ಯುವತಿಯರಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಅರಕಲಗೂಡಿನ ವ್ಯಕ್ತಿ ಸೆರೆ
ಬೆಂಗಳೂರು ಫೆ. 18: ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುತ್ತಿದ್ದ ಅಲಕಲಗೂಡು ಮೂಲದ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಅರಕಲಗೂಡು ಮೂಲದ ಹರೀಶ್ ಬಂಧಿತ ಆರೋಪಿ. ಈತ ಫೇಸ್‌ಬುಕ್ ಮತ್ತು ವಾಟ್ಸಪ್ ಮೂಲಕ ಅಪರಿಚಿತ ಯುವತಿಯರ ನಂಬರ್ ಪಡೆದು ಅವರಿಗೆ ಅಶ್ಲೀಲ ವಿಡಿಯೋ ರವಾನಿಸುತ್ತಿದ್ದ. ಈ ಕುರಿತು ಮಹಿಳೆಯೊಬ್ಬರು ದೂರು ನೀಡಿದ್ದರು. ದೂರನ್ನಾಧರಿಸಿ ತನಿಖೆ ನಡೆಸಿದ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಯೋಗೀಶ್ ಮತ್ತು ತಂಡ ಆರೋಪಿ ಹರೀಶ್‌ನನ್ನು ಸಿಡಿಆರ್ ಕರೆ ಆಧರಿಸಿ ಬಂಧಿಸಿದ್ದಾರೆ. ಬಂಧಿತನ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಹತ್ತಕ್ಕೂ ಹೆಚ್ಚು ಯುವತಿಯರಿಗೆ ಅಶ್ಲೀಲ ವಿಡಿಯೋ ಮತ್ತು ಫೋಟೋ ರವಾನಿಸಿರುವ ವಿಚಾರ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಜೆಸಿಬಿ ಚಾಲಕನಾಗಿದ್ದು, ಈತನ ವಿರುದ್ಧ ಸೈಬರ್ ಅಪರಾಧದಡಿ ಕೇಸು ದಾಖಲಿಸಲಾಗಿದೆ.
ಅಶ್ಲೀಲ ವಿಡಿಯೋ ಮತ್ತು ಪೋಟೋ ರವಾನಿಸುವುದು ಸೈಬರ್ ಅಪರಾಧ. ಈ ರೀತಿಯ ಸಂದೇಶಗಳನ್ನು ರವಾನಿಸಿದಲ್ಲಿ, ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.

ಗಾಂಜಾ ಸೇವನೆ ಹಿಂದೂಗಳ ಹಕ್ಕು: ಪುನೀತ್ ಕೆರೆಹಳ್ಳಿ ವಿರುದ್ಧ ದೂರು
ಗಾಂಜಾ ಸೇದುವುದು ನಮ್ಮ ಹಕ್ಕು. ಅದು ಹಿಂದೂಗಳ ಸಂಪ್ರದಾಯ ಎಂದು ಪುನೀತ್ ಕೆರೆಹಳ್ಳಿ ಎಂಬಾತ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವಾದಾತ್ಮಕ ಹೇಳಿಕೆ ನೀಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಹೇಳಿಕೆ ಸಂಬಂಧದ ವಿಡಿಯೋವನ್ನು ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಅವರಿಗೆ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಕಳುಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವಕರಿಗೆ ಗಾಂಜಾ ಸೇವನೆ ಮಾಡುವಂತೆ ಪ್ರಚೋದಿಸುವ ಹೇಳಿಕೆ ಇದಾಗಿದ್ದು, ಈ ಸಂಬಂಧ ವಿಡಿಯೋ ಸಂದೇಶವನ್ನು ಪೊಲೀಸ್ ಆಯುಕ್ತರಿಗೆ ರವಾನಿಸಿದ್ದೇನೆ ಎಂದು ರಮೇಶ್ ಹೇಳಿದ್ದಾರೆ.
ಯುವಜನ ಮಾದಕ ವಸ್ತು ಉಪಯೋಗಿಸಿ ಅವರ ಜೀವನ ದಿಕ್ಕೆಟ್ಟುಹೋಗುತ್ತಿದೆ. ಇಂತಹ ವಿಡಿಯೋಗಳಿಂದ ಗಾಂಜಾ ಸೇವನೆ ಪ್ರಚೋದಿಸುವಂತೆ ಮಾಡುತ್ತಿದೆ. ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.












Click it and Unblock the Notifications