ನಿವೇಶನ ಕೊಡಿಸುವ ಹೆಸರಿನಲ್ಲಿ ವಂಚನೆ: ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಸೆರೆ
ಬೆಂಗಳೂರು, ನ. 10: ನಿವೇಶನ ಕೊಡಿಸುವುದಾಗಿ ನಂಬಿಸಿ ಹಲವರಿಗೆ ವಂಚನೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಟರಾಜ್ ಬಂಧನ, ಸೆಕ್ಯುರಿಟಿ ಸಿಬ್ಬಂದಿಯಿಂದಲೇ ಅಪಾರ್ಟ್‌ಮೆಂಟ್ ನಿವಾಸಿ ಬರ್ಬರ ಹತ್ಯೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಗೆ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದ ಗ್ಯಾಂಗ್ ಅಂದರ್!
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೆರೆ:
ಕಡಿಮೆ ಬೆಲೆಗೆ ಸಂಘದ ವತಿಯಿಂದ ನಿವೇಶನ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚನೆ ಮಾಡಿರುವ ಅರೋಪ ಸಂಬಂಧ ಸರ್ಕಾರಿ 'ಡಿ' ಗ್ರೂಪ್ ನೌಕರರ ಸಂಘದ ಅಧ್ಯಕ್ಷ ನಟರಾಜ್‌ನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ನಿವೇಶನ ಕೊಡಿಸುವುದಾಗಿ ಹೇಳಿ ಹಲವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ. ಡಿ ಗ್ರೂಪ್ ಲೇಔಟ್‌ನಲ್ಲಿಯೇ ನಿವೇಶನ ಕೊಡುವ ಆಸೆ ಹುಟ್ಟಿಸಿ ಹಣ ಪಡೆದು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದು, ಈ ಕುರಿತು ದೂರುಗಳು ದಾಖಲಾಗಿವೆ. ದೂರುಗಳ ಪ್ರಾಥಮಿಕ ವಿಚಾರಣೆ ನಡೆಸಿದ್ದ ಅನ್ನಪೂರ್ಣೇಶ್ವರಿನಗರ ಪೊಲೀಸರು ವಿಚಾರಣೆ ನಡೆಸಿದಾಗ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ನಟರಾಜ್ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಟರಾಜ್ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿರುದ್ಯೋಗಿಗಳಿಗೆ ವಂಚನೆ:
ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ಗ್ಯಾಂಗ್‌ನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ನಿರುದ್ಯೋಗಿಗಳನ್ನು ಸಂಪರ್ಕಿಸಿ ಉದ್ಯೋಗ ಸಿಕ್ಕಿದೆ ಎಂದು ಪ್ರತಿಷ್ಠಿತ ಖಾಸಗಿ ಕಂಪನಿಗಳಿಂದ ಮತ್ತು ಸರ್ಕಾರಿ ಕೆಲಸದ ಕುರಿತು ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸುತ್ತಿದ್ದರು. ಹಣ ಪಡೆದು ಸರ್ಟಿಫಿಕೇಟ್ ನೀಡುವ ವೇಳೆ ಪೊಲೀಸರ ಸೋಗಿನಲ್ಲಿ ಗ್ಯಾಂಗ್‌ನ ಸದಸ್ಯರೇ ದಾಳಿ ನಡೆಸಿ ನಿರುದ್ಯೋಗಿಗಳನ್ನೇ ಹೆದರಿಸಿ ಹಣ ಪಡೆದು ವಾಪಸು ಕಳಿಸುತ್ತಿದ್ದರು. ಹೀಗೆ ಲಕ್ಷ ಲಕ್ಷ ಹಣ ಪಡೆದು ನೂರಾರು ಮಂದಿಗೆ ಗ್ಯಾಂಗ್ ವಂಚನೆ ಮಾಡಿದೆ.
ಅಜಯ್ ಕುಮಾರ್, ಅಂಜನಾಮೂರ್ತಿ, ರವಿಚಂದ್ರ, ಮುರುಗೇಶ್, ಮುನಿರಾಜು ಮತ್ತು ಕುಮಾರಸ್ವಾಮಿ ಬಂಧಿತ ಆರೋಪಿಗಳು. ಕಳೆದ ವಾರ ಯುವಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹತ್ತು ಲಕ್ಷ ರೂ. ಹಣ ಪಡೆದಿದ್ದರು. ಹಣ ನೀಡುವ ವೇಳೆ ಪೊಲೀಸರಂತೆ ದಾಳಿ ನಡೆಸಿದ ಗ್ಯಾಂಗ್‌ನ ಹಲವು ಸದಸ್ಯರು ಹಣ ಕಸಿದುಕೊಂಡು ಪರಾರಿಯಾಗಿದ್ದರು. ನಗದು ಹಣ ಹೊಂದಿಸಿದ್ದರಿಂದ ದೂರು ನೀಡಿದರೆ ಸಮಸ್ಯೆ ಆಗುತ್ತದೆ ಎಂದು ಸಂತ್ರಸ್ತ ಯುವಕ ದೂರು ನೀಡಲು ಹಿಂದೇಟು ಹಾಕಿದ್ದ. ಮನೆಯವರ ಸಲಹೆ ಮೇರೆಗೆ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಎರಡು ವಾಕಿಟಾಕಿ, ಎರಡು ಕಾರು, ಹತ್ತು ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಅನೇಕ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ್ದು, ಮೋಸ ಹೋದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಸೆಕ್ಯುರಿಟಿ ಗಾರ್ಡ್‌ನಿಂದ ಹತ್ಯೆ:
ಸೆಕ್ಯುರಿಟಿ ಸಿಬ್ಬಂದಿಯೇ ಅಪಾರ್ಟ್‌ಮೆಂಟ್ ನಿವಾಸಿಯನ್ನು ಹತ್ಯೆ ಮಾಡಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾಸ್ಕರ್ ರೆಡ್ಡಿ ಕೊಲೆಯಾದ ವ್ಯಕ್ತಿ. ಸೆಕ್ಯುರಿಟಿ ಗಾರ್ಡ್ ಬಸಂತ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿ. ಅಪಾರ್ಟ್‌ಮೆಂಟ್ ಶೇರ್ ಹೋಲ್ಡರ್ ಆಗಿದ್ದ ಭಾಸ್ಕರರೆಡ್ಡಿ, ಮದ್ಯಪಾನ ಮಾಡದಂತೆ ಸೆಕ್ಯುರಿಟಿ ಗಾರ್ಡ್ ಗೆ ಬೈದಿದ್ದರು. ಇದರಿಂದ ಸಿಟ್ಟಿಗೆದ್ದ ಬಸಂತ್ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ಭಾಸ್ಕರರೆಡ್ಡಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಎಚ್‌ಎಎಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.