ್ಪದೇ ಮೇ 10ರಂದು ಮತದಾನ ಮಾಡುವಂತೆ ಉತ್ತೇಜಿಸಿದರು.












Click it and Unblock the Notifications