ದೇವನಹಳ್ಳಿ ಕಾಲೇಜಿನಲ್ಲಿ ರ‍್ಯಾಗಿಂಗ್; ರಸ್ತೆಯಲ್ಲೇ ಬಡಿದಾಡಿಕೊಂಡ 23 ವಿದ್ಯಾರ್ಥಿಗಳು, ಎಫ್‌ಐಆರ್ ದಾಖಲು
ಹೊರ ರಾಜ್ಯಗಳಿಂದ ಬಂದು ಇಲ್ಲಿನ ಕಾಲೇಜುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಪುಂಡಾಟ ಮೆರೆದಿರುವ ಘಟನೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ರಾಜಾರೋಷವಾಗಿ ರಸ್ತೆಗಳಲ್ಲೇ ಪರಸ್ಪರ ಬಡಿದಾಡಿಕೊಂಡಿದ್ದು, ರ‍್ಯಾಗಿಂಗ್ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಉತ್ತರ ಪೂರ್ವ ವಿಭಾಗದ ದೇವನಹಳ್ಳಿ ಪೊಲೀಸರು ಇಲ್ಲಿನ ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ 23 ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್, ಹಲ್ಲೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಕೇರಳ ಸೇರಿದಂತೆ ಹೊರ ರಾಜ್ಯದ ವಿದ್ಯಾರ್ಥಿಗಳೇ ತುಂಬಿ ತುಳುಕಾಡುತ್ತಿದ್ದು, ದಿನೇ ದಿನೇ ವಿದ್ಯಾರ್ಥಿಗಳ ಪುಂಡಾಟ ಮಿತಿ ಮೀರಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಜನವರಿ 14ರಂದು ರ‍್ಯಾಗಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆಯು, ಜನವರಿ 15ರ ಸಂಜೆ ಕಾಲೇಜಿನ ಹೊರಗಿನ ಬೈಚಾಪುರ ಮುಖ್ಯರಸ್ತೆಯಲ್ಲಿ ಗುಂಪು ಸೇರಿ ಪರಸ್ಪರ ಬಡಿದಾಡಿಕೊಂಡಿರುವುದು ಮಾತ್ರವಲ್ಲದೆ, ಆಯುಧ ಬಳಸಿ ನಡೆಸಿದ ಹಲ್ಲೆ ಯತ್ನ ನಡೆಸುವ ಮಟ್ಟಕ್ಕೂ ತಲುಪಿದೆ. ಈ ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜ್ಯೂನಿಯರ್‌ಗಳಿಗೆ ರ‍್ಯಾಗಿಂಗ್
ಕಾಲೇಜಿನ ಎಂಐಟಿ, ನರ್ಸಿಂಗ್, ಫಾರ್ಮಸಿ ಮತ್ತು ಡಿಪ್ಲೊಮಾ ವಿಭಾಗದ ಸೀನಿಯರ್ ವಿದ್ಯಾರ್ಥಿಗಳು ಪ್ರಥಮ ವರ್ಷದ ಬಿಬಿಎ ಹಾಗೂ ಬಿಸಿಎ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದು, ಸಿಗರೇಟ್, ಮದ್ಯ ಖರೀದಿಸಲು ಬಲವಂತಪಡಿಸುವುದು, ಪುಸ್ತಕ ಹೊರುವಂತೆ ಮಾಡುವುದು ಸೇರಿದಂತೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಇದಕ್ಕೆ ಒಪ್ಪದ ಕಾರಣ ವಿದ್ಯಾರ್ಥಿಗಳಾದ ಸುಶೀಲ್ ಕುಮಾರ್ ಮತ್ತು ಹರಿಕೃಷ್ಣ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.
ಈ ಬಗ್ಗೆ ಪರಿಹಾರಕ್ಕಾಗಿ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥ ಮಿಧುನ್ ಮಾಧವನ್ ಹಾಗೂ ಐವರು ವಿದ್ಯಾರ್ಥಿಗಳು ಜನವರಿ 15ರ ರಾತ್ರಿ ಬೈಚಾಪುರ ರಸ್ತೆ ಬಳಿಯ ಟೀ ಸ್ಟಾಲ್ ಬಳಿ ಆ ಸೀನಿಯರ್‌ಗಳು ಎದುರಾದಾಗ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಅಲ್ಲಿ ಗುಂಪು ಕಟ್ಟಿಕೊಂಡು ಕಬ್ಬಿಣದ ರಾಡ್, ಮರದ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ ಆರೋಪವಿದೆ. ಈ ವೇಳೆ ಪ್ರಮುಖ ಆರೋಪಿ ಬಿಲಾಲ್, ಸುಮಾರು 32 ಗ್ರಾಂ ಚಿನ್ನದ ಸರ ದೋಚಿದ ಆರೋಪವೂ ಕೇಳಿಬಂದಿದ್ದು, ಈ ಗಲಾಟೆಯಲ್ಲಿ ಒಂದು ಕಾರು ಧ್ವಂಸವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಲಂಗಳೊಂದಿಗೆ ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ರ‍್ಯಾಗಿಂಗ್ ನಿಷೇಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಲಾಲ್, ನೌಶಾದ್ ಮತ್ತು ಅಫ್ಸಲ್ ಎಂಬ ಪ್ರಮುಖ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಹಲ್ಲೆಯಲ್ಲಿ ಮಿಧುನ್ ಮಾಧವನ್, ಕೃಷ್ಣಜೀತ್ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಕೇರಳ ವಿದ್ಯಾರ್ಥಿಗಳಿಂದ ಪುಂಡಾಟ
ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವವರ ಪೈಕಿ ಕೇರಳ ಮೂಲದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಲೇಜು ಮುಗಿದ ನಂತರ ಇಲ್ಲಿ ಬೈಚಾಪುರ ರಸ್ತೆಯಲ್ಲಿ ಬೈಕ್‌ಗಳ ವ್ಹೀಲಿಂಗ್ ಮಾಡುವುದು, ಅತಿ ವೇಗದ ಚಾಲನೆ, ನೋಂದಣಿ ಸಂಖ್ಯೆ ಇಲ್ಲದ ಬೈಕ್‌ಗಳಲ್ಲಿ ಪುಂಡಾಟ ಮೆರೆಯುವುದು, ಇಲ್ಲಿನ ಮಳಿಗೆಗಳ ಬಳಿ ಗುಂಪು ಸೇರಿ ಆತಂಕ ಸೃಷ್ಟಿಸುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿ ಪೊಲೀಸರು ಆಗಾಗ ಈ ಕಾಲೇಜು ಸುತ್ತಮುತ್ತ ಬೀಟ್ ಬರುವ ಮೂಲಕ ಪುಂಡ ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications