ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತ ಯಾವೆಲ್ಲಾ ತಂಡಗಳ ಮೇಲೆ ಆಡಲಿದೆ?
Women's T20 World Cup 2026: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಟೂರ್ನಿಯು ಜೂನ್ 12ರಿಂದ ಅಧಿಕೃತವಾಗಿ ಆರಂಭಗೊಂಡಿದೆ. ಜುಲೈ 5ರ ವರೆಗೆ ನಡೆಯಲಿರುವ ಈ ಬೃಹತ್ ಟೂರ್ನಿಯಲ್ಲಿ ವಿಶ್ವದ ಬಲಿಷ್ಠ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಹಾಗಾದ್ರೆ ಲೀಗ್ ಹಂತದಲ್ಲಿ ಭಾರತವು ಯಾವೆಲ್ಲಾ ತಂಡಗಳ ವಿರುದ್ಧ ಯಾವ್ಯಾವಾಗ ಆಡಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಹರ್ಮನ್‌ಪ್ರೀತ್ ಕೌರ್ ಅವರ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಚೊಚ್ಚಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಸ್ಮೃತಿ ಮಂದಾನ ಅವರು ತಂಡದ ಉಪನಾಯಕಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟೀಂಡಿಯಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹಾಗೂ ಎಲ್ಲಿ ವೀಕ್ಷಣೆ ಮಾಡಬಹುದು ಎಂಬ ವಿವರ ಇಲ್ಲಿದೆ.

ಟೀಮ್ ಇಂಡಿಯಾ ಯಾವೆಲ್ಲಾ ತಂಡಗಳ ವಿರುದ್ಧ ಆಡಲಿದೆ?
ಮಹಿಳಾ ಟಿ20 ವಿಶ್ವಕಪ್‌ನ ಈ ಬಾರಿಯ ಆವೃತ್ತಿಯು ಹಿಂದೆಂದಿಗಿಂತಲೂ ರೋಮಾಂಚನಕಾರಿ ಆಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಈ ತಂಡಗಳನ್ನು ತಲಾ 6ರಂತೆ ಎರಡು ಪ್ರತ್ಯೇಕ ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಗುಂಪು 1ರಲ್ಲಿ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಇದ್ದು, ಗುಂಪು 2ರಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿವೆ.
ಈ ಟೂರ್ನಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 24 ದಿನಗಳ ಕಾಲ ನಡೆಯಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಮುಕ್ತಾಯದ ನಂತರ ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಜುಲೈ 5ರಂದು ಲಂಡನ್‌ನ ವಿಶ್ವವಿಖ್ಯಾತ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ನಡೆಯಲಿದೆ.
ಭಾರತ ತಂಡದ ಲೀಗ್ ಪಂದ್ಯಗಳ ವೇಳಾಪಟ್ಟಿ
ಭಾರತ ತಂಡವು ಗುಂಪು 1ರಲ್ಲಿ ಸ್ಥಾನ ಪಡೆದಿದ್ದು, ಲೀಗ್ ಹಂತದಲ್ಲಿ ಐದು ಬಲಿಷ್ಠ ತಂಡಗಳ ವಿರುದ್ಧ ಸೆಣಸಲಿದೆ. ಭಾರತವು ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಈ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ತಿಳಿಯಿರಿ.
ಭಾರತದ ಲೀಗ್ ಪಂದ್ಯಗಳ ಸ್ಥಳ, ಸಮಯಗಳ ವಿವರ
* ಜೂನ್ 14, ಭಾನುವಾರ: ಭಾರತ Vs ಪಾಕಿಸ್ತಾನ (ಎಡ್ಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣ, ಬರ್ಮಿಂಗ್‌ಹ್ಯಾಮ್) - ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ)
* ಜೂನ್ 17, ಬುಧವಾರ: ಭಾರತ Vs ನೆದರ್ಲ್ಯಾಂಡ್ಸ್ (ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣ, ಲೀಡ್ಸ್) - ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ)
ಜೂನ್ 21, ಭಾನುವಾರ: ಭಾರತ Vs ದಕ್ಷಿಣ ಆಫ್ರಿಕಾ (ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣ, ಮ್ಯಾಂಚೆಸ್ಟರ್) - ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ)
ಜೂನ್ 25, ಗುರುವಾರ: ಭಾರತ Vs ಬಾಂಗ್ಲಾದೇಶ (ಮ್ಯಾಂಚೆಸ್ಟರ್) - ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ)
ಜೂನ್ 28, ಭಾನುವಾರ: ಭಾರತ Vs ಆಸ್ಟ್ರೇಲಿಯಾ (ಲಾರ್ಡ್ಸ್, ಲಂಡನ್) - ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ)
ನಾಕೌಟ್ ಹಂತದ ಪಂದ್ಯಗಳು
* ಮೊದಲ ಸೆಮಿಫೈನಲ್: ಜೂನ್ 30 (ದಿ ಓವಲ್, ಲಂಡನ್) - ಸಂಜೆ 7 ಗಂಟೆಗೆ
* ಎರಡನೇ ಸೆಮಿಫೈನಲ್: ಜುಲೈ 2 (ದಿ ಓವಲ್, ಲಂಡನ್) - ರಾತ್ರಿ 11 ಗಂಟೆಗೆ
* ಫೈನಲ್ ಪಂದ್ಯ: ಜುಲೈ 5 (ಲಾರ್ಡ್ಸ್, ಲಂಡನ್) - ರಾತ್ರಿ 7:30 ಗಂಟೆಗೆ
ಭಾರತದಲ್ಲಿ ನೇರ ಪ್ರಸಾರವನ್ನು ಎಲ್ಲಿ ವೀಕ್ಷಣೆ ಮಾಡಬಹುದು?
* ಭಾರತದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಗಳನ್ನು ಟಿವಿ ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ನೇರವಾಗಿ ವೀಕ್ಷಿಸಬಹುದಾಗಿದೆ.
* ದೂರದರ್ಶನ: ಭಾರತದಲ್ಲಿ ಈ ಟೂರ್ನಿಯ ಅಧಿಕೃತ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network) ಹೊಂದಿದೆ. ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ ಎಚ್‌ಡಿ ಹಾಗೂ ವಿವಿಧ ಪ್ರಾದೇಶಿಕ ಭಾಷೆಗಳ ವಾಹಿನಿಗಳಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು.
* ಡಿಜಿಟಲ್ ಮೊಬೈಲ್‌ನಲ್ಲಿ ವೀಕ್ಷಿಸಲು ಇಚ್ಛಿಸುವವರಿಗಾಗಿ ಜಿಯೋ ಹಾಟ್‌ಸ್ಟಾರ್ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಪಂದ್ಯಗಳ ನೇರ ಪ್ರಸಾರ ಲಭ್ಯವಿರಲಿದೆ.
ಒಟ್ಟಿನಲ್ಲಿ ಹೇಳುವುದಾದರೆ ಭಾರತೀಯ ಮಹಿಳಾ ತಂಡವು ಈ ಹಿಂದೆ ನಡೆದ ಟಿ20 ವಿಶ್ವಕಪ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, 2020ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಈ ಬಾರಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗವನ್ನು ಹೊಂದಿರುವ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಕಣಕ್ಕಿಳಿಯುತ್ತಿದೆ. ಈ ಕ್ಷಣಕ್ಕಾಗಿ ಬರೀ ಭಾರತದ ಅಷ್ಟೇ ಅಲ್ಲದೆ, ವಿಶ್ವವೇ ಕಾರತದಿಂದ ಕಾಯುತ್ತಿದೆ.












Click it and Unblock the Notifications